ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆ: ಉದ್ಯಮಿಗಳ ವಿರುದ್ಧ ಕರವೇ ಪ್ರತಿಭಟನೆ
ಬೆಂಗಳೂರು, ಜುಲೈ 18: ಕರ್ನಾಟಕ ಸರ್ಕಾರವು ರಾಜ್ಯದ ಖಾಸಗಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿಗೆ ತರುವ ಮಸೂದೆ ಅನುಮೋದಿಸಿತ್ತು. ಆದರೆ ಅದನ್ನು ವಿರೋಧಿಸಿದ್ದ ಉದ್ಯಮಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸೇರಿದಂತೆ ಕನ್ನಡಪರ ಹೋರಾಟಗಾರು, ಕಾರ್ಯಕರ್ತರು ಗುರುವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಚಿತ್ರ ನಿರ್ಮಾಪಕ, ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಹಾಗೂ ಕರವೇ ಪ್ರಮುಖರು ಮತ್ತು ಕನ್ನಡಪರ ಕಾರ್ಯಕರ್ತರು ಕೂಡಿಕೊಂಡು ಮಲ್ಲೇಶ್ವರಂ ನಲ್ಲಿರುವ ಕುವೆಂಪು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಹಾಗೂ ಉದ್ಯಮಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

ಕರ್ನಾಟಕದ ಖಾಸಗಿ ರಂಗದಲ್ಲಿ ಕನ್ನಡಿಗರಿಗೆ ಶೇಕಡಾ 50-75ರಷ್ಟು ಉದ್ಯೋಗ ಕಡ್ಡಾಯ ಮೀಸಲಿಡುವ ಮಸೂದೆಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ಅಧಿವೇಶನದಲ್ಲಿ ಮಂಡನೆ ಮಾಡಿ ಒಪ್ಪಿಗೆ ಪಡೆಯುವುದಿತ್ತು.
ಉದ್ಯಮಿಗಳ ವಿರೋಧ: ಮಸೂದೆ ವಾಪಾಸ್
ಅಷ್ಟರಲ್ಲಾಗಲೇ ಉದ್ಯಮಿಗಳಾದ ಕಿರಣ್ ಮಜುಂದಾರ್ ಹಾಗೂ ಮೋಹನ್ ದಾಸ್ ಪೈ ಅವರು ಸರ್ಕಾರದ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬೆದರಿದ ರಾಜ್ಯ ಸರ್ಕಾರ, ಸಂಭಾವ್ಯ ವಿರೋಧ ತಡೆಗೆಯಲು ಅನುಮೋದನೆ ನೀಡಿದ್ದ ಬಿಲ್ ಗೆ ತಡೆ ನೀಡಿದ್ದಾರೆ. ಇದು ಪ್ರಾಥಮಿಕ ಹಂತದಲ್ಲಿದೆ ಮುಂದಿನ ಸಂಪುಟ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಿ ಅಂತಿಮ ನೀರ್ಧಾರಕ್ಕೆ ಬರಲಾಗುವುದು ಎಂದು ಖುದ್ದು ಸಿದ್ದರಾಮಯ್ಯ ಅವರೇ ಹೇಳಿದರು. ಇದನ್ನು ಸಂಪುಟ ಸದಸ್ಯರು ಸ್ವಾಗತಿಸಿದ್ದಾರೆ.

ಕನ್ನಡಿಗರ ಪರವಾದ ನಿಲುವು, ನಿರ್ಧಾರ ಕೈಗೊಂಡ ಸಂದರ್ಭದಲ್ಲಿ ಈ ಉದ್ಯಮಿಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನು ಖಂಡಿಸಿ ಕರವೇ ಕಾರ್ಯಕರ್ತರು ಹಾಗೂ ಕನ್ನಡಪರ ಹೋರಾಟಗಾರರು ನಗರದಲ್ಲಿ ಪ್ರತಿಭಟಿಸಿದರು. ಮಸೂದೆ ವಾಪಸ್ ಮಾಡದೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಕನ್ನಡಿಗರ ಸ್ವಾಭಿಮಾನ ಕೆಣಕಿದ ಉದ್ಯಮಿದಾರರಿಗೆ ಧಿಕ್ಕಾರ
ಕನ್ನಡ ನೆಲದಲ್ಲಿ ಕನ್ನಡಿಗರೇ ಸಾರ್ವಭೌಮರು. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಇತರರ ಹಂಗೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿದರು. 'ಕನ್ನಡಿಗರ ಸ್ವಾಭಿಮಾನ ಕೆಣಕಿದ ಉದ್ಯಮಿದಾರರಿಗೆ ಧಿಕ್ಕಾರ' ಎಂದು ನಾಮಫಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರಲ್ಲಾಗಲೇ ಸ್ಥಳದಲ್ಲಿದ್ದ ಪೊಲೀಸರು ಸುರಕ್ಷತಾ ದೃಷ್ಟಿಯಿಂದ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ನಡೆಯಿತು. ಈ ವೇಳೆ ಕನ್ನಡ ಚಳವಳಿಗಾರರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದದ್ದು ಕಂಡು ಬಂತು.












Click it and Unblock the Notifications