Karaga Festival 2025: ಬೆಂಗಳೂರು ಐತಿಹಾಸಿಕ "ಕರಗ ಮಹೋತ್ಸವ" ಸಂಪೂರ್ಣ ವಿವರ ಇಲ್ಲಿದೆ!
Bengaluru Karaga Festival 2025: ವಿಶ್ವ ವಿಖ್ಯಾತ ಬೆಂಗಳೂರು "ಕರಗ ಶಕ್ತ್ಯೋತ್ಸವ" ಆಚರಣೆಗೆ ದಿನಗಣನೆ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ಕರಗ ಮಹೋತ್ಸವಕ್ಕೆ ವಿಶೇಷ ಸ್ಥಾನವಿದೆ. ಕರಗ ಮಹೋತ್ಸವ ಆಚರಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ.
ಕರಗ ಮಹೋತ್ಸವದಲ್ಲಿ 5ರಿಂದ 6 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಆದರೆ ಈ ಬಾರಿ ಕರಗ ಮಹೋತ್ಸವ ನಡೆಯುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಮಸ್ಯೆ ಆಗಿದ್ದು ಬಾಕಿ ಇರುವ ಕಾಮಗಾರಿಯನ್ನು ತಿಂಗಳಾಂತ್ಯದಲ್ಲಿ ಪೂರ್ಣಗೊಳಿಸುವ ಸಂಬಂಧ ಬಿಬಿಎಂಪಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರು ಕರಗ ಮಹೋತ್ವವದ ವಿವರ
* 4ನೇ ಏಪ್ರಿಲ್ 2025 ರಂದು ಶುಕ್ರವಾರ ರಾತ್ರಿ 10 ಗಂಟೆ ಹಾಗೂ ರಾತ್ರಿ 3 ಗಂಟೆಗೆ 'ರಥೋತ್ಸವ ಧ್ವಜಾರೋಹಣ' ನೆರವೇರಲಿದೆ.
* 5 ರಿಂದ 8ನೇ ಏಪ್ರಿಲ್ 2025 ರವೆಗೆ ಶನಿವಾರದಿಂದ ಮಂಗಳವಾರದವರೆಗೆ ರಾತ್ರಿ 7.30ಕ್ಕೆ 'ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ' ನಡೆಯಲಿದೆ.
* 9ನೇ ಏಪ್ರಿಲ್ 2025 ರಂದು ಬುಧವಾರ ರಾತ್ರಿ 3 ಗಂಟೆಗೆ 'ಆರತಿ ದೀಪಗಳು' ನಡೆಯಲಿದೆ.
* 10ನೇ ಏಪ್ರಿಲ್ 2025 ರಂದು ಗುರುವಾರ ರಾತ್ರಿ 3 ಗಂಟೆಗೆ ಸಂಪಂಗಿಕೆರೆ ಅಂಗಳದ ಶಕ್ತಿ ಪೀಠದಲ್ಲಿ "ಹಸಿ ಕರಗ" ನಡೆಯಲಿದೆ.
* 12ನೇ ಏಪ್ರಿಲ್ 2025 ರಂದು ಶನಿವಾರ ರಾತ್ರಿ 12.30ಕ್ಕೆ "ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ಮಹೋತ್ಸವ" ನಡೆಯಲಿದೆ.
* 13ನೇ ಏಪ್ರಿಲ್ 2025 ರಂದು ಭಾನುವಾರ ರಾತ್ರಿ 2 ಗಂಟೆ ಹಾಗೂ ರಾತ್ರಿ 4 ಗಂಟೆಗೆ 'ಪುರಾಣ ಪ್ರವಚನ ಹಾಗೂ ದೇವಸ್ಥಾನದಲ್ಲಿ ಗಾವು ಶಾಂತಿ' ನಡೆಯಲಿದೆ.
* 14ನೇ ಏಪ್ರಿಲ್ 2025 ರಂದು ಸೋಮವಾರ ಸಂಜೆ 4ಕ್ಕೆ ಹಾಗೂ ರಾತ್ರಿ 12 ಗಂಟೆಗೆ 'ವಸಂತೋತ್ಸವ ಧ್ವಜಾರೋಹಣ' ದ ಮೂಲಕ ಕರಗವು ಪೂರ್ಣಗೊಳ್ಳಲಿದೆ.

ಇನ್ನು ಈ ಸಭೆಯಲ್ಲಿ ಮಾತನಾಡಿದ ಬೆಂಗಳೂರು ಬೆಂಗಳೂರು ಜಿಲ್ಲಾಧಿಕಾರಿಯಾದ ಜಗದೀಶ್ ಅವರು, ಕರಗ ಶಕ್ತ್ಯೋತ್ಸವ ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಕರಗ ಉತ್ಸವ ನಡೆಯುವ ರಸ್ತೆಗಳಲ್ಲಿನ ಬೀದಿ ದೀಪಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ, ಎಲ್ಲಾ ಕಡೆ ವಿದ್ಯುತ್ ದೀಪಗಳ ಅಳವಡಿಕೆ ವ್ಯವಸ್ಥೆ ಮಾಡಬೇಕು. ವಿದ್ಯುತ್ ಸಂಪರ್ಕ ಕಡಿತಾಗೊಳ್ಳದಂತೆ ಬೆಸ್ಕಾಂ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಕರಗ ಮಹೋತ್ಸವವು 4ನೇ ಏಪ್ರಿಲ್ 2025 ರಿಂದ 14ನೇ ಏಪ್ರಿಲ್ 2025 ರವರೆಗೆ ನಡೆಯಲಿದೆ. ಈ ವೇಳೆ ಸ್ವಚ್ಛತಾ ನಿರ್ವಹಣೆ ದೃಷ್ಟಿಯಿಂದ ಘನತ್ಯಾಜ್ಯ ವಿಭಾಗದ ಅಧಿಕಾರಿ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಸೂಚಿಸಿದ್ದಾರೆ. ಭಕ್ತಾದಿಗಳು ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಬಾರದಂತೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ
ಸಂಚಾರ ಪೊಲೀಸ್ ವಿಭಾಗವು ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟಣೆಯಾಗದಂತೆ ಮಾರ್ಗ ಬದಲಾವಣೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸಬೇಕು. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಅವಕಾಶ ನೀಡದಂತೆ ಹಾಗೂ ಭಕ್ತಾದಿಗಳು ಹಾಗೂ ಸಾರ್ವಜನಿಕರ ಭದ್ರತೆಯ ಹಿತದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಹೇಳಲಾಗಿದೆ.
ಸಿಸಿ ಕ್ಯಾಮೆರಾ ಅಳವಡಿಕೆ: ಕರಗ ಮಹೋತ್ಸವ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಬ್ಯಾರಿಕೇಡಿಂಗ್ ವ್ಯವಸ್ಥೆ ಹಾಗೂ ಅಗ್ನಿ ಅವಘಡಗಳು ಸಂಭವಿಸದಂತೆ ಅಗ್ನಿ ಶಾಮಕ ವ್ಯವಸ್ಥೆಯನ್ನು ಕೈಗೊಳ್ಳಬೇಕು.
ಆರೋಗ್ಯ ಸಿಬ್ಬಂದಿ ನಿಯೋಜನೆ: ಕರಗ ನಡೆಯುವ ದಿನಗಳಲ್ಲಿ ಕರಗ ವೀಕ್ಷಿಸಲು ಬರುವವರಿಗೆ ಆರೋಗ್ಯದಲ್ಲಿ ಏರುಪೇರಾದಲ್ಲಿ ಅವರಿಗೆ ಕೂಡಲೆ ಚಿಕಿತ್ಸೆ ನೀಡುವ ಸಲುವಾಗಿ ಪಾಲಿಕೆ ಆರೋಗ್ಯ ವಿಭಾಗದಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡಬೇಕು. ಜೊತೆಗೆ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಸಹ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಇನ್ನು ಬೆಂಗಳೂರು ಕರಗ ಮಹೋತ್ಸವಕ್ಕೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಬಿಬಿಎಂಪಿಯ ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ವೇಳೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಉದಯ್ ಬಿ. ಗರುಡಾ ಚಾರ್, ವಲಯ ಆಯುಕ್ತರಾದ ಅರ್ಚನಾ, ದಿಗ್ವಿಜಯ್ ಬೋಡ್ಕೆ, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಬಿಬಿಎಂಪಿ, ಮುಜರಾಯಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications