ಆನೇಕಲ್; ಮನೆಯಲ್ಲಿ ಜೆಡಿಎಸ್ ಮುಖಂಡ, ಮಹಿಳೆ ಹತ್ಯೆ
ಬೆಂಗಳೂರು, ಡಿಸೆಂಬರ್ 12; ಜೆಡಿಎಸ್ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತು ಮಹಿಳೆಯನ್ನು ಮನೆಯೊಂದರಲ್ಲಿ ಹತ್ಯೆ ಮಾಡಿರುವ ಘಟನೆ ಆನೇಕಲ್‌ನ ಚಂದಾಪುರದಲ್ಲಿ ನಡೆದಿದೆ.
ಚಂದಾಪುರ ಗ್ರಾಮದ ರಾಮಯ್ಯ ಲೇಔಟ್‌ನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಕೊಲೆಯಾದವರನ್ನು ನಾರಾಯಣಸ್ವಾಮಿ, ಕಾವ್ಯ ಎಂದು ಗುರುತಿಸಲಾಗಿದೆ. ಇಬ್ಬರು ಸಹ ಚಿಕ್ಕ ಹಾಗಡೆ ಗ್ರಾಮದವರಾಗಿದ್ದಾರೆ.
ನಾರಾಯಣಸ್ವಾಮಿ ಮತ್ತು ಕಾವ್ಯ ಪರಿಚಯಸ್ಥರು. ಶನಿವಾರ ಸಂಜೆ ಕಾವ್ಯ ಮನೆಗೆ ನಾರಾಯಣಸ್ವಾಮಿ ಆಗಮಿಸಿದ್ದರು. ಆ ಸಮಯದಲ್ಲಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಇಬ್ಬರನ್ನೂ ಹತ್ಯೆ ಮಾಡಿದ್ದಾರೆ.

ಕಾವ್ಯ ತಾಯಿಯ ಜೊತೆ ಮನೆಯಲ್ಲಿ ವಾಸವಾಗಿದ್ದರು. ಕಾವ್ಯ ತಾಯಿ ಅಂಗಡಿಗೆ ಹೋಗಿದ್ದರು. ಆಗ ಮನೆಯಲ್ಲಿ ನಾರಾಯಣ ಸ್ವಾಮಿ ಮತ್ತು ಕಾವ್ಯ ಇಬ್ಬರೇ ಇದ್ದರು. ಆಗ ದುಷ್ಕರ್ಮಿಗಳು ಆಗಮಿಸಿ ಇಬ್ಬರನ್ನು ಕೊಂದು ಹಾಕಿದ್ದಾರೆ.
ಕಾವ್ಯಾಳ ತಾಯಿ ಅಂಗಡಿಯಿಂದ ಬಂದ ಬಳಿಕ ಘಟನೆ ಬಗ್ಗೆ ಮಾಹಿತಿ ತಿಳಿದಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅನೈತಿಕ ಸಂಬಂಧ ಶಂಕೆ; ಕೊಲೆಯಾದ ನಾರಾಯಣಸ್ವಾಮಿ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ. ನಾರಾಯಣಸ್ವಾಮಿ ಶವದ ಪಕ್ಕದಲ್ಲಿಯೇ 32 ವರ್ಷದ ಕಾವ್ಯಾ ಕಾವ್ಯಾ ಶವ ಸಿಕ್ಕಿದೆ.
ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು. ಆದ್ದರಿಂದ ಯಾರೋ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾವ್ಯಾ ಪತಿ ಮುತ್ತುರಾಜ್ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ದಾಖಲಾಗಿವೆ. ಕೆಲವು ಸ್ನೇಹಿತರ ಜೊತೆ ಸೇರಿ ಮುತ್ತುರಾಜ್ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಡಿವೈಎಸ್‌ಪಿ ಎಂ. ಮಲ್ಲೇಶ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾವ್ಯಾಳ ಪತಿ ಮುತ್ತುರಾಜ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪತ್ನಿಗೆ ಚುಡಾಯಿಸಿದ ಪ್ರಕರಣ, ಎಫ್ಐಆರ್ ದಾಖಲು; ಬೆಂಗಳೂರಿನ ಕೆಂಪೇಗೌಡ ನಗರ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿಗಳಿಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾಸು ಮತ್ತು ಯತೀಶ್ ನಡುವೆ ಗಲಾಟೆ ನಡೆದಿದೆ. ಇಬ್ಬರು ಸಹ ದೂರು ನೀಡಿದ್ದು, 2 ಎಫ್‌ಐಆರ್ ದಾಖಲು ಮಾಡಲಾಗಿದೆ.
ವಾಸು ಪತ್ನಿಯನ್ನು ಯತೀಶ್ ಚುಡಾಯಿಸುತ್ತಿದ್ದ, ಮೊಬೈಲ್‌ಗೆ ಅಶ್ಲೀಲ ಸಂದೇಶ ಕಳುಹಿಸಿ ಪೀಡಿಸುತ್ತಿದ್ದ ಎಂಬುದು ಗಲಾಟೆಗೆ ಕಾರಣವಾಗಿದೆ. ವಾಸು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯತೀಶ್, ಯತೀಶ್ ತನ್ನ ಪತ್ನಿಯನ್ನು ಚುಡಾಯಿಸುತ್ತಿದ್ದರು ಎಂದು ವಾಸು ದೂರು ಕೊಟ್ಟಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾರನ್ನು ಹಿಂಬಾಲಿಸಿ ದೌರ್ಜನ್ಯ; ಸಂಬಂಧಿಕ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಬರುತ್ತಿದ್ದ ಮಹಿಳೆಯ ಕಾರು ಹಿಂಬಾಲಿಸಿ ದೌರ್ಜನ್ಯ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದೂರುದಾರ ಮಹಿಳೆ ಇಬ್ಬರು ಮಕ್ಕಳ ಜೊತೆ ಹೊಸಕೋಟೆಯಲ್ಲಿರುವ ಸಂಬಂಧಿಕರ ಮನೆಗೆ ಶನಿವಾರ ತೆರಳಿದ್ದರು. ರಾತ್ರಿ ಬೆಂಗಳೂರಿಗೆ ಮರಳುವಾಗ ಅಪರಿಚಿತರು ಕಾರನ್ನು ಹಿಂಬಾಲಿಸಿದ್ದಾರೆ. ಹೆಬ್ಬಾಳ ಬಳಿ ಮಹಿಳೆಯನ್ನು ಮಾತನಾಡಿದ ಅಪರಿಚಿತರು ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ದೂರಿನ ಹಿನ್ನಲೆಯಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಗೊರುಗುಂಟೆಪಾಳ್ಯ ತನಕ ಕಾರನ್ನಯ ದುಷ್ಕರ್ಮಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಮಹಿಳೆ ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೆಲವು ನಿಮಿಷದಲ್ಲಿಯೇ ಹೊಯ್ಸಳ ವಾಹನ ಆಗಮಿಸಿದ್ದು, ಆಗ ಆತ ಪರಾರಿಯಾಗಿದ್ದಾನೆ.












Click it and Unblock the Notifications