ಈ ಭಾಗಕ್ಕೆ ಯಾವುದೇ ಕಾರಣಕ್ಕೂ ನಮ್ಮ ಮೆಟ್ರೋ ವಿಸ್ತರಣೆ ಬೇಡ: ಕನ್ನಡಿಗರ ಆಗ್ರಹ!
ಕನ್ನಡಿಗರ ವಿರೋಧದ ನಡುವೆಯೂ ಕರ್ನಾಟಕ - ತಮಿಳುನಾಡಿನ ಸಮೀಪದ ಪ್ರದೇಶಗಳಲ್ಲಿ ನಮ್ಮ ಮೆಟ್ರೋ ವಿಸ್ತರಣೆಗೆ ಮುಂದಾಗಿರುವುದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ ಹೊಸೂರಿಗೆ ನಮ್ಮ ಮೆಟ್ರೋ ವಿಸ್ತರಣೆ ಮಾಡಬೇಕು ಎನ್ನುವ ಪ್ರಸ್ತಾವನೆಗೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಇಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕ ದೃಷ್ಟಿಯಿಂದ ಈ ನಿರ್ಧಾರವು ಪ್ರಶಸ್ತವಾಗಿದೆ. ಯಾವ ಕಾರಣಕ್ಕೂ ಬೊಮ್ಮಸಂದ್ರದಿಂದ ಅತ್ತಿಬೆಲೆ/ಹೊಸೂರು ಕಡೆಗೆ #ನಮ್ಮ_ಮೆಟ್ರೊ ಹೋಗಲೇ ಬಾರದು. ಹಾಗೇನಾದರೂ ಆದರೆ, ಬೆಂಗಳೂರು ಮತ್ತು ತನ್ಮೂಲಕ ಕರ್ನಾಟಕದ ಔದ್ಯಮಿಕ ಬೆಳವಣಿಗೆಗೆ ನಮ್ಮ ರಾಜ್ಯ ಸರ್ಕಾರವೇ ಎಳ್ಳು-ನೀರು ಬಿಟ್ಟಂತಾಗುತ್ತದೆ. ಬಿಜೆಪಿ ಸರ್ಕಾರವಿದ್ದಾಗ ಆಗಿನ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೊಸೂರು ಭಾಗದ ತಮಿಳುನಾಡಿನ ಲೋಕಸಭಾ ಸದಸ್ಯರನ್ನು ಕರೆದುಕೊಂಡು ಹೋಗಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೊ ವಿಸ್ತರಣೆ ಆಗಲೆಂದು ಡಿಪಿಆರ್ ಮಾಡಿಸಲು ಒಪ್ಪಿಗೆ ಕೊಡಿಸಿದ್ದರು.

ಕನ್ನಡಪರರು ಸಮಯೋಚಿತವಾಗಿ ವರ್ತಿಸಿ ವ್ಯಾಪಕವಾಗಿ ಖಂಡಿಸಿದ್ದರು. ಈಗಲಾದರೂ ನಮ್ಮ ರಾಜ್ಯದ ರಾಜಕೀಯ ನಾಯಕರುಗಳು ಎಚ್ಚೆತ್ತುಕೊಳ್ಳಲಿ. ಇಷ್ಟೇ ಸಾಲದು. ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಮರುಜೀವ ಕೊಡಬೇಕು. ಇಲ್ಲವಾದರೆ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ಮಾಡಿ ನಮಗೆ ಮರ್ಮಾಘಾತ ಕೊಡುವುದು ನಿಶ್ಚಿತ ಎಂದು ಸಿ.ಎಸ್.ಲಕ್ಷ್ಮೀಶ ಎನ್ನುವವರು ಧ್ವನಿ ಎತ್ತಿದ್ದಾರೆ. ಈಗಾಗಲೇ ಮೆಟ್ರೋ ಯೆಲ್ಲೋ ಲೈನ್‌ನಿಂದಾಗಿ ತಮಿಳುನಾಡಿಗೆ ಸಾಕಷ್ಟು ಅನುಕೂಲವಾಗಿದೆ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಕಾರಾತ್ಮಕವಾಗಿ ಈ ವಿಚಾರವಾಗಿ ಮಾತನಾಡಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ಪ್ರಸ್ತಾವನೆ ಕೈಬಿಡಲಾಗಿತ್ತು: ಇನ್ನು ಸರಿಯಾಗಿ ಇಂದಿಗೆ ಒಂದು ವರ್ಷದ ಮುಂಚೆ ಬೆಂಗಳೂರು ನಮ್ಮ ಮೆಟ್ರೋ ಯೋಜನೆಯನ್ನು ತಮಿಳುನಾಡಿಗೆ ವಿಸ್ತರಿಸಬೇಕು ಎನ್ನುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರವು ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಕನ್ನಡಿಗರಿಂದ ತೀವ್ರವಾದ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಅಂದೇ ನಾವು ತಮಿಳುನಾಡಿನ ಭಾಗಕ್ಕೆ ನಮ್ಮ ಮೆಟ್ರೋ ಯೋಜನೆಯನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ, ಇದೀಗ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಮ್ಮ ಮೆಟ್ರೋ ಯೋಜನೆಯನ್ನು ಅತ್ತಿಬೆಲೆ ವರೆಗೂ ವಿಸ್ತರಣೆ ಮಾಡುವುದಕ್ಕೆ ಪರಿಶೀಲನೆ ಮಾಡುವುದಾಗಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications