Karnataka Bandh; ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರ ಗಮನಕ್ಕೆ
ಬೆಂಗಳೂರು, ಸೆಪ್ಟೆಂಬರ್ 28; ಕಾವೇರಿ ವಿವಾದದ ಹಿನ್ನಲೆಯಲ್ಲಿ ಕನ್ನಡ ಒಕ್ಕೂಟ ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. 1 ಸಾವಿರಕ್ಕೂ ಹೆಚ್ಚು ಅಧಿಕ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ.
ಕರ್ನಾಟಕ ಬಂದ್‌ಗೆ ಟ್ಯಾಕ್ಸಿ ಚಾಲಕರು ಸಹ ಬೆಂಬಲ ನೀಡಿದ್ದಾರೆ. ಆದ್ದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪ್ರಯಾಣಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಬಿಎಲ್‌ಆರ್ ಪ್ರಯಾಣಿಕರಿಗೆ ಸೂಚನೆಯೊಂದನ್ನು ನೀಡಿದೆ.

ಪ್ರಯಾಣಿಕರಿಗೆ ಸೂಚನೆ; ಸೆಪ್ಟೆಂಬರ್ 29, 2023ರಂದು ವಿವಿಧ ಸಂಘಟನೆಗಳು ಕರೆದಿರುವ ಒಂದು ದಿನದ ಕರ್ನಾಟಕ ಬಂದ್‌ನಿಂದಾಗಿ, ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ಪ್ರಯಾಣದ ಸಮಯದಲ್ಲಿ ಇದನ್ನು ಗಮನದಲ್ಲಿರಿಸಿಕೊಳ್ಳಬೇಕಾಗಿ ವಿನಂತಿ ಎಂದು ಹೇಳಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳು, ಸರ್ಕಾರ ಮತ್ತು ಮಾಧ್ಯಮಗಳಿಂದ ಬಿಡುಗಡೆಯಾಗುವ ಸೂಚನೆಗಳನ್ನು ಅನುಸರಿಸುವಂತೆ ಪ್ರಯಾಣಿಕರನ್ನು ವಿನಂತಿಸಲಾಗಿದೆ ಎಂದು ತಿಳಿಸಲಾಗಿದೆ.
ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಮಾಡಲಾಗಿತ್ತು. ಆಗಲೂ ವಿಮಾನ ನಿಲ್ದಾಣದ ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಒಟ್ಟು 13 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು.
ಶುಕ್ರವಾರ ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್‌ಗೆ ಟ್ಯಾಕ್ಸಿ, ಕ್ಯಾಬ್, ಆಟೋ, ಓಲಾ ಮತ್ತು ಊಬರ್ ಚಾಲಕರ ಸಂಘ ಬೆಂಬಲ ಘೋಷಣೆ ಮಾಡಿವೆ. ಆದ್ದರಿಂದ ವಿಮಾನ ನಿಲ್ದಾಣದ ಟ್ಯಾಕ್ಸಿ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
Passengers are requested to follow alerts from respective airlines, law enforcement agencies and media releases for further updates.
— BLR Airport (@BLRAirport) September 28, 2023
ಹೆಚ್ಚಿನ ಮಾಹಿತಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳು, ಸರ್ಕಾರ ಮತ್ತು ಮಾಧ್ಯಮಗಳಿಂದ ಬಿಡುಗಡೆಯಾಗುವ ಸೂಚನೆಗಳನ್ನು ಅನುಸರಿಸುವಂತೆ ಪ್ರಯಾಣಿಕರನ್ನು ವಿನಂತಿಸಲಾಗಿದೆ.… pic.twitter.com/q4uaIetxPr
ಬಸ್ ಸೇವೆ ಇರಲಿದೆ; ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರೂ ಸಹ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನೌಕರರಿಗೆ ಕಡ್ಡಾಯ ಹಾಜರಾತಿಗೆ ಮೌಖಿಕ ಸೂಚನೆ ನೀಡಲಾಗಿದೆ.
ದೀರ್ಘಾವಧಿ, ವಾರದ ರಜೆ ಹೊರತುಪಡಿಸಿ ಉಳಿದ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಸೇವೆ ಇರಲಿದೆ.
ಬಿಎಂಟಿಸಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಯುವಜ್ರ ಎಸಿ ಬಸ್‌ಗಳನ್ನು ಓಡಿಸುತ್ತದೆ. ಎಲ್ಲಾ ಟ್ಯಾಕ್ಸಿ ಸೇವೆಗಳು ಬಂದ್ ಆದರೂ ಸಹ ವಿಮಾನ ನಿಲ್ದಾಣದ ಪ್ರಯಾಣಿಕರ ವಾಯು ವಜ್ರ ಬಸ್‌ಗಳ ಮೂಲಕ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಬಹುದಾಗಿದೆ.
ಕರ್ನಾಟಕ ಬಂದ್‌ಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಹ ಬೆಂಬಲ ಘೋಷಣೆ ಮಾಡಿವೆ. ಮಂಗಳವಾರ ಬೆಂಗಳೂರು ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶುಕ್ರವಾರದ ಬಂದ್‌ಗೆ ಸಹ ನಗರದಲ್ಲಿ ಜನರು ಬೆಂಬಲ ನೀಡುವ ಸಾಧ್ಯತೆ ಇದೆ.
ಗುರುವಾರದಿಂದ ಸಾಲು ಸಾಲು ರಜೆ ಇರುವ ಕಾರಣ ಹಲವಾರು ಜನರು ಬುಧವಾರವೇ ಬೆಂಗಳೂರು ನಗರದಿಂದ ಆಚೆ ಹೋಗಿದ್ದಾರೆ. ಹಲವಾರು ಖಾಸಗಿ ಕಂಪನಿಗಳು ಶುಕ್ರವಾರ ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಇ-ಮೇಲ್ ರವಾನಿಸಿವೆ.
ಶುಕ್ರವಾರ ಬೆಳಗ್ಗೆ 9ಗಂಟೆಯಿಂದ ಬೆಂಗಳೂರು ನಗರದಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಗುತ್ತದೆ. ಕನ್ನಡ ಚಿತ್ರರಂಗ ಸಹ ಬಂದ್‌ಗೆ ಬೆಂಬಲ ನೀಡಿದ್ದು, ಸಿನಿಮಾದ ಎಲ್ಲಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ.
ಪ್ರತಿಭಟನೆ ಮಾಡಲು ಅವಕಾಶವಿದೆ. ಬಲವಂತವಾಗಿ ಬಂದ್ ಮಾಡಿಸಬೇಡಿ ಎಂದು ಪೊಲೀಸರು ಈಗಾಗಲೇ ಬಂದ್‌ಗೆ ಕರೆ ಕೊಟ್ಟಿರುವ ಸಂಘಟನೆಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಸಾವಿರಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಬಂದ್ ಯಶಸ್ವಿಯಾಗುವ ನಿರೀಕ್ಷೆ ಇದೆ.












Click it and Unblock the Notifications