KSRTC: ಬಸ್ ಟಿಕೆಟ್ ದರ ಏರಿಕೆ ವಿರುದ್ಧ ಸಮರ ಸಾರಲು ಸಜ್ಜಾದ ಬಿಜೆಪಿ
ಬೆಂಗಳೂರು, ಜನವರಿ 01: ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ನಾಲ್ಕು ನಿಗಮಗಳ ಬಸ್ ದರ ಹೆಚ್ಚಳಕ್ಕೆ ಚಿಂತನೆ ನಡೆಸಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿಯು ದರ ಏರಿಕೆ ಮಾಡಿ, ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಎಚ್ಚರಿಕೆ ನೀಡಿದೆ. ಹೊಸ ವರ್ಷಕ್ಕೆ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬೆಲೆಯೇರಿಕೆಯ ಗಿಫ್ಟ್ ನೀಡಿದೆ ಎಂದು ವಿಪಕ್ಷ ದೂರು. ಎಂಎಲ್‌ಸಿ ಸಿಟಿ ರವಿ ಅವರು ಸಹ ಗುಡುಗಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ (KKRTC) ಬಸ್ ದರ ಏರಿಕೆ ಮಾಡುವಂತೆ ಈಗಾಗಲೇ ಕೆಲವು ಬಾರಿ ಮನವಿಗಳು ಸರ್ಕಾರಕ್ಕೆ ಸಲ್ಲಿಕೆ ಆಗಿವೆ. ಇದಕ್ಕೆ ಸರ್ಕಾರ ಒಪ್ಪಿದರೆ ಶೇಕಡಾ 12ರಿಂದ 15ರಷ್ಟು ಸಾರಿಗೆ ಬಸ್ ಪ್ರಯಾಣದ ದರ ಏರಿಕೆ ಆಗಲಿದೆ.

ಇದನ್ನು ಆಕ್ಷೇಪಿಸಿರುವ ಕರ್ನಾಟಕ ಬಿಜೆಪಿಯು ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಜನರಿಗೆ ಸರ್ಕಾರ ಬೆಲೆಯೇರಿಕೆಯ ಗಿಫ್ಟ್ ನೀಡಿದೆ. ಮೊದಲೇ ಬೆಲೆ ಹೆಚ್ಚಳದಿಂದ ಬಸವಳಿಯುತ್ತಿರುವ ಕನ್ನಡಿಗರಿಗೆ ಈಗ ಗಾಯದ ಮೇಲೆ ಬರೆ ಎಂಬಂತೆ, ಬಸ್ ದರ ಸಹ ಹೆಚ್ಚಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಸ್ ದರವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಬೇಡಿ. ಒಂದು ವೇಳೆ ಹೆಚ್ಚಿಸಿದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಲಾಗುವುದು ಎಂದು ಬಿಜೆಪಿ ಎಚ್ಚರಿಸಿದೆ.
ಬೆಲೆ ಏರಿಕೆ -ಭ್ರಷ್ಟಾಚಾರವೇ ಕಾಂಗ್ರೆಸ್ ಸಾಧನೆ
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಸಿಟಿ. ರವಿ ಅವರು, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರವೇ ಕಾಂಗ್ರೆಸ್ಸಿನ ಸಾಧನೆಯಾಗಿದೆ. ವಿದ್ಯುತ್ ದರದಿಂದ ಹಿಡಿದು ಹಾಲು, ಆಲ್ಕೋಹಾಲ್‌ವರೆಗೆ ಬೆಲೆ ಏರಿಕೆಯಾಗಿದೆ ಎಂದು ಅವರು ಸರ್ಕಾರದ ಆಡಳಿತ ವಿರುದ್ಧ ಕಿಡಿ ಕಾರಿದರು.
ಗರ್ಭಿಣಿಯರ ಸಾವು, ರೈತರು, ಗುತ್ತಿಗೆದಾರರು, ಸರ್ಕಾರಿ ಅಧಿಕಾರಿ, ನೌಕರರಿಗೆ ಆತ್ಮಹತ್ಯೆ ಭಾಗ್ಯ ಇದು ಈ ಸರ್ಕಾರದ ಒಂದೂವರೆ ವರ್ಷದ ಕಾರ್ಯವಿಧಾನದ ಅವಲೋಕನವಾಗಿದೆ ಎಂದು ಟೀಕಿಸಿದರು.
ಬೆಲೆ ಏರಿಕೆ ಸರ್ಕಾರ ನಿರ್ಧರಿಸುತ್ತದೆ: ಸಾರಿಗೆ ಸಚಿವ
ನಾಲ್ಕು ನಿಮಗಳಲ್ಲಿ ಹಣ ಕೊರತೆ ಇದೆ. ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ. ಬರುವ ಆದಾಯದಲ್ಲಿ ನಿರ್ವಹಣೆ, ನೌಕರರ ವೇತನ, ಇಂಧನಕ್ಕೆ ಖರ್ಚಾಗುತ್ತದೆ. ಇದೆಲ್ಲ ಕಾರಣದಿಂದ ತಿಂಗಳುಗಳಿಂದ ಸಾರಿಗೆ ನಿಮಗದ ಅಧಿಕಾರಿಗಳು ಬಸ್ ಪ್ರಯಾಣದ ದರ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸುತ್ತಲೇ ಇದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದರು.
ಈ ಪ್ರಸ್ತಾವನೆಗಳು ರಾಜ್ಯ ಸರ್ಕಾರದ ಮುಂದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಬಗ್ಗೆ ಚರ್ಚಿ ನಡೆದು ತೀರ್ಮಾನವಾಗಲಿದೆ. ಸದ್ಯ ಈವರೆಗೆ ಹಲವು ಬಾರಿ ಮನವಿ ಬಂದರೂ ಯಾವ ತೀರ್ಮಾನವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದರು.












Click it and Unblock the Notifications