Sub Registrar: ಸಬ್ ರಿಜಿಸ್ಟ್ರಾರ್‌ಗಳಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್: ಯಾಕೆ..?
ಬೆಂಗಳೂರು, ಮೇ 31: ನೋಂದಣಿ ಮಾಡಲು ತಗಾದೆ ತೆಗೆದು ನಿರಾಕರಿಸುವ ಸಬ್ ರಿಜಿಸ್ಟ್ರಾರ್‌ಗಳಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಅಲ್ಲದೇ, ಸಾಲಗಾರರ ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಅವರ ಆಸ್ತಿಯನ್ನು ಹರಾಜು ಮೂಲಕ ಖರೀದಿ ಮಾಡಿದವರಿಗೆ ನೋಂದಾವಣೆ ಮಾಡುವುದಕ್ಕೆ ನಿರಾಕರಿಸುವಂತಿಲ್ಲ ಎಂದು ಆದೇಶಿಸಿದೆ.

ಜೊತೆಗೆ ನೋಂದಣಿ ಕಾಯಿದೆ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಭರತ್ ಗೌಡ ಎಂಬುವರು ಬ್ಯಾಂಕ್‌ನ ಹರಾಜಿನ ಮೂಲಕ ವ್ಯಕ್ತಿಯೊಬ್ಬರಿಗೆ ಸೇರಿದ್ದ ಜಮೀನು ಖರೀದಿಸಿದ್ದು, ತಮ್ಮ ಹೆಸರಿಗೆ ನೋಂದಣಿ ಮಾಡಿಕೊಡದ ಉಪ ನೊಂದಣಾಧಿಕಾರಿಗಳ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ ಆದೇಶವೇನು?
ನೋಂದಣಿ ನಿಯಮಗಳು ಅಡಿಯಲ್ಲಿ ಯಾವುದೇ ಗೊಂದಲಗಳು ಇಲ್ಲವಾದಲ್ಲಿ ನೋಂದಣಿ ಮಾಡದೆ ನಿರಾಕರಿಸುವ ಅಧಿಕಾರವನ್ನು ಉಪನೋಂದಣಾಧಿಕಾರಿಗಳಿಗೆ ಇಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಅಲ್ಲದೇ ಈ ಕುರಿತಂತೆ ರಾಜ್ಯ ಸರ್ಕಾರ ಈ ಸಂಬಂಧ ನೋಂದಣಿ ನಿಯಮಗಳ ಕುರಿತಂತೆ ಸೂಕ್ತ ರೀತಿಯ ಸೂತ್ತೋಲೆ ಹೊರಡಿಸಬೇಕು ಎಂದು ಪೀಠ ಸಲಹೆ ನೀಡಿದೆ.
ಹಣಕಾಸು ಸ್ವತ್ತುಗಳು ಮತ್ತು ಭದ್ರತಾ ಹಿತಾಸಕ್ತ ಜಾರಿ ಕಾಯಿದೆ ೨೦೦೨ (ಸರ್ಫೇಸಿ ಕಾಯಿದೆ) ಸೆಕ್ಷನ್ ೨೬(ಇ) ಭದ್ರತಾ ಆಸಕ್ತಿ ನೋಂದಣಿಯ ನಂತರ ಜಾರಿಯಲ್ಲಿರುವ ಕಾನೂನಿಗಿಂತ ಸುರಕ್ಷಿತ ಸಾಲಗಾರರಿಗೆ ಆಧ್ಯತೆಯನ್ನು ಕಡ್ಡಾಯಗೊಳಿಸುತ್ತದೆ. ಸೆಕ್ಷನ್ ೩೫ ಪ್ರಕಾರ, ಸಧ್ಯಕ್ಕೆ ಜಾರಿಯಲ್ಲಿರುವ ಕಾನೂನಿನಲ್ಲಿ ಅಸಮಂಜಸವಾಗಿದ್ದರೂ ಈ ಕಾಯಿದೆ ಪರಿಣಾಮ ಭೀರಲಿದೆ. ಆದರೆ, ಈ ರೀತಿಯ ಪ್ರಕರಣಗಳಲ್ಲಿ ಸಾಲಗಾರನ ಹಕ್ಕು ನ್ಯಾಯಾಲಯ ಮಧ್ಯ ಪ್ರವೇಶಮಾಡಿ ಯಾವುದೇ ಆದೇಶ ಮಾಡದಿದ್ದಲ್ಲಿ ಅದನ್ನು ತಡೆಹಿಡಿಯಲಾಗದು.
ಪ್ರಸ್ತುತ ಪ್ರಕರಣದಲ್ಲಿ ನ್ಯಾಯಾಲಯ, ಅರೆ - ನ್ಯಾಯಾಲಯದ ಮುಂದೆ ಯಾವುದೇ ರೀತಿಯ ಪ್ರಕ್ರಿಯೆ ಆರಂಭಿಸಿಲ್ಲ. ಹಾಗಾಗಿ ಉಪನೋಂದಣಿ ನಿಯಮ ೧೭೧ರ ಅಡಿಯಲ್ಲಿ ಯಾವುದೇ ಉಲ್ಲಂಘನೆಯಾಗಿದ್ದಲ್ಲಿ ಮಾತ್ರ ನೋಂದಣಿಗೆ ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಸಬ್ ರಿಜಿಸ್ಟ್ರಾರ್ ಅವರಿಗೆ ನೋಂದಣಿ ನಿರಾಕರಸಿಸುವ ಅಧಿಕಾರ ಹೊಂದಿರುವುದಿಲ್ಲ. ಆದ್ದರಿಂದ ತಕ್ಷಣ ಬಿಡ್‌ದಾರರಿಗೆ ಹೆಸರಿಗೆ ಪ್ರಸ್ತಾವಿತ ಜಮೀನನ್ನು ನೋಂದಣಿ ಮಾಡಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಬೆಂಗಳೂರು ನಗರದ ವಿಲ್ಸ್‌ನ್ ಗಾರ್ಡನ್‌ನ ಹೊಂಬೇಗೌಡನಗರದಲ್ಲಿ ೬೦೦೦ ಚದರ ಅಡಿಯ ಅಡಮಾನ ಆಸ್ತಿಗೆ ಸಂಬಂಧಿಸಿದಂತೆ ೨೦೨೨ರ ಮಾರ್ಚ್ ತಿಂಗಳಲ್ಲಿ ಕೆನರಾ ಬ್ಯಾಂಕ್ ನಡೆಸಿದ ಹರಾಜಿನಲ್ಲಿ ಅರ್ಜಿದಾರರು ಯಶಸ್ವಿ ಬಿಡ್‌ದಾರರಾಗಿದ್ದರು. ಹರಾಜಿನ ಎಲ್ಲ ಪ್ರಕ್ರಿಯೆಗಳು ಮುಗಿತ ನಂತರ ೨೦೨೨ರ ಸೆಪ್ಟಂಬರ್ ೩೦ರಂದು ಅವರ ಪರವಾಗಿ ಮಾರಾಟ ಪ್ರಮಾನ ಪತ್ರವನ್ನು ನೀಡಲಾಗಿತ್ತು.
ಅಲ್ಲದೇ ಜಮೀನಿಗೆ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯವಿರುವ ಸ್ಟ್ಯಾಂಪ್ ಮೊತ್ತವನ್ನು ಪಾವತಿಸಲಾಗಿದ್ದು, ಜಮೀನನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಕೋರಿ ಜೆ.ಪಿ.ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು. ಅವರು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications