ಪುಲಿಕೇಶಿ ನಗರ : ಬಂಡಾಯದ ಬಾವುಟ ಹಾರಿಸಿದ ಪ್ರಸನ್ನ ಕುಮಾರ್
ಬೆಂಗಳೂರು, ಏಪ್ರಿಲ್ 16 : ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಭಿನ್ನಮತ ಸ್ಫೋಟಗೊಂಡಿದೆ. ಬೆಂಗಳೂರಿನ ಪುಲಿಕೇಶಿ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಪ್ರಸನ್ನ ಕುಮಾರ್ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ಸೇರ್ಪಡೆಗೆ ವಿರೋಧ
ಸೋಮವಾರ ಪ್ರಸನ್ನ ಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿದರು. '2018ರ ಚುನಾವಣೆಗೆ ಪುಲಿಕೇಶಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ' ಎಂದು ಘೋಷಣೆ ಮಾಡಿದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಪುಲಿಕೇಶಿನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ ಅಭ್ಯರ್ಥಿ. 2013ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ, ಗೆದಿದ್ದ ಅವರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ, ಪಕ್ಷದಿಂದ ಅಮಾನತುಗೊಂಡಿದ್ದರು.
ಎಲ್ಲಾ ಬಂಡಾಯ ಶಾಸಕರ ಜೊತೆ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಅಖಂಡ ಶ್ರೀನಿವಾಸಮೂರ್ತಿ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ವರಿಷ್ಠರಿಗೆ ಪತ್ರ
ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಬಿ.ಪ್ರಸನ್ನ ಕುಮಾರ್ ರಾಜ್ಯ ನಾಯಕರನ್ನು ಒತ್ತಾಯಿಸಿದ್ದರು. ಆದರೆ, ಹೈಕಮಾಂಡ್ ತೀರ್ಮಾನ ತೆಗೆದುಕೊಂಡ ಬಳಿಕ ಮೌನಕ್ಕೆ ಶರಣಾಗಿದ್ದರು.
'ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಈಗ ಪಕ್ಷ ಗೆಲ್ಲುವ ಸ್ಥಿತಿಯಲ್ಲಿದ್ದರೆ ಅದು ನಮ್ಮಿಂದ. ಆದ್ದರಿಂದ ಬೇರೆಯವರಿಗೆ ಟಿಕೆಟ್ ನೀಡುವ ಮುನ್ನ ಆಲೋಚಿಸಿ' ಎಂದು ಡಾ.ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದರು. ಆದರೆ, ಅಂತಿಮವಾಗಿ ಅಖಂಡ ಶ್ರೀನಿವಾಸಮೂರ್ತಿ ಟಿಕೆಟ್ ಪಡೆದಿದ್ದಾರೆ.
2008ರ ಚುನಾವಣೆಯಲ್ಲಿ ಬಿ.ಪ್ರಸನ್ನ ಕುಮಾರ್ 39,577 ಮತಗಳನ್ನು ಪಡೆದು ಜೆಡಿಎಸ್ ನ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಜಯಗಳಿಸಿದ್ದರು. 2013ರ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರು 48,955 ಮತಗಳನ್ನು ಪಡೆದು ಬಿ.ಪ್ರಸನ್ನ ಕುಮಾರ್ ಅವರನ್ನು ಸೋಲಿಸಿದ್ದರು.
ಬಿ.ಪ್ರಸನ್ನ ಕುಮಾರ್ ಅವರು 2013ರ ಚುನಾವಣೆಯಲ್ಲಿ 38,796 ಮತಗಳನ್ನು ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಈ ಬಾರಿ ಜೆಡಿಎಸ್‌ನಿಂದ ಬಂದ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್ ನೀಡಲಾಗಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !