ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಂದಿನಿ ಬದಲು ಅಮೂಲ್ ಮಳಿಗೆ ಕನ್ನಡಿಗರ ಆಕ್ರೋಶ!
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಚುನಾವಣೆಗೂ ಮುಂಚೆ ನಂದಿನಿ ಉಳಿಸಿ ಎಂದು ಅಭಿಯಾನ ಮಾಡಿದ್ದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆಗಳನ್ನು ಪ್ರಾರಂಭಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದು ಕನ್ನಡಿಗರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಕ್ಕೂ ಮುಂಚೆ ನಂದಿನಿ ಕರ್ನಾಟಕದ ಅಸ್ಮಿತೆ ಎಂದು ಅಭಿಯಾನ ಮಾಡಿದ್ದ ಕಾಂಗ್ರೆಸ್ ನಾಯಕರು ಇದೀಗ ಅಮೂಲ್‌ಗೆ ಮಣೆಯಾಕಿದ್ದಾರೆ. ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಕನ್ನಡ ಮತ್ತು ಕನ್ನಡಿಗರು ಅಂತ ಕಾಂಗ್ರೆಸ್ ಹೇಳಿದ್ದು ಕೇವಲ ಚುನಾವಣೆಗೆ ಸೀಮಿತವೇ ಎಂದು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ.
ದಯಾನಂದಗೌಡ ಬಿ.ಎನ್ ಎನ್ನುವವರು, ಕಾಂಗ್ರೆಸ್ ಸರ್ಕಾರಕ್ಕೆ ಜಾಸ್ತಿ ಕಮಿಷನ್ ಹೋಗಿರಬೇಕು ಹಾಗೂ ನಮ್ಮ ಮೆಟ್ರೋ ಸಂಸ್ಥೆಗೂ ಜಾಸ್ತಿ ಕಮಿಷನ್ ಹೋಗಬೇಕು ಅದಕ್ಕೆ ನಮ್ಮ ಕರ್ನಾಟಕದವರು ನಂದಿನಿ ಹಾಲನ್ನು ದೂರ ಇಟ್ಟಿದ್ದಾರೆ. ಒಟ್ಟಿನಲ್ಲಿ ನಮ್ಮ ಕನ್ನಡಿಗರ ಬಗ್ಗೆ ನಮ್ಮ ಕನ್ನಡ ಸಂಸ್ಕೃತಿ ಬಗ್ಗೆ ಕನ್ನಡ ಭಾಷೆ ಬಗ್ಗೆ ನಮ್ಮ ರಾಜಕಾರಣಿಗಳಿಗೆ ಒಲವು ಇಲ್ಲ ಅವರಿಗೆ ಇರೋದು ನಮ್ಮ ಸಾರ್ವಜನಿಕರಿಂದ ಮತ ಬೇಕು ಅವರ ತೆರಿಗೆ ಹಣ ಬೇಕು. ಪರಭಾಷೆಗೆ ಅನುಕೂಲವಾಗುವ ರೀತಿ ಇವರು ಸರ್ಕಾರ ನೀಡುತ್ತಿದ್ದಾರೆ ಅಷ್ಟೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ರೀತಿಯ ಮಾತುಗಳನ್ನು ಹಲವು ಕನ್ನಡಿಗರು ವ್ಯಕ್ತಪಡಿಸಿದ್ದಾರೆ.

ಅನಿಲ್ ಎನ್ನುವವರು ತಪ್ಪು, ಮೊದಲು ನಮ್ಮ ರಾಜ್ಯ ಉತ್ಪನ ನಂದಿನಿ ಗೆ ಆದ್ಯತೆ ಕೊಡ್ಬೇಕು ಅಂತ ಹೇಳಿದ್ದಾರೆ. ಅವತ್ತು ನಮ್ಮ ನಂದಿನಿ ನಮ್ಮ ಹೆಮ್ಮೆ ಅಂತ ಹೇಳಿದ್ದರು.
ಎಲೆಕ್ಷನ್ ಆಯ್ತಲ್ಲ ಇನ್ನು ನಂದಿನಿ ಬೇಕಾಗಿಲ್ಲ ಎನ್ನುವ ಮಾತುಗಳು ಜನರಿಂದ ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ನಂದಿನಿ ಹಾಗೂ ನಂದಿನಿ ಉತ್ಪನ್ನಗಳಿಗೆ ತನ್ನದೇ ಡಿಮ್ಯಾಂಡ್ ಇದೆ. ವಿಶ್ವದಾದ್ಯಂತ ನಂದಿನಿ ಹಾಗೂ ನಂದಿನಿ ಉತ್ಪನ್ನಗಳನ್ನು ಜನ ಬಳಸುತ್ತಿದ್ದಾರೆ. ಕನ್ನಡದ ಹೆಮ್ಮೆಯ ಬ್ರ್ಯಾಂಡ್‌ಗೆ ಕರ್ನಾಟಕದಲ್ಲೇ ಅವಕಾಶ ಸಿಗದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿಯೂ ಬಂದಿದ್ದರು: ಇನ್ನು ಕರ್ನಾಟಕದಲ್ಲಿ ನಂದಿನಿ vs ಅಮೂಲ್ ಅಭಿಯಾನ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆಗ ಕಾಂಗ್ರೆಸ್ ರಾಜ್ಯದಾದ್ಯಂತ ಅಭಿಯಾನ ನಡೆಸಿತ್ತು. ಮಾತ್ರವಲ್ಲ ರಾಹುಲ್ ಗಾಂಧಿ ಅವರು ಸಹ ಈ ಅಭಿಯಾನಕ್ಕೆ ಕೈಜೋಡಿಸಿದ್ದರು. ಆದರೆ, ಇದಾದ ನಂತರ ಈ ವಿಚಾರವು ದೇಶದಾದ್ಯಂತ ಸುದ್ದಿಯಾಗಿತ್ತು. ನಂದಿನಿ vs ಅಮೂಲ್ ನಂತರ, ನಂದಿನಿ vs ಮಿಲ್ಮಾ ಸಹ ನಡೆದಿತ್ತು. ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಳಿಗೆ ತೆಗೆದಾಗ ನಾವು ನಮ್ಮ ಕೇರಳದ ಮಿಲ್ಮಾಗೆ ಹೆಚ್ಚು ಅವಕಾಶ ನೀಡಲಿದ್ದೇವೆ ಎಂದು ಅಲ್ಲಿನ ಸರ್ಕಾರ ಹೇಳಿತ್ತು. ಈ ಎರಡೂ ಅಭಿಯಾನಗಳಲ್ಲೂ ಕರ್ನಾಟಕದ ಪರವಾಗಿದ್ದ ಕಾಂಗ್ರೆಸ್ ಇದೀಗ ಅಮೂಲ್‌ಗೆ ಮಣೆ ಹಾಕುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications