ಕನ್ನಡ ಉಳಿಸಲು ಬಾಬು ಹಿರಣ್ಣಯ್ಯ ಸಲಹೆ ಕೇಳಿ, ಕನ್ನಡ ರಾಜ್ಯೋತ್ಸವದಲ್ಲಿ ರಂಗಕರ್ಮಿಯ ಸಲಹೆ
ಕನ್ನಡ ಭಾಷೆ ಉಳಿಸಲು ಬೆಳೆಸಲು ಅನ್ಯ ವಾಹನಗಳ ಮೇಲೆ ಕಲ್ಲು ಎಸೆಯುವ ಆಗತ್ಯವಿಲ್ಲ. ಹೊರಗಿನಿಂದ ಬಂದವರನ್ನು ದ್ವೇಷಿಸುವ ಅಗತ್ಯವೂ ಇಲ್ಲ. ನಮ್ಮವರನ್ನಾಗಿ ಮಾಡಿಕೊಂಡು ಅವರೊಂದಿಗೆ ಪ್ರೀತಿಯಿಂದ ಕನ್ನಡದಲ್ಲಿ ಮಾತನಾಡಿದರೆ ಕನ್ನಡವನ್ನು ಉಳಿಸಿ, ಬೆಳೆಸಬಹುದು ಎಂದು ರಂಗಕರ್ಮಿ, ನಟ ಬಾಬು ಹಿರಣ್ಣಯ್ಯ ಅಭಿಪ್ರಾಯಪಟ್ಟರು.
ಕನಕಪುರ ರಸ್ತೆಯ ಶೋಭಾ ಹಿಲ್‌ವ್ಯೂ ವಸತಿ ಸಂಕೀರ್ಣದಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣವಾದಾಗ ಹುಯಿಲುಗೋಡು ನಾರಾಯಣ ರಾವ್ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಕವನ ಬರೆದರೆ, ಡಿ.ಎಸ್.ಕರ್ಕಿ ಅವರು ಹಚ್ಚೇವು ಕನ್ನಡದ ದೀಪವೆಂದು ಕವನ ಬರೆದರು. ಅವು ಕನ್ನಡದ ಮಹತ್ವ, ಕನ್ನಡದ ಪ್ರಬುದ್ಧತೆಯನ್ನು ಸಾರುವ ಗೀತೆಗಳಾಗಿದ್ದವು. ಆದರೆ, ದೇವರಾಜು ಅರಸು ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಕನ್ನಡವನ್ನು ರಾಜ್ಯ ಭಾಷೆಯನ್ನಾಗಿ ಘೋಷಿಸಿ, ಎಲ್ಲ ಸರಕಾರಿ ಬೋರ್ಡ್‌ಗಳನ್ನು ಕನ್ನಡದಲ್ಲಿಯೇ ಬರೆಸಿದರು. ಎಂಜನೀಯರ್ ಎಂದಿದ್ದ ಬೋರ್ಡ್ ಅಭಿಯಂತರ ಕಚೇರಿ ಆಯಿತು. ಆದರೆ, ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಲವರು ವಿಫಲರಾದರು. ಕ್ಲಿಷ್ಟ ಪದಗಳನ್ನು ಬಳಸದೇ ಹೋದರೆ ಭಾಷೆಯ ಬೆಳವಣಿಗೆಗೆ ಒಳ್ಳೇಯದು. ಸರಳವಾಗಿ ಸಂಭಾಷಿಸುವ ಮೂಲಕ ಭಾಷ ಉಳಿಯುತ್ತೆ ಎಂದರು.

ಕರ್ನಾಟಕದಲ್ಲಿ ಕನ್ನಡಿಗರನ್ನು ಹುಡುಕುವುದು ಹೇಗೆ?
ಕರ್ನಾಟಕದಲ್ಲಿ ಕನ್ನಡಿಗರನ್ನು ಗುರುತಿಸುವುದು ಹೇಗೆಂದು ಹೆಸರಾಂತ ಸಾಹಿತಿ ಟಿ.ಪಿ.ಕೈಲಾಸಂ ತೆಲುಗಿನವನಿಗೆ ಯಾವ ಭಾಷೆಯಲ್ಲಿಯಲ್ಲಿಯೇ ಮಾತನಾಡಿದರೂ ಸ್ವಾಭಿಮಾನದಿಂದ ತೆಲುಗಿನಲ್ಲಿಯೇ ಉತ್ತರಿಸುತ್ತಾನೆ. ತಮಿಳುನವನು ತಾನು ತಮಿಳಿನಲ್ಲಿ ಉತ್ತರ ಕೊಡುವುದಲ್ಲದೇ, ಮಾತನಾಡಿಸಿದವರೂ ತಮಿಳಿನಲ್ಲಿಯೇ ಮಾತನಾಡುವಂತೆ ಮಾಡುತ್ತಾರೆ. ಮಲಯಾಳಂನವರು ಯಾವ ಭಾಷೆಯಲ್ಲಿ ಮಾತನಾಡಿದರೂ, ಅವರ ಉಚ್ಛಾರಣೆಯಿಂದಲೇ ಅವರ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾರೆ. ಆದರೆ, ಕನ್ನಡಿಗನಿಗೆ ಯಾರು, ಯಾವ ಭಾಷೆಯಲ್ಲಿಯೇ ಮಾತನಾಡಿಸಲಿ, ಕನ್ನಡದಲ್ಲಿಯೇ ಮಾತನಾಡಿಸಿದರೂ ಇಂಗ್ಲಿಷಲ್ಲಿ ಉತ್ತರ ಕೊಡುತ್ತಾನೆಂದು, ಹೇಳುತ್ತಿದ್ದರು. ಕನ್ನಡಿಗರ ಈ ಪ್ರವೃತ್ತಿಗೆ ವಿಷಾದ ವ್ಯಕ್ತಪಡಿಸಿರುವ ಬಾಬು ಹಿರಣ್ಣಯ್ಯ, ತಮಿಳರಿಗೆ ತಮ್ಮ ಭಾಷೆ ಮೇಲೆ ಅಂದಾಭಿಮಾನವಿದ್ದರೆ, ತೆಲುಗು ಮಂದಿಗೆ ಸ್ವಾಭಿಮಾನ ಹೆಚ್ಚು. ಆದರೆ, ಕನ್ನಡಿಗರಿಗೆ ಮಾತ್ರ ತಮ್ಮ ಭಾಷೆ ಮೇಲೆ ನಿರಾಭಿಮಾನ, ಎಂದರು.
ಕರ್ನಾಟಕದಲ್ಲಿ ಕನ್ನಡ ಬೆಳೆಸುವುದು ಹೇಗೆ?:
ಕನ್ನಡ ಪುಸ್ತಕ ಪ್ರತಿ ಮನೆಯಲ್ಲೂ ಓದುವ ಹವ್ಯಾಸ ಹೆಚ್ಚಬೇಕು. ಎಲ್ಲರೂ ಮಂಕುತಿಮ್ಮನ ಕಗ್ಗ, ವಚನವನ್ನು ವಾಚಿಸಬೇಕು. ನಾವು ಮಕ್ಕಳ ಮುಂದೆ ಓದಬೇಕು. ಕನ್ನಡದ ನಿಜವಾದ ಸೇವೆ ಅಂದ್ರೆ ಕನ್ನಡ ಪುಸ್ತಕಗಳನ್ನು ಓದುವುದು. ಕನ್ನಡ ಪುಸ್ತಕಗಳನ್ನೇ ಬರೀಬೇಕು ಅಂತೇನೂ ಅಲ್ಲ. ಪ್ರತಿಯೊಬ್ಬರೂ ಸಾಹಿತಿಯಾಗಬೇಕು ಅಂತಾ ಅಲ್ಲ. ಸೋಷಿಯಲ್ ಮೀಡಿಯಾ ಪ್ರಭಾವದಿಂದ ಎಲ್ಲರೂ ಸಾಹಿತಿಯಾಗುತ್ತಿದ್ದಾರೆ. ಅದೂ ಅಲ್ಲ. ಆದರೆ, ಕನ್ನಡವನ್ನು ಹೆಚ್ಚೆಚ್ಚು ಓದುವ ಮೂಲಕ ಕನ್ನಡದ ಹಿರಿಮೆಯನ್ನು ಮತ್ತೊಂದು ಪೀಳಿಗೆಗೆ ಸಾಗಿಸಬೇಕು, ಎಂದರು.
ಕೂಡು ಕುಟುಂಬವೀಗ ಅಪಾರ್ಟ್‌ಮೆಂಟಲ್ಲಿ
ಹಿಂದೆ ಕೂಡು ಕುಟುಂಬಗಳು ಸರ್ವೇ ಸಾಮಾನ್ಯವಾಗಿ ಕಾಣಿಸುತ್ತಿದ್ದವು. ಮಕ್ಕಳ ಜೊತೆ ಹಿರಿಯರು ಬೆರೆಯುತ್ತಿದ್ದರು. ಆದರೆ, ಬರ್ತಾ ಬರ್ತಾ ಅದು ಕಡಿಮೆಯಾಯಿತು. ಆದರೀಗ ಅಪಾರ್ಟ್‌ಮೆಂಟ್ ಸಂಸ್ಕೃತಿಯಲ್ಲಿ ಕೇವಲ ಕನ್ನಡ ರಾಜ್ಯೋತ್ಸವ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಮಾತ್ರವಲ್ಲ, ಪ್ರತಿಯೊಂದೂ ಹಬ್ಬವನ್ನು ಒಟ್ಟಾಗಿ ಆಚರಿಸುವ ಪರಿ ಹೆಚ್ಚುತ್ತಿದೆ. ಇದು ಆಧುನಿಕ ಕೂಡು ಕುಟುಂಬ ಆಗಬೇಕು. ಒಬ್ಬರಿಗೊಬ್ಬರು ಸಹಕರಿಸಿಕೊಂಡು ಬದುಕುವುದನ್ನು ಕಲೀಬೇಕು. ಅದು ಬಿಟ್ಟು ದ್ವೇಷದಿಂದ ಬದುಕಿದರೆ ಜೀವನದಲ್ಲಿ ಏನೂ ಸಾಧಿಸಲು ಆಗುವುದಿಲ್ಲ. ನಮ್ಮನ್ನು ಅನ್ಯರು ಪ್ರೀತಿಸುವಂತೆ ನಾವು ನಡೆದುಕೊಳ್ಳಬೇಕು. ಒಂದು ಭಾಷೆಯನ್ನು ಬೆಳಸಲು ಪ್ರೀತಿ ಮುಖ್ಯವೆಂದರು.
ಪ್ರೀತಿ ಹರಡಲಿ, ದ್ವೇಷ ತಗ್ಗಲಿ
ಕನ್ನಡಿಗರಿಗೆ ಹೃದಯ ವೈಶಾಲ್ಯತೆ ಹೆಚ್ಚು. ಎಲ್ಲರನ್ನೂ ತಮ್ಮವರನ್ನಾಗಿಸುವ ದೊಡ್ಡ ಗುಣವಿದೆ. ಬೆಂಗಳೂರಿನ ಪ್ರತೀ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದರೂ ಸಣ್ಣ ಭಾರತವನ್ನೇ ಕಾಣಬಹುದು. ಕನ್ನಡವನ್ನು ಬೆಳೆಸಲು, ಉಳಿಸಲು ಅನ್ಯ ರಾಜ್ಯ ವಾಹನಗಳ ಮೇಲೆ ಕಲ್ಲೆಸೆಯುವ ಅಗತ್ಯವಿಲ್ಲ. ಆದರೆ, ಅನ್ಯ ರಾಜ್ಯದವರು ಕರ್ನಾಟಕದಲ್ಲಿ ಆಚರಿಸುವ ಹಬ್ಬ ಹರಿದಿನಗಳಲ್ಲಿ ಪಾಲ್ಗೊಳ್ಳುವುದಲ್ಲದೇ, ನಮ್ಮ ವಿಶೇಷ ದಿನಗಳಲ್ಲಿ ಅವರನ್ನು ಭಾಗಿಯಾಗುವಂತೆ ನೋಡಿಕೊಳ್ಳಿ. ಅವರಿಗೆ ನಮ್ಮ ವಿಶೇಷ ಖಾದ್ಯ ಮಾಡಿ, ಬಡಿಸಿ. ಅವರಿಂದಲೂ ಅವರ ಸಂಸ್ಕೃತಿ, ಆಹಾರವನ್ನು ಮಾಡುವುದ ಕಲಿತುಕೊಳ್ಳಿ. ಜಡವಾದ ಭಾಷೆ ಆಮದು ಮಾಡಿಕೊಂಡರೆ ಬೆಳೆಯುತ್ತೆ. ಕನ್ನಡವನ್ನು ಉಳಿಸಬೇಕೆಂಬ ಕಾಳಜಿ ಇದ್ದರೆ ಎಲ್ಲೆಡೆ ಅದನ್ನು ಬಳೆಸಿ. ಆಗ ಭಾಷೆ ತಾನಾಗಿಯೇ ಬೆಳೆಯುತ್ತೆ. ಭಾಷೆ ದೇಶವನ್ನು ಜೋಡಿಸುತ್ತೆ. ಎಲ್ಲವಕ್ಕೂ ಮುನ್ನ ನಾವು ಮಾನವರಾಗಬೇಕು. ಅದರಿಂದ ದೇಶವೂ ಉಳಿಯುತ್ತೆ ಎಂದರು.
ಜರ್ಮನ್‌ನಿಂದ ಕರ್ನಾಟಕಕ್ಕೆ ಬಂದ ಕಿಟಲ್ 800 ಪುಟಗಳ ನಿಘಂಟು ರಚಿಸಿದರು. ಆದರೆ, ಬರ್ತಾ ಬರ್ತಾ ಇದರ ಮೇಲೆ ಹಲವರು ಕೆಲಸ ಮಾಡಿ ಎಂಟು ಸಂಪುಟಗಳ ನಿಘಂಟು ರಚನೆಯಾಗುವಂತಾಯಿತು. ಕನ್ನಡದವರಿಗೇ ಉಪ್ಪೇರಿ ಅಂದ್ರೆ ಚಿಪ್ಸ್ ಅಂತ ಗೊತ್ತಾಗೋಲ್ಲ. ಅನ್ಯ ಭಾಷೆಗಳ ಶಬ್ಧವನ್ನೊಳಗೊಳ್ಳುವಂತೆ ಮಾಡಿ, ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಬೇಕೆಂದು ಬಾಬು ಹಿರಣ್ಣಯ್ಯ ಕನ್ನಡ ರಾಜ್ಯೋತ್ಸವದ ಮಖ್ಯ ಅತಿಥಿಯಾಗಿ ಭಾಷಣ ಮಾಡಿ, ಕನ್ನಡ ಉಳಿಸುವಂತೆ ಕರೆ ನೀಡಿದರು. ಪ್ರೀತಿ ತೋರಿದರೆ ನಮ್ಮ ಭಾಷೆ, ಸಂಸ್ಕೃತಿ ಉಳಿಯುತ್ತೆ. ಒತ್ತಡದಿಂದ ಯಾವುದೇ ಕೆಲಸವಾಗುವುದಿಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಜ್ಞಾನ ಪೀಠ ಪ್ರಶಸ್ತಿ ಪಡೆದವರ ಭಾಷೆ ಕನ್ನಡವಲ್ಲ
ಡಿವಿಜಿ ಅವರ ಮಾತೃಭಾಷೆ ತೆಲುಗು. ನಾ ಕಸ್ತೂರಿ ಅವರ ಮಾತೃಭಾಷೆ ಮಲಯಾಳಂ. ಮಾಸ್ತಿ ಅವರ ಮಾತೃಭಾಷೆ ತಮಿಳು. ಬೇಂದ್ರೆ ಅವರ ಮಾತೃಭಾಷೆ ಮಾರಾಠಿ. ಶಿವರಾಮ ಕಾರಂತರ ಮಾತೃಭಾಷೆ ತುಳು, ಆದರೆ ಬರೆದದ್ದು ಕನ್ನಡದಲ್ಲಿ. ಶ್ರೀಮಂತಗೊಳಿಸಿದ್ದು ಕನ್ನಡ ಸಾಹಿತ್ಯವನ್ನು. ಹೇಗೆ ಹುಡುಕಿದರೆ ಹಲವು ಉದಾಹರಣೆಗಳು ಸಿಗುತ್ತವೆ. ಕನ್ನಡಿಗರಿಂದಲೇ ಕನ್ನಡ ಉಳಿಯುವುದಲ್ಲ. ಅನ್ಯ ಭಾಷಿಗರಿಂದಲೂ ಭಾಷೆ ಬೆಳಸಬಹುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಬೇು. ಕನ್ನಡಕ್ಕೆ ಜ್ಞಾನಪೀಠ ತಂದು ಕೊಟ್ಟ ಹಲವು ಸಾಹಿತಿಗಳು ಕನ್ನಡಿಗರೇ ಅಲ್ಲವೆಂದು ಹೇಳಿದರು.


Click it and Unblock the Notifications
