ಬೆಂಗಳೂರಿನಲ್ಲಿ ಹೊಸ ಟೋಯಿಂಗ್ ರೂಲ್ಸ್‌ನಲ್ಲಿ ಏನೇನಿದೆ?
ಬೆಂಗಳೂರು, ಫೆ. 02: ದಿವ್ಯಾಂಗ ಮಹಿಳೆಗೆ ಹಲ್ಲೆ ಮಾಡಿದ ಪ್ರಕರಣ ಬೆಂಗಳೂರು ನಗರದಲ್ಲಿ ಟೋಯಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗೆ ನಾಂದಿ ಹಾಡಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಟೋಯೀಂಗ್ ನಿಲ್ಲಿಸಿದ್ದು, ಕೆಲ ಪಾರದರ್ಶಕ ನಿಯಮಗಳೊಂದಿಗೆ ಟೋಯಿಂಗ್ ವಾಹನಗಳನ್ನು ಮತ್ತೆ ರೋಡಿಗೆ ಇಳಿಸಲು ಸಂಚಾರ ಪೊಲೀಸರು ತಯಾರಿ ನಡೆಸಿದ್ದಾರೆ.
ಟೋಯಿಂಗ್ ವಿಚಾರದಲ್ಲಿ ಸಾರ್ವಜನಿಕರು ಹಾಗೂ ಟೋಯಿಂಗ್ ಸಂಚಾರ ಪೊಲೀಸರ ನಡುವಿನ ಸಂಘರ್ಷಗಳು ತಾರಕ್ಕೇರಿವೆ. ಪದೇ ಪದೇ ಘರ್ಷಣೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಟೋಯಿಂಗ್ ಎಎಸ್ಐಗೆ ಕಲ್ಲು ತೂರಿದ ದಿವ್ಯಾಂಗ ಮಹಿಳೆ ಮೇಲೆ ಬೂಟು ಕಾಲಿನಿಂದ ಒದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದ ನಂತರ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗಿತ್ತು.
Recommended Video
ಈ ಘಟನೆ ಬಳಿಕ ಸಂಚಾರ ಪೊಲೀಸರ ಸಭೆ ಕರೆದು ಚರ್ಚಿಸಿದ್ದ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಹಲವು ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆ ಮೇರೆಗೆ ಜನಸ್ನೇಹಿ ಟೋಯಿಂಗ್ ವ್ಯವಸ್ಥೆ ಪರಿಚಯಿಸಲು ಸಂಚಾರ ಪೊಲೀಸರು ರೂಪರೇಷಗಳನ್ನು ಸಿದ್ಧಪಡಿಸಿದ್ದಾರೆ.

ಕಟ್ಟುನಿಟ್ಟಿನ ರೂಲ್ಸ್
ಸದ್ಯಕ್ಕೆ ತಾತ್ಕಾಲಿಕವಾಗಿ ಟೋಯಿಂಗ್ ನಿಲ್ಲಿಸಿರುವ ಸಂಚಾರ ಪೊಲೀಸರು ಇದೀಗ ಟೋಯಿಂಗ್ ಕುರಿತ ಪಾರದರ್ಶಕ ನಿಯಮಗಳನ್ನು ಅನುಷ್ಠಾನ ಮಾಡಲು ಮುಂದಾಗಿದ್ದಾರೆ. ಟೋಯಿಂಗ್ ವಾಹನಗಳು ಬೆಂಗಳೂರು ನಗರದಲ್ಲಿ ಗಂಟೆಗೆ ಹತ್ತು ಕಿ.ಮೀ. ವೇಗದಲ್ಲಿ ಅಷ್ಟೇ ಚಲಿಸಬೇಕು. ಪ್ರತಿ ಕ್ಷಣವೂ ಸೈರನ್ ಮಾಡಬೇಕು. ನೋ ಪಾರ್ಕಿಂಗ್‌ನಲ್ಲಿರುವ ವಾಹನದ ನಾಲ್ಕು ದಿಕ್ಕಿನ ಪೊಟೋಗಳನ್ನು ತೆಗೆಯಬೇಕು. ಐದು ನಿಮಿಷದೊಳಗೆ ವಾಹನ ಮಾಲೀಕ ಬಂದರೆ, ನೋ ಪಾರ್ಕಿಂಗ್ ದಂಡ ವಿಧಿಸಿ ವಾಹನ ಟೋಯಿಂಗ್ ಮಾಡದಂತೆ ವಾಹನ ತೆರವುಗೊಳಿಸಬೇಕು. ನೋ ಪಾರ್ಕಿಂಗ್‌ನಲ್ಲಿರುವ ವಾಹನ ಕುರಿತ ವಿಡಿಯೋ ಮೂವತ್ತು ದಿನ ಸುರಕ್ಷಿತವಾಗಿಡಬೇಕು.

ಸುರಕ್ಷತೆ ಜತೆಗೆ ಅರ್ಹ ಸಾಮರ್ಥ್ಯ ಹೊಂದಿರಬೇಕು
ಟೋಯಿಂಗ್ ಮಾಡುವ ವಾಹನ ಸುರಕ್ಷತೆ ಜತೆಗೆ ಅರ್ಹ ಸಾಮರ್ಥ್ಯ ಹೊಂದಿರಬೇಕು. ಎರಡು ಟನ್ ಹೊರುವ ಸಾಮರ್ಥ್ಯ ಹೊಂದಿರಬೇಕು. ಪ್ರತಿ ದಿನ ಟೋಯಿಂಗ್ ಸಿಬ್ಬಂದಿ ಹಾಗೂ ಮಾಲೀಕರು ಸೂಚಿಸಿದ ಪೊಲೀಸ್ ಠಾಣೆಯಲ್ಲಿ ನೋಂದಣಿ ಮಾಡಬೇಕು. ಇದನ್ನು ಪೊಲೀಸ್ ಇನ್‌ಸ್ಪೆಕ್ಟರ್ ಪರಿಶೀಲನೆ ನಡಸಬೇಕು. ಟೋಯಿಂಗ್ ವೇಳೆ ವಿಡಿಯೋ ಚಿತ್ರೀಕರಣ ಕಡ್ಡಾಯ. ಇನ್‌ಸ್ಪೆಕ್ಟರ್ ಟೋಯಿಂಗ್ ವಾಹನ ಕಾರ್ಯಚರಣೆ ಮೇಲೆ ಬಾಡಿ ಕ್ಯಾಮರಾ ಮೂಲಕ ನಿಗಾ ವಹಿಸಬೇಕು. ಪವರ್ ಸ್ಟೇರಿಂಗ್ ಇರುವ ವಾಹನಗಳನ್ನೇ ಟೋಯಿಂಗ್‌ಗೆ ಬಳಸಬೇಕು.

ಹ್ಯಾಂಡಿ, ಮುಂಬದಿ ಕ್ಯಾಮರಾ ಇರಬೇಕು
ರೊಟೇಷನ್ ಪದ್ಧತಿ ಮೇಲೆ ಎಎಸ್ಐಗಳನ್ನು ಟೋಯಿಂಗ್ ಕಾರ್ಯಕ್ಕೆ ನೇಮಿಸಬೇಕು. ಹ್ಯಾಂಡಿ ಕ್ಯಾಮರಾ, ಮುಂಬದಿ ಕ್ಯಾಮರಾ, ಸಿಸಿಟಿವಿ ಕ್ಯಾಮರಾ, ಜಿಪಿಎಸ್ ಕಡ್ಡಾಯವಾಗಿ ಟೋಯಿಂಗ್ ವಾಹನಕ್ಕೆ ಇರಬೇಕು. ಟೋಯಿಂಗ್ ವಾಹನಕ್ಕೆ ಕಡ್ಡಾಯ ಧ್ವನಿವರ್ಧಕ ಇರಬೇಕು. ಟೋಯಿಂಗ್ ಮಾಡುವ ಮುನ್ನ ಧ್ವನಿವರ್ಧಕದಲ್ಲಿ ಅನೌನ್ಸ್ ಮಾಡಬೇಕು. ಇಷ್ಟ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಇದರ ನಡುವೆಯೂ ಯಾರಾದರೂ ಸಾರ್ವಜನಿಕರು ಆಕ್ಷೇಪ ಮಾಡಿ ಜಗಳ ಮಾಡಿದರೆ, ಅಂತಹವರ ವರ್ತನೆಯನ್ನು ರೆಕಾರ್ಡ್ ಮಾಡಿಕೊಂಡು ಸಾಕ್ಷಿ ಸಮೇತ ಪೊಲೀಸ್ ಇನ್‌ಸ್ಪೆಕ್ಟರ್ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಜತೆ ಸಂಚಾರ ಪೊಲೀಸರು ಜಗಳ ಮಾಡಬಾರದು ಎಂದು ಕಟ್ಟಪ್ಪಣೆ ಮಾಡಲು ಸಂಚಾರ ಪೊಲೀಸರು ನಿಯಮಗಳನ್ನು ರೂಪಿಸಿದ್ದಾರೆ.

ಗೃಹ ಸಚಿವರ ಸಭೆ
ಟೋಯಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಪೊಲೀಸ್ ಆಯುಕ್ತ ಕಮಲಪಂತ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಒಳಗೊಂಡಂತೆ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ನಿಯಮಗಳನ್ನು ಜಾರಿಗೆ ತರಲು ತಯಾರಿ ನಡೆಸಿದ್ದಾರೆ.












Click it and Unblock the Notifications