ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಪ್ರಚಾರಕ್ಕೆ ಹೊಸ ತಂತ್ರಜ್ಞಾನ
ಬೆಂಗಳೂರು, ಜೂನ್ 08 : ಇನ್ನೇನು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತಯೇ ರಾಜ್ಯ ಸರ್ಕಾರ ತನ್ನ ನಾಲ್ಕು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಗಳನ್ನು ಜನರಿಗೆ ಮನದಟ್ಟು ಮಾಡಿಕೊಡಲು ಹೊಸ ಕೆಲಸಕ್ಕೆ ಕೈಹಾಕಿದೆ.
ಹೌದು..ಮೊದಲೆಲ್ಲ ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟ ಪ್ಲೆಕ್ಸ್ ಗಳನ್ನು ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳಲಾಗಿತ್ತು. ಆದರೆ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು ಇದಕ್ಕೆ ಪರ್ಯಾಯವಾಗಿ ಹೊಸ ಮಾದರಿಯಲ್ಲಿ ಮೊದಲ ಹೆಜ್ಜೆಯಾಗಿ ಡಿಜಿಟಲ್ ಫಲಕಗಳ ಮೂಲಕ ಪ್ರಚಾರ ನೀಡಲು ಮುಂದಾಗಿದೆ.[ಇನ್ಮುಂದೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್]
ಸರ್ಕಾರದ ಯೋಜನೆಗಳನ್ನು ಪ್ರಚಾರ ನೀಡುವ ಸಲುವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಲೇಸರ್ ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸ ಮಾಡುತ್ತಿದೆ. ಹೊಸ ಪಿಪಿಪಿ ಮಾದರಿಯಲ್ಲಿ ಡಿಜಿಟಲ್ ಪ್ರಚಾರ ಫಲಕಗಳನ್ನು ಅಳವಡಿಸುವ ಮೂಲಕ ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಹೊಸ ದಾರಿ ಹಿಡಿದಿದೆ.[ಏನಿದು ಜನೌಷಧ? ಏನಿದರ ಮಹತ್ವ, ಎಲ್ಲೆಲ್ಲಿ ಸಿಗುತ್ತೆ?]
ಈ ಹೊಸ ಮಾದರಿಯ ಡಿಜಿಟಲ್ ಫಲಕದ ಮೂಲಕ ಪ್ರತಿ ಜಿಲ್ಲೆ-ಜಿಲ್ಲೆಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ನಾಲ್ಕು ವರ್ಷದ ಅವಧಿಯಲ್ಲಿ ಜಾರಿಗೆ ತಂದ ಹಲವು ಜನಪರ ಯೋಜನೆಗಳನ್ನು ಪ್ರಚಾರ ಪಡಿಸುತ್ತಿದೆ. ಹಾಗಾದರೆ ಏನಿದು ಈ ತಂತ್ರಜ್ಞಾನ? ಇದರ ಬಗ್ಗೆ ತಿಳಿಯಲು ಮುಂದೆ ಓದಿ.

ಏನಿದು ಡಿಜಿಟಲ್ ಫಲಕ?
ತಂತ್ರಜ್ಞಾನದೊಂದಿಗೆ-ಅಭಿವೃದ್ದಿಯೆಡೆಗೆ ಶೀರ್ಷಿಕೆಯಡಿ ಡಿಜಿಟಲ್ ಫಲಕ ಅಳವಡಿಕೆ ಜಾರಿಗೆ ಬರುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ / ಪಬ್ಲಿಕ್ ಪ್ರೈವೇಟ್ ಪಾಟ್ನರ್ ಶಿಪ್) ಇಲಾಖೆಯು ರಾಜ್ಯದ 10 ಕಡೆಗಳಲ್ಲಿ ಮೊದಲ ಹಂತದಲ್ಲಿ ಡಿಜಿಟಲ್ ಪ್ರಚಾರ ಫಲಕಗಳನ್ನು ಅಳವಡಿಸುತ್ತಿದೆ. 10 x 16 ಅಡಿ ವಿಸ್ತೀರ್ಣದ ಫಲಕದ ಬೋರ್ಡ್ ಗಳನ್ನು ಅಳವಡಿಸಲಾಗಿದೆ. ಈಗಾಗಲೇ ವಾರ್ತಾ ಇಲಾಖೆಯು ತನ್ನ ಒಡೆತನದಲ್ಲಿರುವ 2500ಕ್ಕೂ ಹೆಚ್ಚು ಹೆದ್ದಾರಿ ಫಲಕಗಳಲ್ಲಿ ಫ್ಲೆಕ್ಸ್ ಅನ್ನು ಅಳವಡಿಸಿ ರಾಜ್ಯ ವಿವಿಧ ಯೋಜನೆಗಳಿಗೆ ಪ್ರಚಾರ ನೀಡುತ್ತಿದೆ.

ತಂತ್ರಜ್ಞಾನದ ಬಳಕೆ
ತಂತ್ರಜ್ಞಾನದೊಂದಿಗೆ -ಅಭಿವೃದ್ದಿಯೆಡೆಗೆ ಉದ್ದೇಶವನ್ನು ಮುಂದಿಟ್ಟುಕೊಂಡು ವಾರ್ತಾ ಇಲಾಖೆಯು ಸದಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲಸ ಮಾಡುತ್ತದೆ. ಈ ಮೊದಲು ಸರ್ಕಾರದ ಯೋಜನೆಗಳನ್ನು ಪ್ರಚಾರ ನೀಡುವ ಸಲುವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಲೇಸರ್ ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸ ಮಾಡುತ್ತಿದೆ. ಹೊಸ ಪಿಪಿಪಿ ಮಾದರಿಯಲ್ಲಿ ಡಿಜಿಟಲ್ ಪ್ರಚಾರ ಫಲಕಗಳನ್ನು ಅಳವಡಿಸುವ ಮೂಲಕ ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಹೊಸ ದಾರಿ ಹಿಡಿದಿದೆ. ರಾಜ್ಯದ ಯೋಜನೆಗಳನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಡಿಜಿಟಲ್ ಫಲಕಗಳನ್ನು ಸ್ಥಳಿಯ ಜಿಲ್ಲಾಡಳಿತವು ಸಹ ಸಾರ್ವಜನಿಕರಿಗೆ ಮಾಹಿತಿ ನೀಡಲು ಬಳಸಿಕೊಳ್ಳಬಹುದಾಗಿದೆ.

ಫಲಕದಲ್ಲಿ ನಾಡು-ನುಡಿಯ ಸೌಂದರ್ಯವನ್ನು ಬಿಂಬಿಸುವ ಚಿತ್ತಾರ
ಸಾರ್ವಜನಿಕವಾಗಿ ಅಳವಡಿಸಲಾಗಿರುವ ಹೊಸ ಡಿಜಿಟಲ್ ಫಲಕಗಳಲ್ಲಿ ರಾಜ್ಯದ ಯೋಜನೆಗಳ ಪ್ರಚಾರ ಮಾತ್ರವಲ್ಲದೆ ಜನರಿಗೆ ಮನೋರಂಜನೆಗಾಗಿ ರಾಜ್ಯದ ಕಲೆ ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳು ನಾಡು-ನುಡಿಯ ಸೌಂದರ್ಯವನ್ನು ಬಿಂಬಿಸುವ ಚಿತ್ರಗಳನ್ನು ತೋರಿಸಲಾಗುತ್ತದೆ. ಇದರಿಂದ ರಾಜ್ಯದ ಸಂಸ್ಜೃತಿಯ ಬಗ್ಗೆ ಎಲ್ಲಿದ್ದರು ಜನ ತಿಳಿದುಕೊಳ್ಳಲು ಸಹಕಾರಿಯಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ
ಮೊದಲ ಹಂತದಲ್ಲಿ ಬೆಂಗಳೂರಿನ ಮೂರು ಕಡೆ ಸೇರಿದಂತೆ ಮೈಸೂರು, ಹಾಸನ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಮತ್ತು ಮಂಗಳೂರಿನ ಜಿಲ್ಲಾ ಕೇಂದ್ರಗಳಲ್ಲಿ ಅಳವಡಿಸಲಾಗುತ್ತಿದೆ. ಹಂತ ಹಂತವಾಗಿ ಇದನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲಾಗುತ್ತಿದೆ. 2017-18ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು 175 ತಾಲ್ಲೂಕುಗಳಲ್ಲೂ ಡಿಜಿಟಲ್ ಪ್ರಚಾರ ಫಲಕಗಳನ್ನು ಅಳವಡಿಸುವುದಾಗಿ ಘೋಷಿಸಿದ್ದಾರೆ.












Click it and Unblock the Notifications