ಮೂವರು ಮಕ್ಕಳಿಗೆ ಚಿತ್ರಹಿಂಸೆ ಕೊಟ್ಟ ತಂದೆಯನ್ನು ಬಂಧಿಸಿದ ಪೊಲೀಸರು
ಬೆಂಗಳೂರು, ಜೂ. 23: ಕಳೆದ ಮೂರು ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಮೂವರು ಮಕ್ಕಳು ತಂದೆಯನ್ನೇ ನಂಬಿದ್ದರು. ಆದರೆ ಗೊತ್ತಿಲ್ಲದೇ ಮನೆಗೆ ಚಿಕ್ಕಮ್ಮ ಬಂದು ಬಿಟ್ಟಿದ್ದಳು. ಎರಡನೇ ಪತ್ನಿಯ ಮಾತು ಕೇಳಿದ ಪತಿರಾಯನೊಬ್ಬ ಮೊದಲ ಪತ್ನಿಯ ಮಕ್ಕಳಿಗೆ ದೋಸೆ ಕುರ್ಪಿಯಿಂದ ಬರೆ ಎಳೆದು ಹಿಂಸೆ ನೀಡಿದ್ದಾನೆ. ತಂದೆ ನೀಡಿದ ಕಿರುಕುಳ ತಾಳಲಾರದೇ ಮನೆ ಬಿಟ್ಟು ಹೋಗಿದ್ದ ಆ ಮೂವರು ಪುಟ್ಟ ಕಂದಮ್ಮಗಳನ್ನು ಜೆ.ಪಿ.ನಗರ ಪೊಲೀಸರೇ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇದು ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ನಡೆದಿರುವ ಕರುಣಾಜನಕ ಕಥೆ. ಸೆಲ್ವ ಎಂಬಾತನ ಮೊದಲ ಪತ್ನಿ ಅಂಜಲಿ ತೀರಿಕೊಂಡಿದ್ದಳು. ಮೂರು ಜನ ಮಕ್ಕಳಿದ್ದರು. ತನ್ನ ಮಕ್ಕಳೆ ನನಗೆ ಎಲ್ಲವೂ ಎಂದು ಭಾವಿಸಿದ್ದರೆ ತಮಿಳು ಸೆಲ್ವಂಗೆ ಯಾವ ಸಮಸ್ಯೆಯೂ ಬರುತ್ತಿರಲಿಲ್ಲ. ತನ್ನ ಮುದ್ದು ಕಂದಮ್ಮಗಳ ಜತೆಗೆ ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದಿತ್ತು. ಆದರೆ, ಸೆಲ್ವ ಹಾಗೆ ಮಾಡಲಿಲ್ಲ. ಹೆಂಡತಿ ತೀರಿಕೊಂಡ ಮೂರೇ ತಿಂಗಳಿಗೆ ಮತ್ತೊಮ್ಮ ಸತ್ಯ ಎಂಬ ಮಹಿಳೆಯನ್ನು ಮದುವೆಯಾಗಿ ಮನೆಗೆ ಕರೆತಂದಿದ್ದ. ಆಕೆಯೇ ಮೂವರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.

ಮಕ್ಕಳು ತುಂಬಾ ಹಠ ಮಾಡುತ್ತಾರೆ ಎಂದು ಎರಡನೇ ಪತ್ನಿ ಹೇಳಿದ ಮಾತು ಕೇಳಿ ಸೆಲ್ವಂ ಮೂವರು ಮಕ್ಕಳಿಗೆ ಚಿತ್ರಹಿಂಸೆ ನೀಡಿದ್ದಾನೆ. ದೋಸೆ ಕುರ್ಪಿಯಿಂದ ಮಕ್ಕಳ ಮೈಮೇಲೆ ಬರೆ ಎಳೆದಿದ್ದಾನೆ. ಮಕ್ಕಳು ಕಿರಿಚಾಡುವ ಸದ್ದು ಕೇಳಿದ ಸ್ಥಳೀಯರು ಜೆ.ಪಿ.ನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೂವರು ಮಕ್ಕಳಿಂದ ಹೇಳಿಕೆ ಪಡೆದು ಅವರ ತಂದೆಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಮೂವರು ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಿರುವ ಜೆ.ಪಿ.ನಗರ ಪೊಲೀಸರು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಬಿಟ್ಟಿದ್ದಾರೆ.

ಮೂವರು ಮಕ್ಕಳ ಮೇಲೆ ಹಲ್ಲೆ ಮಾಡಿರುವ ಘಟನೆ ಸಂಬಂಧ ಮಾಹಿತಿ ನಮ್ಮ ಗಮನಕ್ಕೆ ಬಂತು. ಕೂಡಲೇ ಆರೋಪಿಯನ್ನು ಬಂಧಿಸಿ ಮೂವರು ಮಕ್ಕಳನ್ನು ರಕ್ಷಿಸಿದ್ದೇವೆ. ಮಕ್ಕಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸುವ ಸಲುವಾಗಿ ಹಾಕಿದ್ದ ಗುರುತಿನಂತೆ ಕಾಣುತ್ತಿವೆ. ಮಕ್ಕಳ ಮೇಲಿನ ಗಾಯಗಳು ಒಮ್ಮೆ ಮಾತ್ರ ಆಗಿಲ್ಲ ಎಂಬುದು ದೃಢಪಟ್ಟಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
Recommended Video













Click it and Unblock the Notifications