Tamanna Bhatia: ಮೈಸೂರು ಸ್ಯಾಂಡಲ್ ಸೋಪಿಗೆ ನಟಿ ತಮನ್ನಾ ನಂಟು: KSDL
ಬೆಂಗಳೂರು, ಮೇ 23: ಕರ್ನಾಟಕದ ಹೆಮ್ಮೆಯ ಸಂಕೇತವಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶ ರಾಜ್ಯ ಸರ್ಕಾರ ಹೊಂದಿದೆ. ಈಗಾಗಲೇ ವಹೀವಾಟು, ವ್ಯಾಪಾರದಲ್ಲಿ ಹೆಚ್ಚಳವಾಗಿದೆ. ಇದೀಗ ವಿಶ್ವಮಟ್ಟದ ಉತ್ಪನ್ನ ಮಾಡಲು ನಾವು ಕಾರ್ಯತಂತ್ರ ರೂಪಿಸಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಗುರುವಾರ ಹೇಳಿದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಸಂಸ್ಥೆಯ ಉತ್ಪನ್ನಗಳಿಗೆ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಇದರಲ್ಲಿ ಅವರ ವರ್ಚಸ್ಸು, ಡಿಜಿಟಲ್ ಪ್ರಸ್ತುತಿ ಮತ್ತು ಯುವಜನರೊಂದಿಗೆ ಅವರ ಸಂಪರ್ಕ ಇವುಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದರು.

ನಟಿ ತಮನ್ನಾ ಅವರನ್ನು 6.2 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಎರಡು ವರ್ಷಗಳ ಅವಧಿಗೆ KSDL ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿರುವುದಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ. KSDL ಕಳೆದ ಸಾಲಿನಲ್ಲಿ 1,785 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಇದರಲ್ಲಿ ಕರ್ನಾಟಕದ ಪಾಲು ಶೇಕಡಾ 18 ರಷ್ಟಿದೆ. ಉಳಿದದ್ದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಿಂದ ಬಂದಿದೆ.
5,000 ಕೋಟಿ ರೂ. ವಹೀವಾಟಿನ ಗುರಿ
KSDL ಸಂಸ್ಥೆಯ ವಹಿವಾಟನ್ನು 2030ರ ವೇಳೆಗೆ 5,000 ಕೋಟಿ ರೂಪಾಯಿಗೆ ಕೊಂಡೊಯ್ಯುವ ಗುರಿ ಇಟ್ಟುಕೊಂಡು ಈಗ ದಾಪುಗಾಲು ಹಾಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆ ತಂತ್ರವೇ ಮುಖ್ಯವಾಗುತ್ತದೆ. ಇದು ಮಾರುಕಟ್ಟೆ ಪರಿಣತರ ಸಮಿತಿಯ ತೀರ್ಮಾನವಾಗಿದೆ ಎಂದು ಅವರು ಹೇಳಿದರು.
ನಾವು ನಟಿಯರಾದ ದೀಪಿಕಾ ಪಡುಕೋಣೆ, ನಟಿ ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ಕಿಯಾರಾ ಅಡ್ವಾಣಿ ಅವರನ್ನೂ ಪರಿಗಣಿಸಿ ನೋಡಿದೆವು. ಆದರೆ ತಮನ್ನಾ ಅವರು ಡಿಜಿಟಲ್ ಲೋಕದಲ್ಲಿ 2.8 ಕೋಟಿ ಪಾಲೋಯರ್ಸ್ ಹೊಂದಿ, ಉಳಿದವರಿಗಿಂತ ಮುಂದಿದ್ದಾರೆ. ಜತೆಗೆ ಅವರು ಅಖಿಲ ಭಾರತ ಮಟ್ಟದ ವರ್ಚಸ್ಸು ಹೊಂದಿದ್ದಾರೆ. ಹೀಗಾಗಿ ಅವರನ್ನೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳಲಾಗಿದೆ. ಇದು ಕೆಎಸ್ಡಿಎಲ್ ಸಂಸ್ಥೆಗೆ ನಾವು ತರುತ್ತಿರುವ ಸಮಗ್ರ ಪರಿವರ್ತನೆಯಲ್ಲಿ ಕೇವಲ ಒಂದು ಅಂಶವಷ್ಟೆ ಎಂದು ಅವರು ವಿವರಿಸಿದರು.

KSDL ನ ಉದ್ಯೋಗಿಗಳು ಕನ್ನಡಿಗರೇ ಆಗಿದ್ದಾರೆ. ಬರುವ ಲಾಭಾಂಶದಲ್ಲಿ ಶೇಕಡ 30 ರಷ್ಟನ್ನು ಸರ್ಕಾರಕ್ಕೆ ಕೊಡಲಾಗುತ್ತಿದೆ. ಈಗ ಯೂರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತಿದೆ. ಇವುಗಳ ಭಾಗವಾಗಿ 435 ವಿತರಕರನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. ಜತೆಗೆ ಇ-ಕಾಮರ್ಸ್ ಮೂಲಕ 500 ಕೋಟಿ ರೂಪಾಯಿ ವಹಿವಾಟು ನಡೆಸುವ ಮತ್ತು ರಫ್ತಿನಿಂದ 150 ಕೋಟಿ ರೂಪಾಯಿ ಗಳಿಸುವ ಗುರಿ ಹೊಂದಿದ್ದೇವೆ ಎಂದು ಪ್ರತಿಪಾದಿಸಿದರು.
ವಿಜಯಪುರದಲ್ಲಿ KSDL ಹೊಸ ಘಟಕ
ಇಷ್ಟಕ್ಕೂ ಒಂದು ಸರ್ಕಾರಿ ಸಂಸ್ಥೆ ಹೊಸ ಘಟಕವನ್ನು ವಿಜಯಪುರದಲ್ಲಿ ಆರಂಭಿಸುವ ಹಂತಕ್ಕೆ ಹೋಗುತ್ತಿದೆ ಎನ್ನುವುದೇ ಹೆಮ್ಮೆಯ ವಿಷಯ. ಹೀಗೆ ಮಾಡಿದ ನಂತರ ಅದನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಹಾಗೆಯೇ ಬ್ರ್ಯಾಂಡಿಂಗ್ ಹೆಚ್ಚಿಸಲು ಪ್ಯಾಕಿಂಗ್ ಬದಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಹೊಸತನದ ಸ್ಪರ್ಶ, ಇದೊಂದು ಉಪಕ್ರಮ
KSDL ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ಮಾತನಾಡಿ, 109 ವರ್ಷಗಳ ಇತಿಹಾಸವಿರುವ KSDL ಕರ್ನಾಟಕದ ಹೆಮ್ಮೆಯ ಉದ್ಯಮವಾಗಿದೆ. ಇದಕ್ಕೆ ಸಂಪೂರ್ಣ ಹೊಸತನದ ಸ್ಪರ್ಶ ನೀಡುತ್ತಿದೆ. ಉತ್ತರ ಭಾರತ ಮತ್ತು ವಿದೇಶಗಳಲ್ಲೂ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತಿದೆ. ಇದರಲ್ಲಿ ಗೆಲ್ಲಬೇಕೆಂದರೆ ನಾವು ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಬೇಕು. ತಮನ್ನಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಂಡಿರುವುದು ಇದಕ್ಕೆ ತಕ್ಕ ಒಂದು ಉಪಕ್ರಮವಷ್ಟೆ. ಇದನ್ನು ಯಾರೂ ತಪ್ಪಾಗಿ ಭಾವಿಸಬಾರದು ಎಂದು ಅವರು ಹೇಳಿದರು.












Click it and Unblock the Notifications