ಆರೋಗ್ಯ ಶಂಕಿಸಿದ ಹೆಂಡತಿಗೆ ಗಂಡನಿಂದ ಬಿಡುಗಡೆ
ಬೆಂಗಳೂರು, ನ. 15 : ಮದುವೆ ಎಂದರೆ ಗಂಡ ಹೆಂಡಿರ ನಡುವಿನ ಗಾಢವಾದ ಸಂಬಂಧ, ನಂಬಿಕೆಗೆ ಇನ್ನೊಂದು ಪದ. ದಂಪತಿಗಳ ನಡುವೆ ಪರಸ್ಪರ ನಂಬಿಕೆಯೇ ಇಲ್ಲದಿದ್ದರೆ ಮದುವೆಯೆಂಬ ಬಂಧಕ್ಕೆ ಅರ್ಥವೇ ಇರುವುದಿಲ್ಲ. ಅಂಥ ಅರ್ಥ ಕಳೆದುಕೊಂಡ ದಾಂಪತ್ಯದ ಬಂಧವನ್ನು ಕರ್ನಾಟಕ ಹೈಕೋರ್ಟ್ ಬಿಡಿಸಿದ ವಿಚಿತ್ರ ಪ್ರಕರಣ ಇಲ್ಲಿದೆ.
ಗಂನ ಆರೋಗ್ಯ ಸರಿಯಿಲ್ಲವೆಂದು ಮುನಿಸಿಕೊಂಡು ಹೋದ ಹೆಂಡತಿ... ಪತ್ನಿಗೆ ತನ್ನ ಮೇಲೆ ಪ್ರೀತಿ, ನಂಬಿಕೆ ಇಲ್ಲವೆಂದು ಕೋರ್ಟ್ ಮೆಟ್ಟಿಲೇರಿದ ಪತಿ... ಅರ್ಜಿ ತಿರಸ್ಕೃತವಾಗಿದ್ದರಿಂದ ಹೈಕೋರ್ಟ್ ಕದ ತಟ್ಟಿದ ಪತಿರಾಯ... ಇಬ್ಬರಲ್ಲಿಯೂ ಪರಸ್ಪರ ಪ್ರೀತಿ, ನಂಬಿಕೆಯೇ ಇಲ್ಲವೆಂದ ಮೇಲೆ ಬಲವಂತವಾಗಿ ಒಟ್ಟಾಗಿ ಬದುಕಿದ್ದರೇನು ಪ್ರಯೋಜನವೆಂದು ವಿಚ್ಛೇದನಕ್ಕೆ ಅನುಮತಿ ನೀಡಿದ ಹೈಕೋರ್ಟ್.
ಗಂಡ ತನ್ನ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯರು ಸಲ್ಲಿಸಿದ ಪ್ರಮಾಣಪತ್ರಗಳನ್ನು ಹೆಂಡತಿ ಸಾರಾಸಗಟಾಗಿ ತಿರಸ್ಕರಿಸಿದ್ದರಿಂದ ವಿಧಿಯಿಲ್ಲದೆ ಹೈಕೋರ್ಟ್ ವಿಚ್ಛೇದನಕ್ಕೆ ಅನುಮತಿ ನೀಡಿದೆ. ಗಂಡ ವೈದ್ಯರಿಗೆ ಲಂಚ ನೀಡಿ ನಕಲಿ ಪ್ರಮಾಣಪತ್ರಗಳನ್ನು ತರಿಸಿಕೊಂಡಿದ್ದಾನೆ ಎಂಬುದು ಹೆಂಡತಿಯ ಆರೋಪವಾಗಿತ್ತು. ಏನು ಹೇಳೋಣ ಇಂಥ ಹೆಂಡತಿಗೆ?

2006ರಲ್ಲಿ ಇಬ್ಬರೂ ಪ್ರೇಮ ವಿವಾಹವಾಗಿದ್ದರು. ಒಂದೇ ವರ್ಷದಲ್ಲಿ ಕಲಹ ಆರಂಭವಾಗಿ ಹೆಂಡತಿ ತನ್ನ ತೌರುಮನೆಗೆ ಹೋಗಿದ್ದಳು. ಹೆಂಡತಿಗೆ ಗಂಡನ ಮೇಲೆ ಪ್ರೀತಿ ಇತ್ತೋ ಇಲ್ಲವೋ, ಆತನ ಆರೋಗ್ಯದ ಮೇಲೆ ಭಾರೀ ಅನುಮಾನ. ಆತನಿಗೆ ಎಚ್ಐವಿ, ಹೃದಯಬೇನೆ, ಮಧುಮೇಹ ಇತ್ಯಾದಿ ರೋಗಗಳಿವೆ ಎಂಬುದು ಆಕೆಯ ಆರೋಪ. ತನ್ನ ಆರೋಗ್ಯದ ಬಗ್ಗೆ ಎಷ್ಟೇ ತಿಳಿಹೇಳಿದರೂ ಹೆಂಡತಿಗೆ ಮನದಟ್ಟಾಗಿರಲಿಲ್ಲ.
ಹೆಂಡತಿಯ ಮನವೊಲಿಸುವ ಎಲ್ಲ ಪ್ರಯತ್ನಗಳು ವಿಫಲವಾಗಿದ್ದರಿಂದ ಗಂಡ 2007ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ. ಆದರೆ, ಕೌಟುಂಬಿಕ ನ್ಯಾಯಾಲಯ ಆತನ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಗಂಡ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕಾಯಿತು. ಕೊನೆಗೆ ಗಂಡನ ಆರೋಗ್ಯದ ಬಗ್ಗೆ ಸಲ್ಲಿಸಲಾದ ಸರ್ಟಿಫಿಕೇಟ್ ಗಳನ್ನು ಹೆಂಡತಿ ತಿರಸ್ಕರಿಸಿದ್ದರಿಂದ ಇಬ್ಬರೂ ಬೇರೆಬೇರೆಯಾಗಲು ಕೋರ್ಟ್ ಅನುಮತಿ ನೀಡಿದೆ.












Click it and Unblock the Notifications