ಜೈಲು ಬಿಟ್ಟ ಜಯಾ, ನಿಟ್ಟುಸಿರು ಬಿಟ್ಟ ಬೆಂಗಳೂರು
ಬೆಂಗಳೂರು, ಅ. 18 : ಒಂದೆಡೆ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿ ಬಂದ ಮಾಜಿ ಮುಖ್ಯಮಂತ್ರಿ, ಅಕ್ರಮ ಆಸ್ತಿ ಸಂಪಾದಿಸಿ ಜೈಲುವಾಸ ಕಳೆದ ಆರೋಪಿ ಕು. ಜಯಲಲಿತಾಳನ್ನು ಕಂಡು ಚೆನ್ನೈ ಹುಚ್ಚು ಉನ್ಮಾದದಿಂದ ಭೋರ್ಗರೆಯುತ್ತಿದ್ದರೆ, ಸದ್ಯ ಬೆಂಗಳೂರಿನಿಂದ ಹೊರಬಿದ್ದಳಲ್ಲಪ್ಪ ಎಂದು ಬೆಂಗಳೂರು ನಿಟ್ಟುಸಿರುಬಿಟ್ಟಿದೆ.
ಇಪ್ಪತ್ತೆರಡು ದಿನಗಳಷ್ಟು ಜಯಲಲಿತಾ ಜೈಲಲ್ಲಿದ್ದಷ್ಟು ಕಾಲ, ಅಮ್ಮನಿಗಾಗಿ ತಲೆಬೋಳಿಸಿಕೊಂಡು, ಎದೆಬಡಿದುಕೊಂಡು ಅತ್ತುಕರೆದು ರಂಪಾಟ ಮಾಡಿ, ಇವತ್ತೇ ಬಿಡುಗಡೆಯಾಗುತ್ತಾಳೆ ಎಂದು ಪ್ರತಿದಿನವೂ ಜೈಲು ಸುತ್ತಮುತ್ತ ಕಾಯುತ್ತ ಕುಳಿತ ಸಹಸ್ರಾರು ತಮಿಳುನಾಡಿನ, ಕರ್ನಾಟಕದಲ್ಲಿ ಉಸಿರಾಡುತ್ತಿರುವ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಬೇಸ್ತುಬಿದ್ದು ಹೋಗಿದ್ದಾರೆ.
ಸೆಪ್ಟೆಂಬರ್ 27ರಂದು ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ಅವರು ಜಯಲಲಿತಾ ಅವರನ್ನು ಜೈಲಿಗಟ್ಟಿನದ ದಿನದಿಂದ, ಅಕ್ಟೋಬರ್ 18ರಂದು ಅಮ್ಮ ಜೈಲಿಂದ ಹೊರಬಂದು ಚೆನ್ನೈ ಸೇರುವವರೆಗೆ ಕರ್ನಾಟಕದ ಪೊಲೀಸರು ಸರಿಯಾಗಿ ತಿಂಡಿ, ಊಟ, ನಿದ್ದೆ ಮಾಡಿಲ್ಲ.

ಸುಪ್ರೀಂ ಕೋರ್ಟ್ ಆದೇಶದಂತೆ ಜಾಮೀನು ಪಡೆದು ಹೊರಬರುವ ಶನಿವಾರ ದಿನವಂತೂ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಜೈಲು ಸುತ್ತಮುತ್ತ ಅಭೂತಪೂರ್ವ ಭದ್ರತೆಯನ್ನು ಕಲ್ಪಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಸಂಗತಿಯೆ.
ಸೆ.27ರಂದು ಶಿಕ್ಷೆಯಾದ ದಿನ, ಜಾಮೀನು ಅರ್ಜಿ ಕರ್ನಾಟಕ ಹೈಕೋರ್ಟಿನಲ್ಲಿ ಎರಡು ಬಾರಿ ವಿಚಾರಣೆಗೆ ಬಂದ ದಿನ ಮತ್ತು ಅ.7ರಂದು ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಚಂದ್ರಶೇಖರ್ ಅವರು ತಿರಸ್ಕರಿಸಿದ ಸಂದರ್ಭದಲ್ಲಿ, ಆಗಬಾರದ್ದು ಆಗಿಹೋಯಿತು ಎಂಬಂತೆ ವರ್ತಿಸುತ್ತಿದ್ದ ಅಶಿಕ್ಷಿತ, ಶಿಕ್ಷಿತ ಅಭಿಮಾನಿಗಳನ್ನು ನಿಯಂತ್ರಿಸುವುದು ಪೊಲೀಸರಿಗೆ ನಿಜವಾಗಲೂ ಸವಾಲಿನದಾಗಿತ್ತು.
ತಮಿಳುನಾಡಿನಲ್ಲಿ ನಡೆದ ಅಕ್ರಮ ಆಸ್ತಿ ಗಳಿಕೆಯ ಪ್ರಕರಣಕ್ಕೆ ಕರ್ನಾಟಕ ಏಕಿಷ್ಟು ಬಡಿದಾಡಬೇಕು, ಏಕಿಷ್ಟು ಪೊಲೀಸ್ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು, ಏಕಿಷ್ಟು ಹಣ ಖರ್ಚು ಮಾಡಬೇಕು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಏಕಿಷ್ಟು ಆದರಾತಿಥ್ಯ ನೀಡಬೇಕು ಎಂಬಿತ್ಯಾದಿ ಪ್ರಶ್ನೆಗಳೂ ಎದ್ದಿದ್ದವು. [ಜಯಾ ಆಸ್ತಿ ಗಳಿಕೆ ಟೈಮ್ ಲೈನ್]

ಜೈಲು ಶಿಕ್ಷೆಯಾದ ದಿನದಿಂದ ಸಾವಿರಾರು ಅಮ್ಮನ ಅಭಿಮಾನಿಗಳು ತಮಿಳುನಾಡಿನಿಂದ ಗುಳಿಯೆದ್ದು ಬೆಂಗಳೂರಿಗೆ ವಕ್ಕರಿಸಿದ್ದರು. ಜೈಲಿನಿಂದ ಜಯಲಲಿತಾ ಬಿಡುಗಡೆಯಾಗುವವರೆಗೆ ಮರಳುವುದಿಲ್ಲ ಎಂದು ಜೈಲು ಸುತ್ತಮುತ್ತ, ಕಂಡಕಂಡ ಪಾರ್ಕುಗಳಲ್ಲಿ ಠಿಕಾಣಿ ಹೂಡಿದ್ದರು.
ಎಚ್ಎಎಲ್ ಏರ್ಪೋರ್ಟಿನಿಂದ ಪರಪ್ಪನ ಅಗ್ರಹಾರಕ್ಕೆ ಬರುವಾಗ, ಅಲ್ಲಿಂದ ಹೋಗುವಾಗ, ಪರಪ್ಪನ ಅಗ್ರಹಾರ ಸುತ್ತಮುತ್ತ ನಿಷೇಧಾಜ್ಞೆ ಹೇರಿದಾಗ, ಜಯಮ್ಮನ ಅಭಿಮಾನಿಗಳು ಮೆರವಣಿಗೆ ಮಾಡಿದಾಗ ಟ್ರಾಫಿಕ್ ಪೊಲೀಸರು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ನಾಗರಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಬೆಂಗಳೂರಿನ ಹಲವಾರು ಸಾಫ್ಟ್ ವೇರ್ ಮತ್ತಿತರ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ತಮಿಳುನಾಡಿನ ಉದ್ಯೋಗಿಗಳು ಕೂಡ ಜಯಲಲಿತಾ ಜೈಲು ಸೇರಿದ್ದರಿಂದ ತಳಮಳಗೊಂಡಿದ್ದ ವರದಿ ಕೂಡ ಬಂದಿತ್ತು. ಬೇಲು ಸಿಗದಿದ್ದಾಗ ಮಿಡುಕಾಡಿ, ಜಾಮೀನು ಸಿಕ್ಕಾಗ ಜಾಮೂನು ತಿಂದವರು ಹಲವರಿದ್ದಾರೆ.

ಇದನ್ನೆಲ್ಲ ಮನಗಂಡ ರಾಜ್ಯ ಸರಕಾರ, ಜಯಲಲಿತಾರನ್ನು ಚೆನ್ನೈ ಜೈಲಿಗೆ ಸ್ಥಳಾಂತರಿಸುವ ಕುರಿತು ಕೂಡ ಚಿಂತನೆ ನಡೆಸಿತ್ತು. ಆದರೆ, ನ್ಯಾಯಾಲಯದ ಆದೇಶಕ್ಕೆ ತಲೆಬಾಗಬೇಕಿರುವುದರಿಂದ ಮತ್ತು ಜಾಮೀನು ವಿಚಾರಣೆ ಬೆಂಗಳೂರಿನಲ್ಲಿಯೇ ನಡೆಯಬೇಕಿದ್ದರಿಂದ ಯಾವುದೇ ಕ್ರಮ ಕೈಗೊಳ್ಳುವಂತಿರಲಿಲ್ಲ.
ಸದ್ಯಕ್ಕೆ, ಡಿಸೆಂಬರ್ 18ರವರೆಗೆ ಮೇಲ್ವಿಚಾರಣೆಗೆ ಕಾಗದಪತ್ರಗಳನ್ನು ಸಿದ್ಧಪಡಿಸಿಕೊಳ್ಳಲು ಸರ್ವೋಚ್ಚ ನ್ಯಾಯಾಲಯ ಜಯಲಲಿತಾ ಅವರ ವಕೀಲರಿಗೆ ಕಾಲಾವಕಾಶ ನೀಡಿದೆ. ನಂತರ ಮತ್ತೆ ಕರ್ನಾಟಕ ಹೈಕೋರ್ಟಿನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ. ಅಲ್ಲಿಯತನಕ, ಕರ್ನಾಟಕದ ಪೊಲೀಸರು ನಿರಾಳ ಭಾವ ಅನುಭವಿಸಲಿ.
ದೀಪಾವಳಿ ಹಬ್ಬದ ಸಂದರ್ಭವಿರುವುದರಿಂದ ಕರ್ನಾಟಕದಲ್ಲಿರುವ ಜಯಲಲಿತಾ ಕಟ್ಟಾ ಅಭಿಮಾನಿಗಳು ಬೇಕಿದ್ದರೆ ಕೆಲಸ ಕಾರ್ಯಗಳಿಗೆ ಒಂದಿಷ್ಟು ದಿನ ರಜಾ ಹಾಕಿ, ಚೆನ್ನೈ ರೈಲನ್ನು ಹತ್ತಿ ಅಲ್ಲಿಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಬರಲಿ.












Click it and Unblock the Notifications