Breaking: ಕರ್ನಾಟಕದಲ್ಲಿ ಫೆ.15ರವರೆಗೂ ಪಿಯು ಕಾಲೇಜುಗಳಿಗೆ ರಜೆ
ಬೆಂಗಳೂರು, ಫೆಬ್ರವರಿ 12: ಕರ್ನಾಟಕದಲ್ಲಿ ಪದವಿ ಪೂರ್ವ ಕಾಲೇಜುಗಳಿಗೆ ಫೆಬ್ರವರಿ 15ರವರೆಗೆ ರಜೆ ಘೋಷಿಸಲಾಗುವುದು ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಶನಿವಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಬಗೆಹರಿಯದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಅನ್ನು ಕಾಪಾಡುವ ಹಿತದೃಷ್ಟಿಯಿಂದ ಫೆಬ್ರವರಿ 12 ಮತ್ತು 13ರಂದು ಶನಿವಾರ ಮತ್ತು ಭಾನುವಾರದ ರಜೆಯ ಜೊತೆಗೆ ಫೆಬ್ರವರಿ 14 ಮತ್ತು 15ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ರಜೆಯನ್ನು ಘೋಷಿಸಲಾಗಿದೆ.
"ರಾಜ್ಯದಲ್ಲಿ ಹಿಂಸಾಚಾರ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾಲಯ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜು, ಡಿಪ್ಲೋಮಾ ಕಾಲೇಜುಗಳಿಗೆ ಅನ್ವಯವಾಗುವಂತೆ ನೀಡಿರುವ ರಜೆಯನ್ನು ಫೆ.16 ವರೆಗೆ ಮುಂದುವರೆಸಲಾಗಿದೆ," ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹಿಜಾಬ್ ಗಲಾಟೆ:
ಕರಾವಳಿಯ ಕಾಲೇಜುಗಳಲ್ಲಿ ಹೊತ್ತಿಕೊಂಡ ಹಿಜಾಬ್ ವಿವಾದದ ಬೆಂಕಿ ಬೆಂಗಳೂರಿನ ಪ್ರೌಢಶಾಲೆಗಳಿಗೂ ವ್ಯಾಪಿಸಿದೆ. ಶನಿವಾರ ಚಂದ್ರ ಲೇಔಟ್ ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ಶಿಕ್ಷಕಿಯು ತರಗತಿಯಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಶಿಕ್ಷಕಿ ಬೋರ್ಡ್ ಮೇಲೆ ಬರೆದಿರುವುದೇ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ ಶಶಿಕಲಾ ಅಮಾನತು:
ಬೆಂಗಳೂರು ಚಂದ್ರ ಲೇಔಟ್‌ನಲ್ಲಿರುವ ವಿದ್ಯಾಸಾಗರ್ ಪಬ್ಲಿಕ್ ಶಾಲೆಯಲ್ಲಿ ಹಿಜಾಬ್ ಗಲಾಟೆಗೆ ಕಾರಣರಾದರು ಎಂಬ ಆರೋಪದ ಹಿನ್ನೆಲೆ ಶಿಕ್ಷಕಿ ಶಶಿಕಲಾರನ್ನು ಅಮಾನತುಗೊಳಿಸಲಾಗಿದೆ. ಬೋರ್ಡ್ ಮೇಲೆ ಸಾಂಕೇತಿಕ ಬರಹದ ಬಗ್ಗೆ ವಿದ್ಯಾರ್ಥಿಗಳಲ್ಲಿನ ಗೊಂದಲವೇ ಗಲಾಟೆಗೆ ಕಾರಣವಾಗಿದೆ. ಬೋರ್ಡ್ ಮೇಲೆ ಬರೆದ ಬರಹದ ಬಗ್ಗೆ ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದ್ದು, ಶುಕ್ರವಾರ ಪೋಷಕರ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.












Click it and Unblock the Notifications