ಪಂಚರತ್ನ ಯೋಜನೆಗಳ ಜಾರಿಗೆ ತೆರಿಗೆಯಿಲ್ಲ, ನಯಾಪೈಸೆ ಸಾಲ ಮಾಡಲ್ಲ: ಎಚ್.ಡಿ.ಕುಮಾರಸ್ವಾಮಿ ಭರವಸೆ
ಬೆಂಗಳೂರು, ಏಪ್ರಿಲ್. 05: ವಿಧಾನಸಭಾ ಚುನಾವಣೆ ಹಿನ್ನೆಲೆ ಆರಂಬವಾಗಿರುವ ಜೆಡಿಎಸ್‌ನ ಪಂಚರತ್ನ ಯೋಜನೆಗಳನ್ನು ಜಾರಿ ತರಲು ನಾನು ಒಂದು ಪೈಸೆ ತೆರಿಗೆ ಹಾಕುವುದಿಲ್ಲ ಹಾಗೂ ಒಂದು ರೂಪಾಯಿ ಸಾಲ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಗಳು ಬೆಂಗಳೂರಿನಲ್ಲಿ ಬಡತನ ನಿವಾರಿಸುವ ನಿಟ್ಟಿನಲ್ಲಿ ಸಂಜೀವಿನಿಯಾಗಿ ಕೆಲಸ ಮಾಡುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಸಂಜೆ ಚಾಮರಾಜಪೇಟೆಯಲ್ಲಿ ಪಂಚರತ್ನ ರಥಯಾತ್ರೆ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಜಾಗತಿಕವಾಗಿ ಹೆಸರು ಮಾಡಿರುವ ಮಹಾನಗರದಲ್ಲಿ ಬಡತನ ಇನ್ನೂ ತಾಂಡವವಾಡುತ್ತಿರುವುದು ಅತ್ಯಂತ ನೋವಿನ ಸಂಗತಿ. ಈ ಬಡತನಕ್ಕೆ ಪರಿಹಾರ ಪಂಚರತ್ನಗಳಲ್ಲಿ ಇದೆ. ಈ ಯೋಜನೆಗಳಿ ಸಂಜೀವಿನಿಯಾಗಿ ಕೆಲಸ ಮಾಡುತ್ತವೆ ಎಂದಿದ್ದಾರೆ.

"ಒಂದು ಬಾರಿ ನನಗೆ ಅವಕಾಶ ಕೊಡಿ, ನಾನು ಇನ್ನೂ ಇಪ್ಪತ್ತೈದು ವರ್ಷ ಅಧಿಕಾರ ಕೊಡಿ ಎಂದು ಕೇಳುವುದಿಲ್ಲ. ಅಮೃತಕಾಲ ತರುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಅವರು ಯಾರಿಗೆ ಅಮೃತಕಾಲ ತರುತ್ತಾರೆ.? ಈವರೆಗೆ ಅಧಿಕಾರದಲ್ಲಿದ್ದ ಅಲ್ಪ ಸಮಯದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ. ಪಂಚರತ್ನ ಯೋಜನೆಗಳ ಜಾರಿ ನನ್ನ ಜೀವಿತಾವಧಿಯ ಕನಸು. ಈ ಯೋಜನೆಗಳು ಜಾರಿಗೆ ಬಂದರೆ ಎಲ್ಲರ ಬದುಕು ಹಸನಾಗುತ್ತದೆ" ಎಂದು ಭರವಸೆ ನೀಡಿದ್ದಾರೆ.
'ಪಂಚರತ್ನ ಯೋಜನೆಗಳು ಜಾತಿ ಧರ್ಮ ಮೀರಿದ ಕಾರ್ಯಕ್ರಮಗಳು. ನಿತ್ಯ ಬೆಳಗಾದರೆ ನನ್ನ ಮನೆಯ ಹತ್ತಿರ ಬರುವ ಜನರ ನೋವನ್ನು ಕಂಡು ರೂಪಿಸಿದ ಕಾರ್ಯಕ್ರಮ ಇದು. ಈ ಯೋಜನೆಗಳು ಜಾರಿಯಾದರೆ ಕರ್ನಾಟಕ ಸ್ವರ್ಗ ಸದೃಶ ರಾಜ್ಯವಾಗುತ್ತದೆ ಎಂದು ಮಾಧ್ಯಮಗಳೇ ಬರೆದಿವೆ. ದಯಮಾಡಿ ಒಮ್ಮೆ ಅವಕಾಶ ಕೊಡಿ" ಎಂದು ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದ್ದಾರೆ.

ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ, ಮಾರಣಾಂತಿಕ ಕ್ಯಾನ್ಸರ್, ಬೋನ್ ಮ್ಯಾರೋ, ಹೃದ್ರೋಗ ಸೇರಿದಂತೆ ಸರ್ವ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ, ಐದು ಲಕ್ಷ ರೂಪಾಯಿ ಮೊತ್ತದ ಉಚಿತ ಮನೆ, ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬುವ ರೀತಿಯಲ್ಲಿ ಉದ್ಯೋಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ಪಂಚರತ್ನ ಯೋಜನೆಗಳಲ್ಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.
*ಅಡುಗೆ ಅನಿಲ ಸಿಲಿಂಡರ್ ಗೆ 50% ಸಬ್ಸಿಡಿ*
ಕೇಂದ್ರ ಸರಕಾರ ಉಜ್ವಲ ಯೋಜನೆ ಜಾರಿಗೆ ತಂದು ಅಡುಗೆ ಅನಿಲ ಸಿಲಿಂಡರ್ ಉಚಿತ ಎಂದು ಹೇಳಿತು. ಆದರೆ, ಈಗ 1,150 ರೂಪಾಯಿಗೆ ಸಿಲಿಂಡರ್ ಮಾರುತ್ತಿದೆ. ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಸಿಲಿಂಡರ್ ಒಂದಕ್ಕೆ 50% ಸಬ್ಸಿಡಿ ಕೊಡುತ್ತೇವೆ. ಅಲ್ಲದೆ, 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ 5000 ರೂಪಾಯಿ, ವಿಧವೆಯರು ವಿಕಲಚೇತನರಿಗೆ ಮಾಸಿಕ 2500 ರೂಪಾಯಿ, ಆಟೋ ಚಾಲಕರಿಗೆ ಮಾಸಿಕ 2000 ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಬುಧವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಗಾಂಧೀನಗರ ಹಾಗೂ ಚಾಮರಾಜಪೇಟೆ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಸಿದ್ದಾರೆ. ಕಾಟನ್ ಪೇಟೆಯಲ್ಲಿರುವ ಸಿಸಿಬಿ ಕಚೇರಿ ರಸ್ತೆಯಿಂದ ಆರಂಭವಾದ ರಥಯಾತ್ರೆಗೆ ಕ್ಷೇತ್ರದ ಮುಖಂಡರಾದ ಇಮ್ರಾನ್ ಪಾಷಾ ಮತ್ತು ಗೋವಿಂದರಾಜು ಸಾಥ್ ನೀಡಿದ್ದಾರೆ. ಗಾಂಧೀನಗರದ ಮಾಗಡಿ ರಸ್ತೆ, ಓಕಳಿಪುರ, ಶ್ರೀರಾಮಪುರ ಮುಂತಾದ ಪ್ರದೇಶಗಳಲ್ಲೂ ಮತಬೇಟೆ ನಡೆಸಿದ್ದಾರೆ.
ರಾಜ್ಯದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ 224 ಕ್ಷೇತ್ರಗಳಿಗೂ ಒಂದೇ ಬಾರಿ ಮತದಾನ ನಡೆಯಲಿದ್ದು, ಪ್ರಮುಖವಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜಾತ್ಯತೀತ ಜನತಾ ದಳ ನಡುವೆ ಚುನಾವಣಾ ಕದನ ನಡೆಯಲಿದೆ.












Click it and Unblock the Notifications