ಬೆಂಗಳೂರಿನಲ್ಲಿ ಕ್ಷೇತ್ರ ಪ್ರದಕ್ಷಿಣೆ ಹಾಕಿದ ಸಚಿವ ಅಶ್ವಥ್ ನಾರಾಯಣ
ಬೆಂಗಳೂರು, ಸೆಪ್ಟೆಂಬರ್ 03: ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತ್ತಿಕೆರೆ ಸರ್ಕಾರಿ ಶಾಲೆಯ ಸುತ್ತಮುತ್ತಲಿನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಪಾದಯಾತ್ರೆ ನಡೆಸಿದರು.
ತಮ್ಮ ಕ್ಷೇತ್ರದ ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳ ಜೊತೆಗೆ ಜನರ ಮನೆಬಾಗಿಲಿಗೆ ತೆರಳಿದ ಸಚಿವರು, ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿದರು. ಇದೇ ವೇಳೆ ಜೊತೆಗಿದ್ದ ಅಧಿಕಾರಿಗಳಿಗೆ ಜನರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಮಲ್ಲೇಶ್ವರಂ ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ, ಶನಿವಾರ ತಮ್ಮ ಕ್ಷೇತ್ರವ್ಯಾಪ್ತಿಯ ಮತ್ತೀಕೆರೆಯ ಸರ್ಕಾರಿ ಶಾಲೆ ಸುತ್ತಮುತ್ತ ಪಾದಯಾತ್ರೆ ನಡೆಸಿದರು. ಬಡಾವಣೆಯ ಕೆಲವೆಡೆ ಪ್ರತಿಷ್ಠಾಪಿಸಿರುವ ಗಣೇಶ ಮಂಟಪಗಳ ಬಳಿಗೂ ತೆರಳಿದ ಸಚಿವರಿಗೆ ಆರತಿ ಬೆಳಗಲಾಯಿತು.

ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸುವಂತೆ ಕರೆ:
ಬಡವರು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗಳಿಗೆ ಕಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮವೂ ಇದೆ. ಇಲ್ಲಿ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ಕೊಡಲಾಗುತ್ತಿದೆ ಎಂದು ಸಚಿವರೇ ಕೆಲವು ಕುಟುಂಬಗಳಿಗೆ ಖುದ್ದಾಗಿ ಹೇಳಿದರು.

ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬ ಅರ್ಹರು ಬಿಪಿಎಲ್ ಪಡಿತರ ಚೀಟಿಗಳನ್ನು ಮಾಡಿಸಿಕೊಳ್ಳಬೇಕು. ಇದುವರೆಗೂ ಮಾಡಿಸಿಕೊಳ್ಳದೆ ಇದ್ದರೆ ಅಂತಹವರು ಕೂಡಲೇ ಅರ್ಜಿ ಹಾಕಬೇಕು. ಇಂಥವರಿಗೆ ತ್ವರಿತವಾಗಿ ಬಿಪಿಎಲ್ ಕಾರ್ಡ್ ಒದಗಿಸಲಾಗುವುದು. ಇದರಿಂದ ಆಹಾರ ಭದ್ರತೆ ಸಿಗುತ್ತದೆ ಎಂದು ಸಚಿವರು ಮನದಟ್ಟು ಮಾಡಿಕೊಟ್ಟರು.












Click it and Unblock the Notifications