ಪಂಪ ಮಹಾಕವಿ ರಸ್ತೆ ಹೆಸರು ಬದಲಾಯಿಸಿದರೆ ಕಸಾಪ ವಿರುದ್ಧವೇ ಹೋರಾಟ: ಕರವೇ
ಬೆಂಗಳೂರು ಸೆಪ್ಟಂಬರ್ 12: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಿಸುವ ಕನ್ನಡ ಸಾಹಿತ್ಯ ಪರಿಷತ್ತು ಪ್ರಸ್ತಾವನೆ ಸಲ್ಲಿಸಿರುವುದನ್ನು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಖಂಡಿಸಿದ್ದಾರೆ.
ಚಾಮರಾಜ ಪೇಟೆಯ ಮಿಂಟೋ ಆಸ್ಪತ್ರೆಯಿಂದ ನ್ಯಾಷನಲ್ ಕಾಲೇಜುವರೆಗೆ ಪಂಪ ಮಹಾಕವಿ ರಸ್ತೆ ಇದೆ. ಮಿಂಟೋ ಆಸ್ಪತ್ರೆಯ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದೆ. ಈ ಅರ್ಧ ಕಿಲೋ ಮೀಟರ್ ಪಂಪಮಾಹಕವಿ ರಸ್ತೆ ಹೆಸರು ಬದಲಾಯಿಸಲು ಇದೀಗ ಪರಿಷತ್ತು ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದಕ್ಕೆ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಪಂಪ ಮಹಾಕವಿ ರಸ್ತೆ ಬದಲಿಸಲು ಕನ್ನಡ ಸಾಹಿತ್ಯ ಪರಿಷತ್ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿರುವುದು ಆಘಾತಕಾರಿ ವಿದ್ಯಮಾನವಾಗಿದೆ. ಪರಿಷತ್ತಿನ ಈ ನೀರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಈ ಪ್ರಸ್ತಾಪವನ್ನು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ಕಸಾಪ ತನ್ನ ಮಾನ ತಾನೇ ಹರಾಜು ಹಾಕಿಕೊಂಡಿದೆ
ಕನ್ನಡದ ಆದಿಕವಿ ಪಂಪನ ಹೆಸರಿರುವ ರಸ್ತೆಯ ಹೆಸರು ಬದಲಾವಣೆ ಕುರಿತು ಕನ್ನಡಿಗರ ಪ್ರಾತಿನಿಧಿಕ ಸಂಘಟನೆ ಎಂದು ಹೇಳಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ತೇ ಬದಲಿಸಲು ಹೊರಟಿರುವುದು ವಿಲಕ್ಷಣವಾದ ಘಟನೆಯಾಗಿದೆ. ಈ ಮೂಲಕ ಪರಿಷತ್ತು ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಂತಾಗಿದೆ ಎಂದು ಅವರು ದೂರಿದರು.
ಹತ್ತನೇ ಶತಮಾನದಲ್ಲಿ ಬದುಕಿದ್ದ ಪಂಪ ಮಹಾಕವಿ ಇಡೀ ಕನ್ನಡ ಸಾಹಿತ್ಯ ಚರಿತ್ರೆಗೆ ಮುನ್ನುಡಿಯನ್ನು ಬರೆದವರು. ಭೂಮಿ, ಸೂರ್ಯ, ಚಂದ್ರರು ಇರುವವರೆಗೆ ಅವರ ಹೆಸರು ಅಮರವಾಗಿರುತ್ತದೆ. ಸಾಹಿತ್ಯ ಪರಿಷತ್ತು ಇಂಥ ದುಸ್ಸಾಹಸಕ್ಕೆ ಇಳಿದಿದ್ದು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹೆಸರು ಬದಲಿಗೆ ಮುಂದಾದರೆ ತೀವ್ರ ಹೋರಾಟ
ಪಂಪ ಮಹಾಕವಿ ರಸ್ತೆಯ ಒಂದು ಭಾಗಕ್ಕೆ ಮಾತ್ರ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಎಂದು ಹೆಸರಿಡುವ ಪ್ರಸ್ತಾವನೆ ಸಲ್ಲಿಸಿರುವುದಾಗಿ ಪರಿಷತ್ತು ಅಧ್ಯಕ್ಷರಾದ ಮಹೇಶ್ ಜೋಷಿ ಹೇಳಿರುವುದನ್ನು ಗಮನಿಸಿದ್ದೇನೆ. ಈ ವಿಚಾರದಲ್ಲಿ ಪಂಪ ಮಹಾಕವಿ ಹೆಸರಿನ ರಸ್ತೆಯ ಒಂದೇ ಒಂದೂ ಮೀಟರ್ ರಸ್ತೆಯ ಹೆಸರನ್ನೂ ಬದಲಿಸುವ ಅವಶ್ಯಕತೆ ಇಲ್ಲ. ಇದೇ ಕರ್ನಾಟಕ ರಕ್ಷಣಾ ವೇದಿಕೆಯ ನಿಲುವಾಗಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಕನ್ನಡ ಸಾಹಿತ್ಯ ಪರಿಷತ್ತು ರಸ್ತೆಯ ಹೆಸರನ್ನು ಬದಲಿಸಲು ಹಠ ಹಿಡಿದಿದ್ದೇ ಆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಪ್ರತಿಭಟಿಸಬೇಕಾಗುತ್ತದೆ. ಪರಿಷತ್ತಿನ ವಿರುದ್ಧವೇ ವೇದಿಕೆ ಹೋರಾಟ ನಡೆಸಲು ನಾವು ಹಿಂಜರಿಯುವುದಿಲ್ಲ ಎಂದು ನಾರಾಯಣಗೌಡರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications