ಅಕ್ರಮ ಗಣಿ ವಿಚಾರಣೆ ಎಸ್ಐಟಿಗೆ: ನ್ಯಾ. ಸಂತೋಷ್ ಹೆಗ್ದೆ ಹೇಳಿದ್ದೇನು?
ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ಎಸ್ಐಟಿಗೆ ಹಸ್ತಾಂತರ. ಈ ಬಗ್ಗೆ ನ್ಯಾ. ಸಂತೋಷ್ ಹೆಗ್ದೆ ಸಂತಸ. 2011ರಲ್ಲಿ ಅಂದಿನ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹೆಗ್ದೆ ಅವರಿಂದ ವರದಿ ಸಲ್ಲಿಕೆ.
ಬೆಂಗಳೂರು, ಜುಲೈ 12: ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಈ ಹಿಂದೆ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ್ದ ವರದಿಯ ಆಧಾರದ ಮೇರೆಗೆ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿರುವುದು ಖುಷಿ ತಂದಿದೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಬುಧವಾರ ಸಂಜೆ ಸಭೆ ಸೇರಿದ್ದ ರಾಜ್ಯ ಸಚಿವ ಸಂಪುಟ, ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಈ ಹಿಂದೆ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ್ದ ಎರಡು ವರದಿಗಳಲ್ಲಿನ ಪ್ರಕರಣಗಳನ್ನು ವಿಚಾರಣೆ ನಡೆಸಲು ರಾಜ್ಯದ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ವಹಿಸಲು ನಿರ್ಧರಿಸಿತು. ಅದರಂತೆ, ಜಂತಕಲ್ ಮೈನಿಂಗ್ ಪ್ರಕರಣ ಸೇರಿದಂತೆ ಸುಮಾರು ಏಳು ಪ್ರಕರಣಗಳು ಎಸ್ಐಟಿ ಹೆಗಲೇರಲಿವೆ.
ಈ ಹಿನ್ನೆಲೆಯಲ್ಲಿ, ತಮ್ಮನ್ನು ಸಂಪರ್ಕಿಸಿದ 'ಒನ್ ಇಂಡಿಯಾ'ದೊಂದಿಗೆ ನ್ಯಾ. ಸಂತೋಷ್ ಹೆಗ್ಡೆ ಸಂಪುಟ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರ ಮಾತುಗಳ ಆಯ್ದ ಭಾಗ ಇಲ್ಲಿದೆ.

- ಇದೀಗ ಎಸ್ಐಟಿಗೆ ಅಕ್ರಮ ಗಣಿಕಾರಿಕೆ ಪ್ರಕರಣದ ಜವಾಬ್ದಾರಿ ನೀಡಲಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ನಮ್ಮ ಕಾನೂನು ಹೇಗಿದೆಯೆಂದರೆ, ನಾವು (ಲೋಕಾಯುಕ್ತ) ಕೊಟ್ಟ ವರದಿಯನ್ನು ಒಂದೋ ವಿಚಾರಣೆ ನಡೆಸಬೇಕು ಅಥವಾ ತಳ್ಳಿಹಾಕಬೇಕು. ಆದರೆ, ರಾಜ್ಯ ಸರ್ಕಾರ ತಡವಾಗಿಯಾದರೂ, ನಮ್ಮ ವರದಿಗೆ ಬೆಲೆ ನೀಡಿ ಅದರ ವಿಚಾರಣೆಗೆ ಮುಂದಾಗಿರುವುದು ಖುಷಿ ತಂದಿದೆ.
- ಈಗ ಎಸ್ಐಟಿ ತನಿಖಾ ವ್ಯಾಪ್ತಿಗೆ ಯಾವ್ಯಾವ ನೇತಾರರು, ವಿಐಪಿಗಳು ಬರಲಿದ್ದಾರೆ?
ವರದಿಯಲ್ಲಿ ಎಷ್ಟು ಜನರ ಹೆಸರು ಹಾಕಿದ್ದೆ ಎಂಬುವುದು ನನಗೆ ಮರೆತುಹೋಗಿದೆ. ನನಗೆ ತಿಳಿದಿರುವಂತೆ ಮೂರು ಜನ ಮಾಜಿ ಮುಖ್ಯಮಂತ್ರಿಗಳು, ಸುಮಾರು ಏಳೆಂಟು ಜನ ಮಂತ್ರಿಗಳಿದ್ದಾರೆ. 700ಕ್ಕೂ ಮೇಲ್ಪಟ್ಟು ಅಧಿಕಾರಿಗಳಿದ್ದಾರೆ. ಇದರ ಜತೆಗೆ ನೂರಾರು ಕಂಪನಿಗಳಿವೆ. ನಮ್ಮ ವರದಿಯ ಆಧಾರದಲ್ಲಿ ಎಸ್ಐಟಿ ವಿಚಾರಣೆ ನಡೆಸಬೇಕಿದೆ.
- ಜನಾರ್ಧನ ರೆಡ್ಡಿಯವರಿಗೆ ಸಂಬಂಧಿಸಿದ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳನ್ನು ಸಿಬಿಐ ಕೈ ಬಿಟ್ಟಿದೆ. ಆ ಪ್ರಕರಣಗಳಿಗೂ ಮರುಜೀವ ಬರಲಿದೆಯೇ?
ಅದು ಹಾಗೆ ಬರುವುದಿಲ್ಲ. ಈಗ ಸಿಬಿಐ ಕೊಟ್ಟಿರುವ ವರದಿಯಾಗಲೀ, ಕೈಬಿಟ್ಟ ಕೇಸುಗಳಿಗಾಗಲೀ ಯಾರೇ ಜನ ಸಾಮಾನ್ಯರಾಗಲೀ ಸರ್ಕಾರವಾಗಲೀ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೆ ಮಾತ್ರ ಆ ಕೇಸುಗಳ ಮರು ತನಿಖೆ ಅಥವಾ ವಿಚಾರಣೆಗೆ ನ್ಯಾಯಾಲಯ ಸೂಚನೆ ನೀಡುತ್ತದೆ. ಹಾಗಾಗಿ, ಈಗ ರಾಜ್ಯ ಸರ್ಕಾರವು ಲೋಕಾಯುಕ್ತ ವರದಿಯನ್ನು ವಿಚಾರಣೆಗೊಳಪಡಿಸಲು ನಿರ್ಧರಿಸಿರುವುದರಿಂದ ಆ ಕೇಸುಗಳಿಗೆ ಮರುಜೀವ ಬರುವುದಿಲ್ಲ. ಈಗ ಎಸ್ಐಟಿಗೆ ನೀಡಲಾಗಿರುವ ಲೋಕಾಯುಕ್ತ ವರದಿಯಲ್ಲಿ ರೆಡ್ಡಿಯವರಿಗೆ ಸಂಬಂಧಪಟ್ಟ ಕೇಸುಗಳಲ್ಲಿ ಸಿಬಿಐ ತನಿಖೆಗೊಳಪಡಿಸಿರುವ ಕೇಸುಗಳನ್ನು ಬಿಟ್ಟು ಉಳಿದ ಪ್ರಕರಣಗಳ್ಯಾವಾದರೂ ಇದ್ದರೆ ಆ ಬಗ್ಗೆ ತನಿಖೆ ನಡೆಸಲಾಗುತ್ತದೆ.












Click it and Unblock the Notifications