ಬೆಂಗಳೂರು: ಕೋಚಿಂಗ್ ಇಲ್ಲದೆ JEE Mains ಪಾಸ್ ಮಾಡಿದ ಗಾರ್ಮೆಂಟ್ಸ್ ಕಾರ್ಮಿಕನ ಮಗ; ಇದು ಸರ್ಕಾರಿ ಕಾಲೇಜು ವಿದ್ಯಾರ್ಥಿ ಯಶೋಗಾಥೆ
ಇತ್ತೀಚಿನ ದಿನಗಳಲ್ಲಿ ಲಕ್ಷ ಲಕ್ಷ ದುಡ್ಡು ಕೊಟ್ಟು ಕೋಚಿಂಗ್ ತಗೆದುಕೊಂಡ್ರೆ ಮಾತ್ರ ಜೆಇಇ, ನೀಟ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಆಗಲು ಸಾಧ್ಯ ಎನ್ನುವುದು ಎಲ್ಲರ ಮನಸ್ಸಲ್ಲಿ ಆಳವಾಗಿ ಬೇರೂರಿದೆ. ಸೆಲ್ಫ್ ಸ್ಟಡಿ ಮಾಡಿ ಪಾಸ್ ಆಗುವವರ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ. ಆದರೆ ಬೆಂಗಳೂರಿನ ಯುವಕನೊಬ್ಬ ಸೆಲ್ಫ್ ಸ್ಟಡಿಯಿಂದ ಜೆಇಇ ಮೇನ್ಸ್ ಪರೀಕ್ಷೆ ಪಾಸಾಗಿದ್ದಾನೆ.
ಹೌದು, ಮನೆಯಲ್ಲಿರುವ ಕಡು ಬಡತನ, ದುಬಾರಿ ಕೋಚಿಂಗ್ ಸಹ ಇಲ್ಲ. ಇವು ಯಾವುದೂ ಕೂಡ ಆತನಲ್ಲಿರುವ ಸಾಧಿಸಬೇಕು ಎನ್ನುವ ಛಲಕ್ಕೆ ಅಡ್ಡಿಯಾಗದು ಎಂಬುದನ್ನು ಬೆಂಗಳೂರಿನ ದಾಸರಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೀಕಾಂತ್ ಎಸ್‌ಎನ್ ಸಾಬೀತು ಮಾಡಿ ಎಲ್ಲರಿಗೂ ತೋರಿಸಿದ್ದಾನೆ. ಲಕ್ಷಾಂತರ ರೂಪಾಯಿ ಕೊಟ್ಟು ಟ್ಯೂಷನ್‌ಗೆ ಹೋಗುವವರ ನಡುವೆ, ಕೇವಲ ಸ್ವಯಂ ಅಧ್ಯಯನ ಅಂದರೆ ಈ ಸೆಲ್ಫ್ ಸ್ಟಡಿ ಹಾಗೂ ಶಿಕ್ಷಕರ ಮಾರ್ಗದರ್ಶನದ ಮೂಲಕ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ ನೋಡಿ.

ಗಾರ್ಮೆಂಟ್ಸ್ ಕಾರ್ಮಿಕನ ಪುತ್ರನ ಯಶೋಗಾಥೆ
ಶ್ರೀಕಾಂತ್ ಅವರ ತಂದೆ ಶೇಖರಪ್ಪ ಹಾಗೂ ತಾಯಿ ಜಯಶ್ರೀ ಪೀಣ್ಯದ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಾರೆ. ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಶ್ರೀಕಾಂತ್, ರಾಯಚೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಬಳಿಕ ಸಿಂಧನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿ, ಪಿಯುಸಿ ವ್ಯಾಸಂಗಕ್ಕಾಗಿ ಬೆಂಗಳೂರಿನ ದಾಸರಹಳ್ಳಿ ಸರ್ಕಾರಿ ಪಿಯು ಕಾಲೇಜಿಗೆ ಸೇರಿದರು.
ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಎಸ್‌ಟಿ ವಿಭಾಗದಲ್ಲಿ 1975ನೇ ರ್‍ಯಾಂಕ್ ಪಡೆಯುವ ಮೂಲಕ ತಮಿಳುನಾಡಿನ ಕಾಂಚೀಪುರಂನಲ್ಲಿರುವ ಪ್ರಸಿದ್ಧ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್' (IIITDM) ಸಂಸ್ಥೆಗೆ ಪ್ರವೇಶ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಕೋಚಿಂಗ್ ಇಲ್ಲದೆ ಜೆಇಇ ಪಾಸ್: ಎನ್‌ಸಿಇಆರ್‌ಟಿ ಪುಸ್ತಕಗಳೇ ಯಶಸ್ಸಿನ ಗುಟ್ಟು
"ದುಬಾರಿ ಫೀಸ್ ಕಟ್ಟಿ ಎಂಟ್ರೆನ್ಸ್ ಪರೀಕ್ಷೆಗೆ ಕೋಚಿಂಗ್ ಪಡೆಯುವಷ್ಟು ಆರ್ಥಿಕ ಶಕ್ತಿ ನನ್ನ ಕುಟುಂಬಕ್ಕೆ ಇರಲಿಲ್ಲ. ಹೀಗಾಗಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳು ಹಾಗೂ 'ಫಿಸಿಕ್ಸ್ ವಾಲಾ' ಸ್ಟಡಿ ಮೆಟೀರಿಯಲ್‌ಗಳನ್ನ ಬಳಸಿಕೊಂಡು ನಾನೇ ಅಧ್ಯಯನ ನಡೆಸಿದೆ. ಕಾಲೇಜು ಮುಗಿದ ನಂತರವೂ ಪ್ರತಿದಿನ ರಾತ್ರಿ 12ರವರೆಗೆ ಓದುತ್ತಿದ್ದೆ. ನನ್ನ ಕಾಲೇಜಿನ ಉಪನ್ಯಾಸಕರು ನನಗೆ ಓದುವಾಗ ಬಂದ ಎಲ್ಲಾ ಡೌಟ್‌ಗಳನ್ನಾ ಪರಿಹರಿಸಿ ಬೆಂಬಲವಾಗಿ ನಿಂತರು" ಎಂದು ಶ್ರೀಕಾಂತ್ ತಮ್ಮ ಯಶಸ್ಸಿನ ಹಾದಿಯನ್ನು ಬಿಚ್ಚಿಟ್ಟಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಶಿಕ್ಷಕರ ಮೆಚ್ಚುಗೆ
ಶ್ರೀಕಾಂತ್ ಅವರ ಸಾಧನೆಯ ಬಗ್ಗೆ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ವಿಜಯಮ್ಮ ಕೆ.ಸಿ. ಸಂತಸ ವ್ಯಕ್ತಪಡಿಸಿದ್ದಾರೆ. "ಶ್ರೀಕಾಂತ್ ಅತ್ಯಂತ ಶಿಸ್ತು ಮತ್ತು ಶ್ರಮಜೀವಿ. ಕಾಲೇಜು ತರಗತಿಗಳು ಮುಗಿದ ನಂತರವೂ ಹೆಚ್ಚಿನ ಪಾಠಗಳಿಗಾಗಿ ಉಳಿದುಕೊಳ್ಳುತ್ತಿದ್ದ ನಾಲ್ವರು ವಿದ್ಯಾರ್ಥಿಗಳಲ್ಲಿ ಶ್ರೀಕಾಂತ್ ಕೂಡ ಒಬ್ಬರಾಗಿದ್ದರು. ಓದಿನ ಬಗ್ಗೆ ಆತನಿಗೆ ಅಪಾರ ಆಸಕ್ತಿ ಇತ್ತು" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಪೀಣ್ಯದಲ್ಲಿರುವ ಶ್ರೀಕಾಂತ್ ಅವರ ಮನೆಗೆ ಭೇಟಿ ನೀಡಿ ಶುಭಕೋರಿದ್ದಾರೆ.
ಭವಿಷ್ಯದಲ್ಲಿ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಸಂಕಲ್ಪ
"ಬಡತನದಿಂದ ಬರುವ ವಿದ್ಯಾರ್ಥಿಗಳು ಎದುರಿಸುವ ಆರ್ಥಿಕ ಕಷ್ಟಗಳನ್ನ ನಾನು ಹತ್ತಿರದಿಂದ ನೋಡಿದ್ದೇನೆ ಹಾಗೂ ಅದನ್ನಾ ನಾನು ಅನುಭವಿಸಿದ್ದೇನೆ. ಉತ್ತಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಭವಿಷ್ಯದಲ್ಲಿ ನನ್ನಂತಹ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಬೇಕು ಎಂಬ ಗುರಿಯಿದೆ. ಅದೇ ಆಲೋಚನೆ ನನ್ನನ್ನು ಈ ಮಟ್ಟಕ್ಕೆ ಕಷ್ಟಪಟ್ಟು ಓದುವಂತೆ ಪ್ರೇರೇಪಿಸಿತು" ಎಂದು ಶ್ರೀಕಾಂತ್ ಹೇಳಿದ್ದಾರೆ. ಶ್ರೀಕಾಂತ್ ಅವರ ಈ ಯಶೋಗಾಥೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ಎನ್ನಬಹುದು.


Click it and Unblock the Notifications
