ನಮ್ಮ ನಾಡು- ನಮ್ಮ ಭಾಷೆ- ನಮ್ಮ ಹೆಮ್ಮೆ ಎಂದ ಡಿಕೆಶಿಗೆ ಕನ್ನಡಿಗರಿಂದ ಕ್ಲಾಸ್!
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಕನ್ನಡ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚಿನ ದಿನಗಳಲ್ಲಿ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಹಾಗೂ ಕರ್ನಾಟಕದಲ್ಲಿರುವ ಬಿಹಾರದವರ ಪರವಾಗಿ ಬ್ಯಾಟಿಂಗ್ ಮಾಡಿರುವುದು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಚೆಗೆ ಬಿಹಾರದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿರುವ ಬಿಹಾರಿಗರಿಗೆ ಮೂರು ದಿನಗಳ ಕಾಲ ವೇತನ ಸಹಿತ ರಜೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಇದೀಗ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ನಮ್ಮ ನಾಡು- ನಮ್ಮ ಭಾಷೆ- ನಮ್ಮ ಹೆಮ್ಮೆ
ಕಲಿತವರಿಗೆ ಅಮೃತ,
ನೆನೆದವರಿಗೆ ನೆರಳು,
ಅಂಧರಿಗೆ ದಾರಿದೀಪ,
ಅಪ್ಪಿಕೋ ಕನ್ನಡವ.
ಇದು ನಮ್ಮ ಕನ್ನಡದ ಹಬ್ಬ 💛❤️ ಎಂದು ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದು, ಇದಕ್ಕೆ ಕನ್ನಡಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹಾಗೂ ಕರ್ನಾಟಕದಲ್ಲಿರುವ ವಲಸಿಗರ ಪರವಾಗಿ ಮಾತನಾಡಿ ಇದೀಗ ಕನ್ನಡ... ಕನ್ನಡ ಎಂದು ಟ್ವೀಟ್ ಮಾಡಿದರೆ ಸಾಕೇ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.

ಈ ಟ್ವೀಟ್‌ಗೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮನು ಎನ್ನುವವರು, ಕನ್ನಡ ಶಾಲೆಗಳನ್ನು ಉಳಿಸದೆ ಶಿಕ್ಷಣದಲ್ಲಿ ಕನ್ನಡ ನುಡಿ ಕಡ್ಡಾಯ ಮಾಡದೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡದೆ ಈ ರೀತಿ ಬರೆದುಕೊಂಡರೆ ಏನು ಉಪಯೋಗವಿದೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ರಕ್ಷಿತ್ ಎನ್ನುವವರು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿ. ನವೆಂಬರ್ ಕನ್ನಡಿಗರಾಗದೆ ನಂಬರ್ ಒನ್ ಕನ್ನಡಿಗರಾಗಿ ಸರ್ ಎಂದಿದ್ದಾರೆ. ಇದೇ ರೀತಿ ಹಲವರು ರಿಯಾಕ್ಟ್ ಮಾಡಿದ್ದಾರೆ.
MES ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ದಿನವನ್ನು ಕಪ್ಪು ದಿನ ಎಂದು ಆಚರಣೆ ಮಾಡುವವರೆಗೂ ನೀವು ಏನು ಮಾಡುತ್ತಿದ್ದೀರಿ?, ಕರ್ನಾಟಕದಲ್ಲಿ ಇರೋ ಬಿಹಾರಿಗಳು ಇನ್ನೂ ಇಲ್ಲೇ ಇದ್ದಾರೆ.. ಹೀಗೆ ಆದ್ರೆ ಚುನಾವಣೆ ಗೆಲ್ಲೋದು ಕಷ್ಟ, ಅದರ ಬಗ್ಗೆ ಗಮನ ಹರಿಸಿ. ಕನ್ನಡ, ಕನ್ನಡಿಗ ಎಲ್ಲಾ ಆಮೇಲೆ ನೋಡಿದ್ರೆ ಆಯ್ತು ಎಂದು ಮತ್ತೊಬ್ಬ ನೆಟ್ಟಿಗರು ಪರೋಕ್ಷ ವ್ಯಂಗ್ಯವಾಡಿದ್ದಾರೆ.
ಪ್ರದೀಪ್ ಸಾಗರ್ ಎನ್ನುವವರು, ಇಲ್ಲಿ ನಮ್ಮ ನಾಡು ನಮ್ಮ ಹೆಮ್ಮೆ ಅನ್ನೋದು, ಬಿಹಾರದವರಿಗೆ ನಿವೇಶನ ಕೊಡೋದು ಎಂದೂ ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications