Jagadish Shettar: ಜಗದೀಶ್ ಶೆಟ್ಟರ್ ಫೇಸ್‌ಬುಕ್ ಖಾತೆ ಹ್ಯಾಕ್.!, ಕಿಡಿಗೇಡಿಗಳು ರವಾನಿಸಿರುವ ಸಂದೇಶ ಏನು?
ಹುಬ್ಬಳ್ಳಿ, ಫೆಬ್ರವರಿ, 27: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಫೇಸ್ ಬುಕ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಹಾಗಾದರೆ ಕಿಡಿಗೇಡಿಗಳು ಏನೆಲ್ಲ ಸಂದೇಶ ರವಾನೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜಗದೀಶ್ ಶೆಟ್ಟರ್ ಅವರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಹಣಕಾಸು ವ್ಯವಹಾರದ ಸಂದೇಶ ರವಾನೆ ಮಾಡಿದ್ದಾರೆ. "ಖಾತೆಗೆ 7,50,000 ಲಕ್ಷ ಹಣ ಬಂದಿದ್ದು, ನಾನು ಮಾಡಿದ ವ್ಯವಹಾರದಲ್ಲಿ ಆರಂಭದಲ್ಲಿಯೇ ಲಾಭ ಬಂದಿದೆ. ನೀವು ಸಹ ವ್ಯವಹಾರ ನಡೆಸಿ ಲಾಭ ಮಾಡಿಕೊಳ್ಳಿ," ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನು ಕ್ರಿಸ್ಟಿನಾ ಪನಾಟೆ ಎಂಬುವವರ ಸಲಹೆಯನ್ನೂ ಪಡೆಯಬಹುದು ಎಂದು ಬರೆಯಲಾಗಿದೆ. ಎಫ್‌ಬಿ ಖಾತೆ ಹ್ಯಾಕ್ ಆಗಿರುವ ಬಗ್ಗೆ ಪುತ್ರ ಸಂಕಲ್ಪ ಶೆಟ್ಟರ್ ಮಾಹಿತಿ ನೀಡಿದ್ದು, ಇದನ್ನು ನೋಡಿ ಯಾರೂ ಹಣ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ನನ್ನ ಅಳಿಯಂದಿರಿಬ್ಬರೂ ಟಿಕೆಟ್ ಆಕಾಂಕ್ಷಿಗಳು: ನನ್ನ ಅಳಿಯಂದಿರು ಇಬ್ಬರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳು, ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರುವಂತೆ ಹೇಳಿದ್ದೇನೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ಸೋಮವಾರ (ಫೆಬ್ರವರಿ 26) ಮಧ್ಯಾಹ್ನ ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಇಬ್ಬರು ಅಳಿಯಂದಿರು ಹೊಂದಾಣಿಕೆಯಿಂದ ಇದ್ದಾರೆ. ಕೇಂದ್ರ ಚುನಾವಣಾ ಸಮಿತಿ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ಬದ್ಧವಾಗಿರುವಂತೆಯೂ ಹೇಳಿದ್ದೇನೆ. ನನ್ನ ಅಭಿಪ್ರಾಯವನ್ನು ನಾನು ವರಿಷ್ಠರಿಗೆ ಹೇಳಲಿದ್ದು, ಬಹಿರಂಗವಾಗಿ ಹೇಳುವುದಿಲ್ಲ ಎಂದರು.
ಸುದೀರ್ಘ ಕಾಲ ರಾಜಕಾರಣದಲ್ಲಿದ್ದು, ಮಾರ್ಚ್ 17ಕ್ಕೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಅಂದು ಮೈಸೂರಿನ ಕರಾಮುವಿ ಘಟಿಕೋತ್ಸವ ಸಭಾಂಗಣದಲ್ಲಿ ಸ್ವಾಭಿಮಾನಿ ನೆನಪುಗಳು ಎಂಬ ಪುಸ್ತಕ ಹೊರತರಲಿದ್ದು, ನನ್ನ ರಾಜಕೀಯ ಜೀವನವನ್ನು ಬರೆದಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಲಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ನನ್ನ ಕೊನೆಯ ಅವಧಿಯ ಸಂಸತ್ ದಿನಗಳು ತೃಪ್ತಿಕರವಾಗಿದೆ. ನಾನು ಸಂಸತ್ತಿನಲ್ಲಿ ಹೆಚ್ಚು ಕ್ರೀಯಾಶೀಲನಾಗಿ ಭಾಗಿಯಾಗದಿದ್ದರೂ ಸಂಸದನಾಗಿ ಮಾಡಬೇಕಾದ ಕೆಲಸವನ್ನು ಮಾಡಿದ್ದೇನೆ. ಸೋಮಾರಿಯಾಗಿ ಕುಳಿತಿರಲಿಲ್ಲ, 17.5 ಕೋಟಿ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಬಳಸಿದ್ದೇನೆ, ಸಾವಿರಾರು ಮಂದಿಯ ಕಷ್ಟ ಸುಖಗಳಿಗಳಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದರು.












Click it and Unblock the Notifications