ಅಕ್ರಮಕ್ಕೆ ಸಹಕರಿಸಿದರೆ ಕಾಣಿಕೆ, ಆತ್ಮಹತ್ಯೆ ಭಾಗ್ಯ: ಬಿಜೆಪಿ ಕರೆ ಕೊಟ್ಟಿದ್ದೇಕೆ?
ಬೆಂಗಳೂರು, ಮೇ 28: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಕುರಿತು ಕರ್ನಾಟಕ ಬಿಜೆಪಿ ವಾಗ್ದಾಳಿ ಮುಂದುವರಿಸಿದೆ. ಸರ್ಕಾರದ ಅಕ್ರಮಕ್ಕೆ ಸಹಕರಿಸಿದರೆ ಕಾಣಿಕೆ, ಇಲ್ಲದಿದ್ದರೆ ಕುಣಿಕೆ ಗ್ಯಾರೆಂಟಿ' ಎಂದು ಲೇವಡಿ ಮಾಡಿದೆ. ಸರ್ಕಾರದಲ್ಲಿನ ಅಕ್ರಮ ಕುರಿತು ಬಿಜೆಪಿ ಜರಿದಿದೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಲೋಪದೋಷಗಳು, ಆಡಳಿತ ಬಗ್ಗೆ ಟೀಕೆ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ನಡೆದಿದೆ. ಅದರಲ್ಲಿ ಅರ್ಧದಷ್ಟು ಹಣ ವರ್ಗಾವಣೆ ಆಗಿದೆ. ಇದು ತಮ್ಮ ಮೇಲೆ ಬರುತ್ತದೆ ಎಂದು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ದೂರಿದೆ.

ಅಕ್ರಮಕ್ಕೆ ಸಹಕರಿಸಿದ್ರೆ ಕಾಣಿಕೆ, ಇಲ್ಲದಿದ್ರೆ ಕುಣಿಕೆ ಗ್ಯಾರಂಟಿ. ಭ್ರಷ್ಟಾಚಾರಕ್ಕೆ ಸಹಕರಿಸದ, ಕಮಿಷನ್ ವಿಷ ವರ್ತುಲಕ್ಕೆ ಸಿಲುಕಿಕೊಳ್ಳದ ಅಧಿಕಾರಿಗಳಿಗಾಗಿ ಕಾಂಗ್ರೆಸ್ ಸರ್ಕಾರ ಆತ್ಮಹತ್ಯೆ ಭಾಗ್ಯ ಜಾರಿಗೊಳಿಸಿದೆ ಎಂದು ಆಡಳಿತ ಕುರಿತು ಆರೋಪಿಸಿದೆ.
ಸರ್ಕಾರ ಕೊನೆಗಾಣಿಸಲು ಎದ್ದೇಳಿ ಕನ್ನಡಿಗರೇ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವ ಕಮಿಷನ್ ದಾಹಕ್ಕೆ ಇನ್ನೆಷ್ಟು ಅಧಿಕಾರಿಗಳು ಬಲಿಯಾಗಬೇಕು?
ಎದ್ದೇಳಿ ಕನ್ನಡಿಗರೇ, ಕೊಲೆಗಡುಕ ಸರ್ಕಾರವನ್ನು ಕೊನೆಗಾಣಿಸೋಣ ಎಂದು ಬಿಜೆಪಿ ಕರೆ ಕೊಟ್ಟಿದೆ.
ದಕ್ಷ ಅಧಿಕಾರಿಯೊಬ್ಬರು ತಮ್ಮ ಸಾವಿಗೆ ಕಾಂಗ್ರೆಸ್ ಸಚಿವ ಬಿಎನ್ ನಾಗೇಂದ್ರ ಅವರೇ ಕಾರಣ ಎಂದು ಮೃತ ಅಧಿಕಾರಿ ಡೆತ್ ನೋಟಿ ಬರೆದಿಟ್ಟಿದ್ದಾರೆ. ಇದುವರೆಗೂ ಭಂಡ ಕಾಂಗ್ರೆಸ್ ಸರ್ಕಾರ, ಸಚಿವರ ರಾಜೀನಾಮೆ ಪಡೆಯುವುದಿರಲಿ ಕನಿಷ್ಠ ಮೃತರ ಕುಟುಂಬಕ್ಕೆ ಸಾಂತ್ವನ ಸಹ ಹೇಳಿಲ್ಲ ಎಂದು ಬಿಜೆಪಿ ಬೇಸರ ವ್ಯಕ್ತಪಡಿಸಿದೆ.

ಅಧಿಕಾರಿ ಸಾವಿಗೆ ನ್ಯಾಯ ಒದಗಿಸಿ
ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರೇ, ನಿಮ್ಮ ಸಚಿವರ ಭ್ರಷ್ಟಾಚಾರದ ಕರ್ಮಕಾಂಡ ಸಾಕ್ಷಿ ಸಮೇತ ಬಯಲಾಗಿದೆ. ನಿಮಗೆ ನಿಜಕ್ಕೂ ಮಾನ, ಮರ್ಯಾದೆ, ಜನಪರ ಕಾಳಜಿ ಇದ್ದರೆ ಮೊದಲು ಕಡುಭ್ರಷ್ಟ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದು ಚಂದ್ರಶೇಖರ್ ಅವರ ಸಾವಿಗೆ ನ್ಯಾಯ ಒದಗಿಸಿ ಎಂದು ಬಿಜೆಪಿ ಆಗ್ರಹಿಸಿದೆ.
ಇನ್ನೂ ಬೆಂಗಳೂರಿನಲ್ಲಿ ಗುಂಡಿಗಳ ನಗರವನ್ನಾಗಿ ಮಾಡಲಾಗಿದೆ. ಅನೈತಿಕ ಚಟುವಟಿಕೆಗಳ ರಾಜಧಾನಿಯನ್ನಾಗಿಸಿ, ಅಭಿವೃದ್ಧಿಯನ್ನು ಮರೆತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡೋಣ, ಅಸಮರ್ಥ ಸರ್ಕಾರವನ್ನು ಕಿತ್ತು ಎಸೆಯೋಣ. ಎದ್ದೇಳು ಬೆಂಗಳೂರು ಎಂದು ಬಿಜೆಪಿ ಸಾಲು ಸಾಲು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಕಾಲೆಳೆದಿದೆ.












Click it and Unblock the Notifications