ಮುಷ್ಕರ ಹಿಂಪಡೆದ ಮದ್ಯ ಮಾರಾಟಗಾರರ ಸಂಘ: ಮನವೊಲಿಸಿ ಸಿಎಂ ಸಿದ್ದರಾಮಯ್ಯ ಕೊಟ್ಟ ಭರವಸೆಗಳೇನು?
ಬೆಂಗಳೂರು, ನವೆಂಬರ್ 19: ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ ತಾವು ದೂರು ಕೊಟ್ಟಿಲ್ಲ. ಈ ಬಗ್ಗೆ ಸುಳ್ಳು ಹಬ್ಬಿಸಲಾಗಿದೆ. ದೂರು ಕೊಟ್ಟವರಿಗೂ ನಮಗೂ ಸಂಬಂಧವೇ ಇಲ್ಲ. ಈ ಬಗ್ಗೆ ಬೇಕಿದ್ದರೆ ಪರಿಶೀಲಿಸಿ, ತನಿಖೆ ನಡೆಸಬಹುದು ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಒಕ್ಕೋರಲಿನಿಂದ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅಬಕಾರಿ ಇಲಾಖೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಿಂದ ನಿರಂತರ ಕಿರುಕುಳ ಅನುಭವಿಸಿದ್ದೇವೆ. ಸಚಿವರಿಗೆ ಹಣ ನೀಡಬೇಕು ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಇದರ ವಿರುದ್ಧ ಮದ್ಯ ಮಾರಾಟಗಾರರ ಸಂಘ ಇದೇ ನವೆಂಬರ್ 20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಿ, ಮುಷ್ಕರಕ್ಕೆ ಕರೆ ನೀಡಿತ್ತು. ಇದೀಗ ತನ್ನ ನಿರ್ಧಾರ ಬದಲಿಸಿರುವುದಾಗಿ ಸಂಘವು ಮಾಹಿತಿ ನೀಡಿದೆ.

ಮದ್ಯ ಮಾರಾಟಗಾರರ ಸಂಘದವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿದರು. ಸರ್ಕಾರ ಅವರ ಮನವೊಲಿಸುವಲ್ಲಿ ಯಶಸ್ವಿಯಾದ ಬಳಿಕ ಸಂಘವು ಮುಷ್ಕರ ಹಿಂಪಡೆಯಿತು. ಇದೀಗ ಸಂಘವು ನಾವು ಯಾರ ಬಗ್ಗೆಯೂ ದೂರು ನೀಡಿಲ್ಲ. ಸದ್ಯ ನಾವು ಮುಷ್ಕರ ಹಿಂಪಡೆದಿದ್ದೇವೆ ಎಂದು ಅವರು ಒಕ್ಕೋರಲಿನಿಂದ ತಿಳಿಸಿದ್ದಾರೆ. ಜೊತೆಗೆ ಒಂದಷ್ಟು ಸಮಸ್ಯೆಗಳನ್ನು ಸಿಎಂಗೆ ಹೇಳಿಕೊಂಡಿದ್ದಾರೆ.
ಇದೇ ಸಭೆಯಲ್ಲಿ ರಾಜ್ಯ ಮದ್ಯ ಮಾರಾಟಗಾರರ ಸಂಘ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಒಂದಷ್ಟು ಭರವಸೆಗಳನ್ನು ನೀಡಿದ್ದಾರೆ. ಅವುಗಳ ಅಂಶಗಳು ಇಲ್ಲಿವೆ.
ಮದ್ಯ ಮಾರಾಟಗಾರರ ಸಂಘಕ್ಕೆ ಸಿಎಂ ಅಭಯ
* ಮದ್ಯ ಮಾರಾಟಗಾರರ ಬೇಡಿಕೆ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಿ, ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ.
* ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
* ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು.
* ಮದ್ಯಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗಿ ಸರ್ಕಾರಕ್ಕೆ ಆದಾಯ ಬರುವಂತೆ enforcement ಮಾಡಲಾಗುವುದು.
* ಅಧಿಕಾರಿಗಳು ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡದಂತೆ ನಿಗಾ ವಹಿಸಲು ಅಬಕಾರಿ ಆಯುಕ್ತರಿಗೆ ಸೂಚನೆ ನೀಡಿದ್ದೇನೆ.
* ಅಬಕಾರಿ ಇಲಾಖೆಯ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ.












Click it and Unblock the Notifications