ಜ್ಞಾನಭಾರತಿ ಆವರಣದಲ್ಲಿ ರಾಜ್ಯಪಾಲ ವಜುಭಾಯಿ ವಾಲಾರಿಂದ ಯೋಗ, ಗಣ್ಯರ ಗೈರು
ಬೆಂಗಳೂರು, ಜೂನ್ 21 : ಯೋಗ ಮಾಡುವುದರಿಂದ ದೇಹಕ್ಕೆ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೆ ನಮ್ಮ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಯೋಗವನ್ನು ಮಾಡಬೇಕು ಎಂದು ಸನ್ಮಾನ್ಯ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಕಿವಿಮಾತು ಹೇಳಿದರು.
ಅವರು ಶುಕ್ರವಾರ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ನೂರಾರು ಜನ ಆಸಕ್ತರು ಯೋಗೋತ್ಸವದಲ್ಲಿ ಪಾಲ್ಗೊಂಡಿದ್ದರು.
ಯೋಗ ಮಾಡುವುದರಿಂದ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟಿಕೊಳ್ಳಬಹುದು. ಮಹಾತ್ಮ ಗಾಂಧಿಜೀ ಅವರು ಹೇಳಿದ ಹಾಗೆ ಪ್ರತಿಯೊಬ್ಬರೂ ಕೆಟ್ಟದ್ದನ್ನು ಮಾತನಾಡಬಾರದು, ಕೆಟ್ಟದ್ದನ್ನು ಆಲಿಸಬಾರದು ಮತ್ತು ಕೆಟ್ಟದನ್ನು ನೋಡಬಾರದು. ಹಾಗೆಯೆ, ಅಹಿಂಸೆಯನ್ನು ಪಾಲಿಸಿಬೇಕು ಎಂದು ಹೇಳಿದರು.

ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವನ್ನು ಹಾಗೂ ಶಿಸ್ತನ್ನು ಕಲಿಸುತ್ತದೆ. ದಿನ ನಿತ್ಯ ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಮನುಷ್ಯ ತನ್ನ ದಿನನಿತ್ಯದ ಚಟುವಟಿಕೆಗಳನ್ನು ಅತ್ಯಂತ ಲವಲವಿಕೆಯಿಂದ ಮಾಡಲು ಸಾಧ್ಯವಾಗುತ್ತದೆ ಎಂದರು.
ಯೋಗ ಅಭ್ಯಾಸದಿಂದ ಶಾಂತಿ ಸಹಬಾಳ್ವೆಯ ಬದುಕನ್ನು ರೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಬಹುತೇಕ ದೇಶಗಳಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲೆಲ್ಲೂ ಅತ್ಯಂತ ಉತ್ಸಾಹದಿಂದ ಜನರು ಯೋಗಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ. ವೇಣುಗೋಪಾಲ್ ಕೆ.ಆರ್ ಉಪಸ್ಥಿತರಿದ್ದರು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ, ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಿಕೆ ಸುರೇಶ್, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು, ಬಿಬಿಎಂಪಿ ಸದಸ್ಯೆ ತೇಜಸ್ವಿನಿ ಸೀತಾರಾಮಯ್ಯ ಮುಂತಾದವರಿಗೂ ಆಹ್ವಾನ ಹೋಗಿತ್ತಾದರೂ ಅವರಾರೂ ಈ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿಲ್ಲ.












Click it and Unblock the Notifications