Chitra Santhe 2025: ಮತ್ತೆ ಬಂತು ಚಿತ್ರಸಂತೆ, ಬೆಂಗಳೂರಿಗರೇ ದಿನಾಂಕ, ವಿಶೇಷತೆ ತಿಳಿಯಿರಿ
ಬೆಂಗಳೂರು, ಡಿಸೆಂಬರ್ 15: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ, ಕರಗ ಉತ್ಸವದಂತೆ ಪ್ರತಿ ವರ್ಷ ಗಮನ ಸೆಳೆಯುವುದು ಚಿತ್ರಸಂತೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ವಾರ್ಷಿಕ ಚಿತ್ರಸಂತೆಯ ದಿನಾಂಕ ಘೋಷಣೆಯಾಗಿದೆ. 2025ನೇ ಸಾಲಿನ ಚಿತ್ರಸಂತೆ ಜನವರಿಯಲ್ಲಿ ನಡೆಯಲಿದ್ದು, ಈ ಬಾರಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಕಲಾವಿದರ, ಕಲಾ ಆಸಕ್ತರು ಒಂದು ಕಡೆ ಸೇರಲು ಚಿತ್ರಸಂತೆ ಪ್ರಮುಖ ವೇದಿಕೆಯಾಗಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು ನಗರದ ಕುಮಾರಕೃಪಾ ರಸ್ತೆಯಲ್ಲಿ ಜನವರಿ 5ರ ಭಾನುವಾರ ಚಿತ್ರಸಂತೆಯನ್ನು ಆಯೋಜನೆ ಮಾಡಿದೆ. ಇದು ವಾರ್ಷಿಕ ಕಲಾ ಪ್ರದರ್ಶನವಾಗಿದ್ದು, ಚಿತ್ರಸಂತೆಯ 22ನೇ ಆವೃತ್ತಿಯಲ್ಲಿ 1,200ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಚಿತ್ರಕಲಾ ಪರಿಷತ್ತು ಹೇಳಿದೆ.

ಪ್ರತಿವರ್ಷ ಜನವರಿ ತಿಂಗಳ ಮೊದಲ ಭಾನುವಾರ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ಆಯೋಜನೆ ಮಾಡಲಾಗುತ್ತದೆ. ಅಂದು ರಸ್ತೆಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿರುತ್ತದೆ. ರಸ್ತೆ ಕಲಾವಿದರಿಗೆ, ಕಲಾಸಕ್ತರಿಗೆ ಮೀಸಲಾಗಿರುತ್ತದೆ. ಈ ಬಾರಿಯೂ ಹಲವು ಆಕರ್ಷಣೆಗಳನ್ನು ಚಿತ್ರಸಂತೆ ಹೊತ್ತು ತಂದಿದೆ.
ಸಾಮಾಜಿಕ ಸಂದೇಶ: 2025ನೇ ಸಾಲಿನ ಚಿತ್ರಸಂತೆಯ ಮೂಲಕ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹದ ಕುರಿತು ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ. ಜನವರಿ 5ರಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯ ತನಕ ಚಿತ್ರಸಂತೆಯಲ್ಲಿ ಕಲಾಕೃತಿಗಳ ಪ್ರದರ್ಶನ, ಮಾರಾಟ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿವೆ.
ನವೆಂಬರ್ ತಿಂಗಳಿನಲ್ಲಿಯೇ ಕರ್ನಾಟಕ ಚಿತ್ರಕಲಾ ಪರಿಷತ್ತು 2025ರ ಚಿತ್ರಸಂತೆಗೆ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಚಿತ್ರಸಂತೆಯಲ್ಲಿ ಭಾಗಿಯಾಗಲು ನೋಂದಣಿಯನ್ನು ಮಾಡಿಕೊಂಡಿದ್ದಾರೆ.
ಸುಮಾರು 3 ಸಾವಿರ ಅರ್ಜಿಗಳ ಪೈಕಿ ವಿವಿಧ ಮಾನದಂಡಗಳ ಆಧಾರದ ಮೇಲೆ 1500ಕ್ಕೂ ಅಧಿಕ ಕಲಾವಿದರ ಅರ್ಜಿಗಳನ್ನು ಅಂಗೀಕಾರ ಮಾಡಲಾಗಿದೆ. ವೃತ್ತಿಪರ ಕಲಾವಿದರ ಜೊತೆಗೆ ಹವ್ಯಾಸಿ ಕಲಾವಿದರಿಗೆ ಸಹ ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದೆ.
100 ರೂ.ಗಳಿಂದ ಹಿಡಿದು ಲಕ್ಷಾಂತರ ರೂ.ಗಳ ವರೆಗಿನ ವಿವಿಧ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕುಂಚ ಮತ್ತು ಪೆನ್ಸಿಲ್‌ನಿಂದ ಸ್ಥಳದಲ್ಲಿಯೇ ಭಾವಚಿತ್ರಗಳನ್ನು ಬಿಡಿಸಿ ಕೊಡುವ ಕಲಾವಿದರಿಗೂ ಅವಕಾಶವನ್ನು ನೀಡಲಾಗಿದೆ.
ಹವ್ಯಾಸಿ ಕಲಾವಿದರು, ಕಲಾ ವಿದ್ಯಾರ್ಥಿಗಳು, ವಿವಿಧ ರಾಜ್ಯಗಳ ಕಲಾವಿದರು ಈ ಬಾರಿಯ ಚಿತ್ರಸಂತೆಯಲ್ಲಿ ಪಾಲ್ಗೊಂಡು ತಮ್ಮ ಕಲಾಕೃತಿಗಳನ್ನು ಪ್ರದರ್ಶನ, ಮಾರಾಟ ಮಾಡಲಿದ್ದಾರೆ. ಒಂದು ದಿನ ನಡೆಯುವ ಈ ಚಿತ್ರಸಂತೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮೈಸೂರಿನ ಸಂಪ್ರದಾಯಿಕ ಶೈಲಿಯ ಕಲಾಕೃತಿಗಳು, ರಾಜಸ್ಥಾನಿ ಶೈಲಿ, ಮಧುಬನಿಯ ಶೈಲಿ, ತೈಲ ಮತ್ತು ಜಲ ವರ್ಣದ ಕಲಾಕೃತಿಗಳು ಲಭ್ಯವಿರಲಿವೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಮೂಲಗಳು ತಿಳಿಸಿವೆ. ವ್ಯಂಗ್ಯ ಚಿತ್ರಗಳನ್ನು ಸಹ ಪ್ರದರ್ಶನ ಮಾಡಲು ಅವಕಾಶವನ್ನು ನೀಡಲಾಗಿದೆ.
ಚಿತ್ರಸಂತೆ ಕಾರಣಕ್ಕಾಗಿ ಕುಮಾರಕೃಪಾ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಆದ್ದರಿಂದ ಬೆಂಗಳೂರು ನಗರ ಸಂಚಾರಿ ಪೊಲೀಸರು ಶಿವಾನಂದ್ ಸರ್ಕಲ್ ಕಡೆಯಿಂದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸುತ್ತಾರೆ.












Click it and Unblock the Notifications