ಕರ್ನಾಟಕ; ದೇಶಿಯ, ಅಂತಾರಾಷ್ಟ್ರೀಯ ಪ್ರಯಾಣಿಕ ಮಾರ್ಗಸೂಚಿ
ಬೆಂಗಳೂರು, ಡಿಸೆಂಬರ್ 08; ಎರಡು ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ದಾಖಲಾದ ಬಳಿಕ ಕರ್ನಾಟಕ ಸರ್ಕಾರ ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ವಿಮಾನ ನಿಲ್ದಾಣದಲ್ಲಿ ಶೀಘ್ರವಾಗಿಯೇ ಕೋವಿಡ್ ಪರೀಕ್ಷಾ ವರದಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.
ದೇಶಿಯ ವಿಮಾನಗಳ ಪ್ರಯಾಣ, ಅಪಾಯಕಾರಿ ದೇಶಗಳಿಂದ ಪ್ರಯಾಣ, ಇತರ ದೇಶಗಳಿಂದ ಪ್ರಯಾಣಿಸುವವರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮತ್ತೊಂದು ಕಡೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗಳನ್ನು ಸಹ ಹೆಚ್ಚಿಸಲಾಗಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಅಪಾಯಕಾರಿ ಅಲ್ಲದ ದೇಶಗಳಿಂದ ಶೇ 2ರಷ್ಟು ಪ್ರಯಾಣಿಕರು ಸಂಚಾರ ನಡೆಸುತ್ತಾರೆ ಎಂದು ಹೇಳಿದೆ.

ಅಪಾಯಕಾರಿ ದೇಶಗಳಿಂದ ಆಗಮಿಸುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ನಾವು ಪರೀಕ್ಷೆಗಳನ್ನು ಮಾಡುತ್ತೇವೆ. ಯುರೋಪಿಯನ್ ದೇಶಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಸ್ಟಾನಾ, ಯುಕೆ, ಚೀನಾ, ನ್ಯೂಜಿಲ್ಯಾಂಡ್, ಸಿಂಗಾಪುರ, ಜಿಂಬಾಬ್ವೆ, ಇಸ್ರೇಲ್‌ನಿಂದ ಆಗಮಿಸುವವರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ.
ಸುರಕ್ಷಿತ ದೇಶಗಳಿಂದ ಆಗಮಿಸುವ ಶೇ 5ರಷ್ಟು ಪ್ರಯಾಣಿಕರ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಸ್ವ್ಯಾಬ್‌ಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗಳಿಗೆ ಸಹ ಕಳಿಸಲಾಗುತ್ತದೆ. ಪಾಸಿಟಿವ್ ವರದಿ ಬಂದರೆ ಐಸೋಲೇಶನ್‌ಗಾಗಿ ದಾಖಲು ಮಾಡಲಾಗುತ್ತದೆ.
ಕೆಐಎಎಲ್‌ಗೆ ಆಗಮಿಸುವ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರು 72 ಗಂಟೆಗಳ ಮೊದಲು ಕೋವಿಡ್ ನೆಗೆಟಿವ್ ವರದಿಯನ್ನು ಅಪ್‌ಲೋಡ್ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ವಯಂ ದೃಢೀಕರಣ ಮಾಡಬೇಕು.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ದೇಶಿಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿದೆ.
ಇನ್ನು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ ಸಹ ಕೇರಳ, ಮಹಾರಾಷ್ಟ್ರಿದಿಂದ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಮೊದಲಿನ ಕೋವಿಡ್ ನೆಗೆಟಿವ ವರದಿ ಹೊಂದಿರುವುದು ಕಡ್ಡಾಯವಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಥರ್ಮಲ್ ಸ್ಕ್ಯಾನಿಂಗ್ ಮತ್ತು ಆಕ್ಸಿಜನ್ ಸ್ಯಾಚುರೇಷನ್ ಪರೀಕ್ಷೆ ಕಡ್ಡಾಯವಾಗಿದೆ.
58 ಯಂತ್ರಗಳು; ವಿಮಾನ ನಿಲ್ದಾಣದಲ್ಲಿನ ಕೋವಿಡ್ ಪರೀಕ್ಷಾ ಕೇಂದ್ರವನ್ನು ಆರಿಗಾ ರಿಸರ್ಚ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಈ ಸಂಸ್ಥೆಯು ಪ್ರಯಾಣಿಕರಿಗೆ ಡಿಜಿಟಲ್ ಮಾದರಿಯಲ್ಲಿ ವರದಿ ನೀಡಲು ಇದುವರೆಗೂ 8 ಯಂತ್ರದೊಂದಿಗೆ ಕೆಲಸ ಮಾಡುತ್ತಿತ್ತು. ಈಗ ಯಂತ್ರಗಳ ಸಂಖ್ಯೆಯನ್ನು 58ಕ್ಕೆ ಹೆಚ್ಚಿಸಲಾಗಿದೆ.
ಪ್ರಯಾಣಿಕರು ಪರೀಕ್ಷೆಯ ವರದಿ ಪಡೆಯಲು ಕಾಯುವುದು ತಪ್ಪಿದೆ. ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಪ್ರಯಾಣಿಕರ ಗಂಟಲ ದ್ರವ ಸಂಗ್ರಹ ಮಾಡಲಾಗುತ್ತದೆ. ಅವರು ಬ್ಯಾಗೇಜ್ ಪಡೆದುಕೊಳ್ಳುವಷ್ಟರಲ್ಲಿ ಪರೀಕ್ಷಾ ವರದಿ ನೀಡಲಾಗುತ್ತದೆ ಎಂದು ಬಿಐಎಎಲ್ ಹೇಳಿದೆ.
ವಿವಿಧ ಕಡೆಗಳಿಂದ ಆಗಮಿಸುವ ಪ್ರಯಾಣಿಕರ ಕೋವಿಡ್ ಪರೀಕ್ಷೆಗೆ ಟರ್ಮಿನಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ನಿಯಮವನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ವೃದ್ಧರು, ಮಕ್ಕಳು, ಹಾಲುಣಿಸುವ ತಾಯಂದಿರಿಗೆ ವಿಶೇಷ ಪರೀಕ್ಷಾ ಕೌಂಟರ್‌ಗಳನ್ನು ತೆರೆಯಲಾಗಿದೆ.
ಕರ್ನಾಟಕ ಸರ್ಕಾರ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಬಂದ ನಂತರವೇ ಹೊರಗೆ ಕಳುಹಿಸಲಾಗುವುದು ಎಂದು ಹೇಳಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪರೀಕ್ಷಾ ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ. ಏರ್ ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ಪ್ರಯಾಣಿಕರಿಗೆ ಅರಿವು ಮೂಡಿಸುವಂತೆ ಸೂಚನೆ ಸಹ ನೀಡಿದೆ.
ಸರ್ಕಾರ ಶಾಲೆ, ಕಾಲೇಜುಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ ಎಂದು ಹೇಳಿದೆ. ಯಾವುದೇ ಸಮ್ಮೇಳನ, ಮದುವೆ ಮತ್ತಿತರ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಸೇರುವ ಜನರ ಸಂಖ್ಯೆಯನ್ನು 500ಕ್ಕೆ ಸೀಮಿತಗೊಳಿಸಿದೆ. ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ಕೊಡಲಾಗಿದೆ.












Click it and Unblock the Notifications