Karnataka Election Results: ಬೆಂಗಳೂರಿನ ಈ 4 ಕಾಲೇಜುಗಳಲ್ಲಿ ಮತ ಎಣಿಕೆ; 1,500 ಪೊಲೀಸರಿಂದ ಬಿಗಿ ಭದ್ರತೆ
ಬುಧವಾರ, ಮೇ 10ರಂದು 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿದ್ದು, ಎಲ್ಲರ ಗಮನ ಇದೀಗ ಶನಿವಾರ, ಮೇ 13ರಂದು ಪ್ರಕಟವಾಗುವ ಫಲಿತಾಂಶದ ಮೇಲೆ ನೆಟ್ಟಿದೆ. ಮುಂದಿನ ಐದು ವರ್ಷಗಳ ಕಾಲ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಲಿದ್ದು, ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಂಗಳೂರು ನಗರದ 28 ಕ್ಷೇತ್ರಗಳ ಮತ ಎಣಿಕೆಯನ್ನು ನಾಲ್ಕು ಕಾಲೇಜುಗಳಲ್ಲಿ ನಡೆಸಲಾಗುತ್ತದೆ.

ಇನ್ನು ರಾಜಧಾನಿ ಬೆಂಗಳೂರು ನಗರದ ಚುನಾವಣಾ ಫಲಿತಾಂಶಕ್ಕೆ 1,500 ಪೊಲೀಸರನ್ನು ನಿಯೋಜಿಸಲಾಗಿದ್ದು, ಬೆಂಗಳೂರು ನಗರದ ಈ ನಾಲ್ಕು ಮತ ಎಣಿಕೆ ಕೇಂದ್ರಗಳಿಗೆ ಭದ್ರತೆ ನೀಡಲಾಗುತ್ತಿದೆ.
ವಿಠ್ಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜು, ವಸಂತ ನಗರದ ಮೌಂಟ್ ಕಾರ್ಮೆಲ್ ಕಾಲೇಜು, ಬಸವನಗುಡಿಯ ಬಿಎಂಎಸ್ ಕಾಲೇಜು ಹಾಗೂ ತಿಲಕ್ ನಗರದ ಎಸ್‍ಎಸ್‍ಎಂಆರ್‌ವಿ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಭಾರೀ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.
ವಸಂತ ನಗರದ ಮೌಂಟ್ ಕಾರ್ಮೆಲ್ ಕಾಲೇಜಿಗೆ ಇಬ್ಬರು ಡಿಸಿಪಿ, 4 ಎಸಿಪಿ, 20 ಇನ್ಸ್‌ಪೆಕ್ಟರ್, 72 ಪಿಎಸ್‍ಐ ಸೇರಿ 506 ಪೊಲೀಸ್ ಸಿಬ್ಬಂದಿಗಳನ್ನು ಬಿಗಿ ಭದ್ರತೆಗೆ ನಿಯೋಜಿಸಲಾಗಿದೆ.

ಬಸವನಗುಡಿಯ ಬಿಎಂಎಸ್ ಕಾಲೇಜಿಗೆ ಇಬ್ಬರು ಡಿಸಿಪಿ, 4 ಎಸಿಪಿ, 18 ಇನ್ಸ್‌ಪೆಕ್ಟರ್, 40 ಪಿಎಸ್‍ಐ ಸೇರಿ 275 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ತಿಲಕ್ ನಗರದ ಎಸ್‍ಎಸ್‍ಎಂಆರ್‌ವಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರಕ್ಕೆ ಇಬ್ಬರು ಡಿಸಿಪಿ, 5 ಎಸಿಪಿ, 10 ಇನ್ಸ್‌ಪೆಕ್ಟರ್, 14 ಪಿಎಸ್‍ಐ ಸೇರಿ 399 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಇಬ್ಬರು ಡಿಸಿಪಿ, 3 ಎಸಿಪಿ, 6 ಇನ್ಸ್‌ಪೆಕ್ಟರ್, 15 ಪಿಎಸ್‍ಐ ಸೇರಿ 214 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಒಟ್ಟಿನಲ್ಲಿ ಶನಿವಾರ ಬೆಳಗ್ಗೆ 5 ಗಂಟೆಗೆ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ ಎಣಿಕೆ ಕೇಂದ್ರದ ಬಳಿ ಹಾಜರಿರಲು ಸೂಚನೆ ನೀಡಲಾಗಿದೆ. ಅಲ್ಲದೆ ಸಂಬಂಧಪಟ್ಟ ಡಿಸಿಪಿಗಳ ಬಳಿ ರಿಪೋರ್ಟ್ ಮಾಡಿಕೊಳ್ಳಲು ಕೂಡ ಸೂಚಿಸಲಾಗಿದೆ.
ಬೆಂಗಳೂರಿನ ಈ ನಾಲ್ಕು ಮತ ಎಣಿಕೆ ಕೇಂದ್ರಗಳಿಗೆ ಸ್ಥಳೀಯ ಪೊಲೀಸರಲ್ಲದೆ ಕೇಂದ್ರದ ಸೇನಾ ತುಕಡಿಗಳು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.
ಮತ ಎಣಿಕೆ ಕೇಂದ್ರಗಳ ಬಳಿ ಕೆಎಸ್‌ಆರ್‌ಪಿ, ಸಿಎಆರ್, ಡಿಸ್ವ್ಯಾಟ್, ವಾಟರ್ ಜೆಟ್, ಖಾಲಿ ವಾಹನಗಳನ್ನು ನಿಯೋಜಿಸಲಾಗಿದೆ. ಈ ಎಲ್ಲ ಭದ್ರತೆಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಕಣ್ಣಿಡಲಾಗುತ್ತದೆ.












Click it and Unblock the Notifications