BREAKING: ರಾಜ್ಯ ಸರ್ಕಾರ ಐಟಿ-ಬಿಟಿ, ಖಾಸಗಿ ಕಂಪನಿ ಉದ್ಯೋಗಿಗಳಿಗೆ WFHಗೆ ಸೂಚನೆ
ಬೆಂಗಳೂರು, ಅಕ್ಟೋಬರ್ 15: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಡುವಿಲ್ಲದಂತೆ ಮಳೆ ಅಬ್ಬರಿಸುತ್ತಿದೆ. ಈಗಾಗಲೇ ನಗರದ ಅನೇಕ ಕಡೆಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸಂಚಾರ ಅಸ್ತವ್ಯಸ್ತವಾಗಿದೆ. ಈ ಕಾರಣದಿಂದ ರಾಜ್ಯ ಸರ್ಕಾರ ಬೆಂಗಳೂರಿನ ಐಟಿ ಬಿಟಿ ಕಂಪನಿಗಳು, ಖಾಸಗಿ ಸೇರಿದಂತೆ ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳಿಗೆ 'ಮನೆಯಿಂದಲೇ ಕೆಲಸ ಮಾಡುವಂತೆ' (WFH) ಮಾಡುವಂತೆ ಸೂಚನೆ ನೀಡಿದೆ.
ಈ ಕುರಿತು ಮಂಗಳವಾರ ರಾಜ್ಯ ಸರ್ಕಾರದ 'ಕರ್ನಾಟಕ ನಾವಿನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ'ಯ ಪ್ರಧಾನ ಕಾರ್ಯದರ್ಶಿಗಳು ಸೂಚನಾ ಪತ್ರ ಹೊರಡಿಸಿದ್ದಾರೆ. ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ವಿವಿಧ ಸಮಸ್ಯೆಗಳು ಸೃಷ್ಟಿಯಾಗಿವೆ. ಮನೆಯಿಂದ ಕಚೇರಿಗೆ ಓಡಾಡುವವರ ಹಿತದೃಷ್ಟಿ, ಕಾಳಜಿಯಿಂದಾಗಿ ಸರ್ಕಾರ ಅಕ್ಟೋಬರ್ 16ರಂದು ಬುಧವಾರ ಮನೆಯಿಂದಲೇ ಕೆಲಸ ಮಾಡುವಂತೆ ನಿರ್ದೇಶಿಸಿದೆ.

ಕಳೆದ ಎರಡು ಮೂರು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟು ಬಿಡದೇ ಹಿಂಗಾರು ಮಳೆ ಸುರಿಯುತ್ತಲೇ ಇದೆ. ಎಲ್ಲೆಡೆ ಮಬ್ಬು ವಾತಾವರಣ, ಚಳಿ ಗಾಳಿ ಬೀಸುತ್ತಿದೆ. ಗುಡುಗು ಮಿಂಚು ಸಮೇತ ವ್ಯಾಪಕ ಮಳೆ ಆಗುತ್ತಿದೆ. ಈ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಬುಧವಾರ ಬೆಂಗಳೂರಿಗೆ ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ಕೊಟ್ಟಿದೆ.
ಈ ಮುನ್ಸೂಚನೆ ಗಮನಿಸಿದರೆ, ಬುಧವಾರ ಕಳೆದ ಎರಡು ಮೂರು ದಿನಗಳಿಗಿಂತಲೂ ಹೆಚ್ಚು ಮಳೆ ಬರುವ ಲಕ್ಷಣ ಗೋಚರಿಸುತ್ತಿದೆ. ಈಗಾಗಲೇ ನಗರ ರಸ್ತೆಗಳು, ಅಂಡರ್‌ಪಾಸ್‌ಗಲೂ ಜಲಾವೃತಗೊಂಡಿವೆ. ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಒಳಚರಂಡಿಗಳು ಉಕ್ಕಿ ಹರಿದಿವೆ. ರಸ್ತೆಯಲ್ಲಿ ವಾಹನಗಳು ಸಂಚರಿಸಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಐಟಿ ಬಿಟಿ, ಖಾಸಗಿ ಮತ್ತು ಕಾರ್ಪೋರೇಟ್ ಕಂಪನಿ ನೌಕರರು ಸಂಚರಿಸುವುದು ಸುರಕ್ಷಿತವಲ್ಲ ಎಂದು ಅರಿತ ಸರ್ಕಾರ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದೆ.
ಬೆಂಗಳೂರಿಗೆ ಭಾರೀ ಮಳೆ ಮುನ್ಸೂಚನೆ
ಮುಂದಿನ ಮೂರು ದಿನ ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭಾರೀ ಮಳೆ ಆಗಲಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಬುಧವಾರ ಅತ್ಯಧಿಕ ಮಳೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ನಗರದಲ್ಲಿ ಮಬ್ಬು ವಾತಾವರಣ ಸೃಷ್ಟಿಯಾಗಿದೆ. ಎಲ್ಲಡೆ ಚಳಿ ಗಾಳಿ ಬೀಸುತ್ತಿದೆ. ಗಾಳಿಯ ವೇಗವು ಹೆಚ್ಚಾಗಿದೆ. ಬಿಬಿಎಂಪಿಯು ಅಗತ್ಯ ಸೂಚನೆ ನೀಡಿದೆ. ಸಮಸ್ಯೆಗಳಿಗೆ ತ್ವರತಿವಾಗಿ ಸ್ಪಂದಿಸುವಂತೆ ಕೋರಿದೆ.
ಇನ್ನೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಈ ಕಾರಣದಿಂದ ಬೆಂಗಳೂರು, ಕರ್ನಾಟಕ, ನೆರೆಯ ತಮಿಳುನಾಡು, ಒಡಿಶಾ, ಆಂಧ್ರಪ್ರದೇಶದಲ್ಲಿ ಮಳೆ ಸುರಿಯಲಾರಂಭಿಸಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ತಜ್ಞ, ಬೆಂಗಳೂರು ಐಎಂಡಿ ಕಚೇರಿ ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ಮುನ್ಸೂಚನೆ ಕೊಟ್ಟಿದ್ದಾರೆ.












Click it and Unblock the Notifications