'ಹಿಂದಿ ದಿವಸ್' ವಿರುದ್ಧ ಬೆಂಗಳೂರಿನಲ್ಲಿ ಕರವೇ ಪ್ರತಿಭಟನೆ
ಬೆಂಗಳೂರು, ಸೆಪ್ಟಂಬರ್ 13: ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ ಹಿಂದಿಯೇತರ ರಾಜ್ಯಗಳಲ್ಲಿ ಸೆಪ್ಟಂಬರ್ 14ರಂದು ನಡೆಸುವ 'ಹಿಂದಿ ದಿವಸ್' ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಂಗಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಯಲಿದೆ.
ಸೆಪ್ಟಂಬರ್ 14ರಂದು ಬೆಳಗ್ಗೆ 11ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರ ಟಿ.ಎ.ನಾರಾಯಣಗೌಡ ಬಣದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಲಿದೆ. ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆ ವಿರುದ್ಧ ಕರವೇ, ಬೆಂಗಳೂರಿನ ಬನವಾಸಿ ಬಳಗ ಸೇರಿದಂತೆ ವಿವಿಧ ಸಂಘಟನೆಗಳಿಂದ ಹಲವು ಕಾರ್ಯಕ್ರಮ, ಪ್ರತಿಭಟನೆ ಆಯೋಜಿಸಲಾಗಿದೆ.
ಈ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರ ಟಿ.ಎ. ನಾರಾಯಣಗೌಡರು, ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ದೇಶ ರಚನೆಯಾಗಿದೆ. ಸ್ವಾತಂತ್ರ್ಯಾ ನಂತರ ಆಡಳಿತಕ್ಕೆ ಬಂದ ಎಲ್ಲ ಪಕ್ಷಗಳ ಕೇಂದ್ರ ಸರ್ಕಾರಗಳು ಹಿಂದಿಯೇತರ ರಾಜ್ಯಗಳಲ್ಲಿ 'ಹಿಂದಿ ದಿವಸ್' ಹೆಸರಿನಲ್ಲಿ ಸೆಪ್ಟಂಬರ್ ತಿಂಗಳು 'ಹಿಂದಿ ಸಪ್ತಾಹ' ವನ್ನು ಆಚರಿಸುತ್ತಾ ಬಂದಿದೆ ಎಂದರು.

ಹಿಂದಿ ವಿರುದ್ಧ ಕರವೇ 25 ವರ್ಷ ಪ್ರತಿಭಟನೆ
ಇದೇ ವಿಚಾರವಾಗಿ ಕಳೆದ 25 ವರ್ಷಗಳ ಕರ್ನಾಟಕ ರಕ್ಷಣಾ ವೇದಿಕೆ ಕೇಂದ್ರ ಸರ್ಕಾರದ ಹಿಂದಿ ಸಪ್ತಾಹ ವಿರೋಧಿಸಿ ಹೋರಾಟ, ಪ್ರತಿಭಟನೆಗಳನ್ನು ಮಾಡಿಕೊಂಡು ಬಂದಿದೆ. ಇದು ಮುಂದುವರಿದಿದ್ದು, ಬುಧವಾರ ಸಹ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸರ್ಕಾರ ಹಿಂದಿಯೇತರ ಕರ್ನಾಟಕ ರಾಜ್ಯದಲ್ಲಿ ಹಿಂದಿ ದಿವಸ್ ಆಚರಿಸಬಾರದು ಎಂದು ಅವರು ಆಗ್ರಹಿಸಿದರು.
ಸೆಪ್ಟೆಂಬರ್ 14ರಂದು 'ಹಿಂದಿ ದಿವಸ್' ಆಚರಣೆ ಕುರಿತು ಬೆಂಗಳೂರಿನ ಬನವಾಸಿ ಬಳಗ ವತಿಯಿಂದ ಹಿಂದಿ ಹೇರಿಕೆಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 'ಹಿಂದಿ ಹೇರಿಕೆ ಮತ್ತು ನುಡಿ ಸಮಾನತೆ: ಒಂದು ಮಾತುಕತೆ' ಸಮಾರಂಭ ನಡೆಯಿತು. 'ಹಿಂದಿ ಹೇರಿಕೆ ಮೂರು ಮಂತ್ರ- ನೂರು ತಂತ್ರ' ಹೊತ್ತಿಗೆಯ ಬರಹಗಾರರ ಆನಂದ್ ಅವರೊಂದಿಗೆ ಮಾತುಕತೆ ನಡೆಯಿತು.

ಒಂದು ಭಾಷೆ ಮೆಲಿಟ್ಟರೆ ಇತರ ಭಾಷೆಗೆ ಕಂಟಕ
ಈ ವೇಳೆ ಮಾತನಾಡಿದ ಆನಂದ್ ಅವರು, ಸಮಾನತೆಯೇ ಜೀವಾಳವಾದ ಭಾರತೀಯ ಸಂವಿಧಾನಕ್ಕೆ ಅಂಟಿಕೊಂಡಿರುವ ಅಸಮಾನತೆಯ ಕಳಂಕವೆಂದರೆ ಭಾರತದ ಇಂದಿನ ಭಾಷಾನೀತಿ. ಬಹುಭಾಷಿಕ ನಾಡುಗಳಲ್ಲಿ ಯಾವುದೇ ಒಂದು ಭಾಷೆಯನ್ನು ಇತರವುಗಳಿಗಿಂತ ಮೇಲೇರಿಸಿದರ, ಅದು ಉಳಿದ ನುಡಿಗಳಿಗೆ ಕಂಟಕವಾಗುವ ಅಪಾಯವಿದೆ. ಭಾರತದ ಸ್ಥಿತಿ ಹೀಗೆ ಆಗಿದೆ ಎಂದು ಅವರು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಯಾವ ಅಸಮಾನತೆಯನ್ನು ಭಾರತ ಸರ್ಕಾರ ಹಬ್ಬವೆಂಬಂತೆ ಆಚರಿಸಿಕೊಂಡು ಬರುತ್ತಿದೆಯೋ ಅದರ ಕೆಡುಕುಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಪ್ರಜ್ಞಾವಂತ ಭಾರತೀಯರೆಲ್ಲರೂ ಆಲೋಚಿಸಬೇಕಾಗಿದೆ. ನುಡಿ ಸಮಾನತೆಯನ್ನು ಎತ್ತಿ ಹಿಡಿಯುವ ಭಾಷಾನೀತಿಯ ಬಗ್ಗೆ ನಾವೆಲ್ಲರೂ ಇಂದು ಅರಿಯಬೇಕು. ಅದರ ಕುರಿತು ಮಾತನ್ನಾಡುವ ಅಗತ್ಯ ಮೊದಲಿಗಿತಂಲೂ ಈಗ ಹೆಚ್ಚಾಗಿದೆ ಎಂದು ಅವರು ಪ್ರತಿಪಾದಿಸಿದರು
ಹಿಂದಿ ವಿರೋಧದ ನಡುವೆ ಕನ್ನಡವನ್ನು ಕಟ್ಟಿಕೊಳ್ಳಲು ನುಡಿ ಹಮ್ಮುಗೆಯೊಂದನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇರುವುದನ್ನು ನಾವಿಂದು ಮನಗಾಣಬೇಕಿದೆ. ಈ ನಿಟ್ಟಿನಲ್ಲಿ 'ನುಡಿ ಹಮ್ಮುಗೆ:ಇದು ಕನ್ನಡಕ್ಕೊಂದು ಕೈದೀವಿಗೆ' ಎಂಬ ಕೃತಿ ಬಿಡುಗಡೆಗೊಳಿಸಲಾಯಿತು ಎಂದರು.












Click it and Unblock the Notifications