Karnataka Budget 2023: ಮೇಕೆದಾಟು ಯೋಜನೆಗೆ ಭೂಸ್ವಾಧೀನ: ಎತ್ತಿನಹೊಳೆ ಯೋಜನೆಗೆ ವೇಗ, ಉ.ಕ. ನೀರಿನ ಸಮಸ್ಯೆಗೆ ಪರಿಹಾರ!
ಬೆಂಗಳೂರು, ಜುಲೈ 7: ಕಾಂಗ್ರೆಸ್ ನಾಯಕರ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಜೆಟ್‌ನಲ್ಲಿ ಕೂಡ ಸಿದ್ದರಾಮಯ್ಯ ಮೇಕೆದಾಟು ಯೋಜನೆ ಕುರಿತಂತೆ ಪ್ರಸ್ತಾಪಿಸಿದ್ದು, ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.
ಬಜೆಟ್ ಮಂಡನೆ ವೇಳೆ ಮಾತನಾಡಿದ ಅವರು, ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿ ಹಾಗೂ ಪರಿಸರ ತೀರುವಳಿ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ತೀರುವಳಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ಪರಿಹಾರ ಅರಣ್ಯೀಕರಣಕ್ಕೆ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.

ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರೂ, ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ಈ ಯೋಜನೆ ಜಾರಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದ್ದು, ಈ ಯೋಜನೆಯಿಂದ ತಮಿಳುನಾಡಿಗೆ ಯಾವ ಹಾನಿ ಆಗಲ್ಲ, ಸಮುದ್ರಕ್ಕೆ ಸೇರುವ ಹೆಚ್ಚುವರಿ ನೀರು ಸದ್ಭಳಕೆಯಾಗಲಿದೆ ಎಂದು ವಾದಿಸಿದ್ದಾರೆ.
ಎತ್ತಿನಹೊಳೆ ಯೋಜನೆ ವೆಚ್ಚ ಹೆಚ್ಚಳ
ಕಾಂಗ್ರೆಸ್ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಎತ್ತಿನಹೊಳೆ ಕಾಮಗಾರಿ ಕೂಡ ವೇಗ ಪಡೆದುಕೊಳ್ಳಲಿದೆ. 12,912 ಕೋಟಿ ರೂ. ಮೊತ್ತದ ಎತ್ತಿನ ಹೊಳೆ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳ್ಳದ ಕಾರಣ, ಕಾಮಗಾರಿ ವೆಚ್ಚ ಹೆಚ್ಚಾಗಿದ್ದು, ಯೋಜನೆಯು 23,252 ಕೋಟಿ ರೂ. ಮೊತ್ತಕ್ಕೆ ಪರಿಷ್ಕೃತಗೊಂಡಿದೆ.

ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಆದ್ಯತೆಯ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜಲಸಂಪನ್ಮೂಲ ಇಲಾಖೆಯಡಿ ಏಪ್ರಿಲ್ 1, 2023ರಂದು ಅನುಮೋದಿಸಲಾಗಿರುವ ಯೋಜನೆಗಳಿಗೆ ಒಂದು ಲಕ್ಷ ಕೋಟಿ
ರೂ. ಗಳನ್ನು ಒದಗಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ. ಜಲ ಸಂಪನ್ಮೂಲ ಇಲಾಖೆಯಡಿ ಮಂದಗತಿಯಲ್ಲಿ ಸಾಗುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವುದರೊಂದಿಗೆ ಪ್ರಸಕ್ತ ಸಾಲಿನಲ್ಲಿ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಸುಮಾರು 25,948 ಹೆಕ್ಟೇರ್ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಕುಲಹಳ್ಳಿ-ಹನ್ನೂರು, ತಿಮ್ಮಾಪುರ, ಸಸಾಲಟ್ಟಿ-ಶಿವಲಿಂಗೇಶ್ವರ ಮತ್ತು ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಸುಮಾರು 39,134 ಹೆಕ್ಟೇರ್ ಅಚ್ಚುಕಟ್ಟು ಸ್ಥಿರೀಕರಣ ಮಾಡಲಾಗುವುದು. ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 19 ಕೆರೆ ತುಂಬಿಸುವ ಯೋಜನೆಗಳನ್ನು 770 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 899 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಸಿದ್ದರಾಯಮ್ಮ ಘೋಷಿಸಿದ್ದಾರೆ.
ಮಹದಾಯಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲು ಯತ್ನ
ಮಧ್ಯ ಕರ್ನಾಟಕದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರವಿದ್ದಾಗ್ಯೂ, ರಾಷ್ಟ್ರೀಯ ಯೋಜನೆಯನ್ನಾಗಿ ಇಲ್ಲಿಯವರೆಗೂ ಅಧಿಕೃತವಾಗಿ ಅನುಮೋದಿಸಿರುವುದಿಲ್ಲ. ಕೇಂದ್ರ ಸರ್ಕಾರವು 2023-24ನೇ ಸಾಲಿನ ತನ್ನ ಆಯವ್ಯಯದಲ್ಲಿ 5,300 ಕೋಟಿ ರೂ.ಗಳ ಅನುದಾನವನ್ನು ಭದ್ರಾ ಯೋಜನೆಗೆ ಘೋಷಿಸಿದ್ದು ಆ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಯ ಅನುಷ್ಠಾನಕ್ಕೆ ಕ್ರಮ ವಹಿಸುವ ಭರವಸೆ ನೀಡಿದ್ದಾರೆ.
ಮಹದಾಯಿ ನ್ಯಾಯಾಧಿಕರಣದಿಂದ ಕಳಸಾ ಮತ್ತು ಬಂಡೂರಾ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ 3.90 ಟಿ.ಎಂ.ಸಿ. ನೀರಿನ ಬಳಕೆಗಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಅವಶ್ಯಕವಿರುವ ಅರಣ್ಯ ತೀರುವಳಿ ಪಡೆದು, ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲೆ ಬಳಿ ಸಮತೋಲನಾ ಜಲಾಶಯ (Balancing reservoir) ನಿರ್ಮಾಣ ಯೋಜನೆಯನ್ನು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ ಯೋಜನೆ ಜಾರಿಗೊಳಿಸಲು ಕ್ರಮ ವಹಿಸುವುದಾಗಿ ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆ.ಸಿ. ವ್ಯಾಲಿ ಮತ್ತು ಹೆಚ್.ಎನ್. ವ್ಯಾಲಿ ಯೋಜನೆಗಳಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಯೋಜನೆಯ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿ ಈ ಜಿಲ್ಲೆಗಳ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡು ರೈತರು ಸಂತಸಗೊಂಡಿದ್ದಾರೆ. ಪ್ರಸ್ತುತ ಎರಡನೇ ಹಂತದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 296 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 529 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.












Click it and Unblock the Notifications