Zameer Ahmed khan: ರಾಜ್ಯ ಸರ್ಕಾರ vs ರಾಜ್ಯಪಾಲರ ಮಧ್ಯೆ ಮತ್ತೆ ಸಂಘರ್ಷ!
ಬೆಂಗಳೂರು, ನವೆಂಬರ್ 11: ಸಿಎಂ ಸಿದ್ದರಾಮಯ್ಯ ಅವರು ಮುಡಾದಿಂದ ಅಕ್ರಮ ನಿವೇಶನ ಪಡೆದಿದ್ದಾರೆ ಎಂಬ ದೂರಿನ ಮೇರೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾಗ ನಡೆದಿದ್ದ ಸಂಘರ್ಷವು ಇದೀಗ ಮತ್ತೆ ಮುಂದುವರಿದಿದೆ. ಏಕೆಂದರೆ ಹೈಕೋಟ್ ತೀರ್ಪು ವಿಚಾರದಲ್ಲಿ ನ್ಯಾಯಾಂಗ ನಿಂದನೆ ಆಗಿದೆ ಎಂದು ಸಚಿವರೊಬ್ಬರು ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದ್ದಾರೆ.
ಹೌದು...ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಅದಾದ ಬಳಿಕ ಇದೊಂದು ರಾಜಕೀಯ ಪ್ರೇರಿತ ತೀರ್ಪು ಎಂದು ಸಿಎಂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹೇಳಿದ್ದರು. ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರಚೆಂದ್ ಗೆಹ್ಲೋತ್ ಅವರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ಇದೆಲ್ಲ ನೋಡಿದರೆ ರಾಜ್ಯ ಸರ್ಕಾರ ವರ್ಸೆಸ್ ರಾಜ್ಯಪಾಲ ಎಂಬಂತಹ ವಾತಾವರಣ ಮತ್ತೆ ಮುಂದುವರಿಬಹುದು ಎಂಬತಾಗಿದೆ. ರಾಜ್ಯಪಾಲರು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಿದ್ದಾರೆ.
ಮುಡಾ ತೀರ್ಪು ಬಳಿಕ ಹೇಳಿಕೆ, ನಂತರ ಕ್ಷಮೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಮುಡಾ ವಿಚಾರದಲ್ಲಿ ತೀರ್ಪು ಪ್ರಕಟವಾದ ಬಳಿಕ ಇದು ರಾಜಕೀಯ ಪ್ರೇರಿತ ತೀರ್ಪು ಎಂದು ಸಚಿವರು ಹೇಳಿದ್ದರು. ಅವರ ವಿರುದ್ಧ ಟಿ.ಜೆ.ಅಬ್ರಾಹಿಂ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಇದಾದ ಬಳಿಕ 'ವಿಪಕ್ಷಗಳು ಹೈಕೋರ್ಟ್ ತೀರ್ಪುನ ಬಗ್ಗೆ ರಾಜಕೀಯ ಮಾಡುತ್ತವೆ ಎಂದು ನಾನು ಹೇಳಿದ್ದೇನೆ. ನ್ಯಾಯಂಗ ನಿಂದನೆ ಮಾಡಿಲ್ಲ. ತಪ್ಪಾಗಿದ್ದರೆ ಕ್ಷಮೆ ಕೇಳುವೆ' ಎಂದು ಸ್ಪಷ್ಟನೆ ನೀಡಿದ್ದರು.
ನ್ಯಾಯಾಂಗ ನಿಂದನೆ ಮಾಡಿರುವ ಸಚಿವರ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಅಡ್ವೊಕೇಟ್ ಜನರಲ್ ಅವರಿಗೆ ದೂರು ನೀಡಿದ್ದೆವು ಆದರೆ ಕ್ರಮ ಕೈಗೊಂಡಿಲ್ಲ. ನ್ಯಾಯಾಂಗ ಸಮಗ್ರತೆ ಪ್ರಶ್ನಿಸುವ ಜಮೀರ್ ಅಹ್ಮದ್ ಅವರ ವಿರುದ್ಧ ಕ್ರಮಕ್ಕೆ ಅಡ್ವೊಕೇಟ್ ಜನರಲ್ ಅವರಿಗೆ ಸೂಚಿಸುವಂತೆ ಕೋರಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಈ ದೂರನ್ನು ಪರಿಗಣಿಸಿರುವ ರಾಜ್ಯಪಾಲರು ಇದೀಗ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೊಂದು ಕಂಟಕ ಎದುರಾದಂತಾಗಿದೆ. ಸದ್ಯ ರಾಜ್ಯಪಾಲರ ಸೂಚನೆ ಪಾಲನೆ ಆಗಲಿದೆಯೋ ಇಲ್ಲವೋ ಎಂಬುದು ಕಾದು ನೋಡಬೇಕಿದೆ.












Click it and Unblock the Notifications