'ಝೀರೊ' ಅನುದಾನ ಸರ್ಕಾರದಿಂದ ರಾಜ್ಯದಲ್ಲಿ ತಾರತಮ್ಯ: ಬಸವರಾಜ ಬೊಮ್ಮಾಯಿ
ಚಿಕ್ಕಬಳ್ಳಾಪುರ, ಅಕ್ಟೋಬರ್ 11: ಸದ್ಯ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಇದು ಝೀರೊ ಅನುದಾನದ ಸರ್ಕಾರವಾಗಿದೆ. ಯಾರಿಗೂ ಅನುದಾನ ಬಿಡುಗಡೆ ಮಾಡದೇ ತಾರತಮ್ಯ ಮಾಡಲಾಗುತ್ತಿದೆ. ನಾವು ಅನುದಾನ ಹಂಚಿಕೆಯಲ್ಲಿ ಯಾರಿಗೂ ತಾರತಮ್ಯ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ವಿಧಾನಸೌಧದ ಬಳಿ ತನ್ನ ಕ್ಷೇತ್ರಕ್ಕೆ ಅನುದಾನ ನೀಡಿಲ್ಲವೆಂದು ನಡೆದ ಮಾಜಿ ಸಚಿವ ಮುನಿರತ್ನ ಅವರ ಪ್ರತಿಭಟನೆ ಕುರಿತ ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡಿದ್ದೇವೆ. ನಾವು ಎಲ್ಲರನ್ನೂ ಸಮಾನವಾಗಿ ನೋಡಿದ್ದೆವು ಎಂದು ತಿಳಿಸಿದರು.

ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಅವರು ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ನೀಡುವುದಾಗಿ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಲಕೃಷ್ಣ ಅವರು ಸರ್ಕಾರ ಅಲ್ಲ. ಅವರು ಮೊದಲು ತಮ್ಮ ಅನುದಾನ ಪಡೆಯಲಿ. ಮಾಗಡಿಯಲ್ಲಿ ಹಿಂದೆ ನಮ್ಮ ಶಾಸಕರು ಇರಲಿಲ್ಲ ಆದರೂ ಅವು ಅನುದಾನ ನೀಡಿದ್ದೆವು. ಬಾಲಕೃಷ್ಣ ಅವರು ಮೊದಲು ತಮಗೆ ಅನುದಾನ ಪಡೆಯಲಿ ನಾವು ನಮ್ಮ ಅನುದಾನ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸರ್ಕಾರದಲ್ಲಿ ಯಾರಿಗೂ ಅನುದಾನ ಇಲ್ಲ. ಇದು ಝಿರೊ ಅನುದಾನ ಸರ್ಕಾರ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಬೊಮ್ಮಾಯಿ ಆರೋಪ ಮಾಡಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೊಂದು ರೈತ ವಿರೋಧಿ ಸರ್ಕಾರವಾಗಿದೆ. ನಮ್ಮ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡದೆ ಬಂದ್ ಆಗಿವೆ. ರಾಜ್ಯ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹರಿಗೆ 2000 ರೂಪಾಯಿ ಹಣ ನೀಡದೇ ಯೋಜನೆ ಸ್ಥಗಿತಗೊಳಿಸಿದೆ.

ಸರ್ಕಾರದಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ದೊರೆತಿಲ್ಲ. ರೈತರ ಮಕ್ಕಳಿಗೆ ಸಹಾಯವಾಗಿದ್ದ 'ವಿದ್ಯಾನಿಧಿ ಯೋಜನೆ, ರೈತ ಶಕ್ತಿ ಯೋಜನೆಯನ್ನು ಬಿಜೆಪಿ ಸರ್ಕಾರ ನೀಡಿತ್ತು. ಅವೆಲ್ಲ ರೈತ-ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಅನುದಾನ ಬಿಡುಗಡೆ ಘರ್ಷಣೆ ಹಿನ್ನೆಲೆ
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಪ್ರತಿನಿಧಿಸುತ್ತಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತ್ತು ಮುನಿರತ್ನ ಅವರ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು, ಕೊನೆಗೆ ಮುನಿರತ್ನ ಜಯಸಾಧಿಸಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಈಗಿನ ಕಾಂಗ್ರೆಸ್ ಸರ್ಕಾರ ಶಾಸಕ ಮುನಿರತ್ನ ಅವರ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಮುನಿರತ್ನ ಅವರು ಏಕಾಂಗಿಯಾಗಿ ವಿಧಾನಸೌಧ ಬಳಿ ಬುಧವಾರ ಮೌನವಾಗಿ ಧರಣಿ ನಡೆಸಿದರು. ಅನುದಾನ ಬಗ್ಗೆ ಮಾತನಾಡಲು ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ನಗರದ ಅರಮನೆ ಮೈದಾನಕ್ಕೆ ತೆರಳಿದ್ದಾರೆ ಎನ್ನಲಾಗಿದೆ.












Click it and Unblock the Notifications