ಜಗದೀಶ್ ಶೆಟ್ಟರ್ ಕೊರಳಿಗೆ ಸುತ್ತಿಕೊಂಡ ಭೂ ಹಗರಣ

ಬೆಂಗಳೂರು, ಜು. 30 : ಅರ್ಕಾವತಿ ಬಡಾವಣೆ ಭೂ ವಿವಾದದ ಜಟಾಪಟಿ ಮುಂದುವರೆದಿರುವಂತೆಯೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಭೂ ಹಗರಣದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಶ್ರೀಗಂಧ ಕಾವಲ್ ನಲ್ಲಿನ ನಾಲ್ಕು ಎಕರೆ ಭೂಮಿಯನ್ನು ಶೆಟ್ಟರ್ ಸಿಎಂ ಆಗಿದ್ದಾಗ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ನಾಗರಾಜ್ ಆರೋಪಿಸಿದ್ದಾರೆ.

ಮಂಗಳವಾರ ನಗರದ ಒಕ್ಕಲಿಗರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರೊ.ನಾಗರಾಜ್ ಅವರು, 25 ವರ್ಷಗಳ ಹಿಂದೆಯೇ ನಿಧನರಾಗಿರುವ ಸ್ವಾತಂತ್ರ್ಯ ಹೋರಾಟಗಾರ ಸೂರ್ಯ ನಾರಾಯಣರಾವ್ ಅವರ ಪುತ್ರ ಎಸ್.ಸುಂದರೇಶ್ ಎಂಬುವವರಿಗೆ ಸಂಘದ ಸ್ವಾಧೀನದಲ್ಲಿರುವ 4 ಎಕರೆ ಜಮೀನನ್ನು ನೀಡಲಾಗಿದೆ. ಇದರ ಹಿಂದೆ ಭೂ ಮಾಫಿಯಾ ಕೈವಾಡವಿದೆ ಎಂದರು.

Jagadish Shettar

ರಾಜ್ಯ ವಿಧಾನಸಭೆ ಚುನಾವಣೆಗೆ 13 ದಿನ ಬಾಕಿ ಇರುವಾಗ 80 ಕೋಟಿ ರೂ. ಮೌಲ್ಯದ ಜಮೀನನ್ನು ಕೇವಲ 6 ಕೋಟಿ ರೂ.ಗಳಿಗೆ ಮುಖ್ಯಮಂತ್ರಿಗಳು ಮಂಜೂರು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪ್ರೊ.ನಾಗರಾಜ್ ಒತ್ತಾಯಿಸಿದ್ದಾರೆ.

ಈ ಭೂಮಿಯನ್ನು ಮಂಜೂರು ಮಾಡುವಾಗ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಭೂ ಮಂಜೂರಾತಿ ಕಾಯ್ದೆ ಪ್ರಕಾರ ನಗರ ಜಿಲ್ಲೆಯಿಂದ 16 ಕಿ.ಮೀ. ವ್ಯಾಪ್ತಿಯಲ್ಲಿರುವ ಯಾವುದೇ ಜಮೀನನ್ನೂ ಕೃಷಿಗೆ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ, ಶೆಟ್ಟರ್, ಭೂಪರಿವರ್ತಿತ ಭೂಮಿಯನ್ನು 2013ರ ಏ.22ರಂದು ಸುಂದರೇಶ್ ಅವರಿಗೆ ಕೃಷಿ ಉದ್ದೇಶಕ್ಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಒತ್ತಡಕ್ಕೆ ಮಣಿದಿದ್ದಾರೆ : ರಿಷಿಕೇಷ್ ಮತ್ತು ಆಕಾಶ್ ಅಸೋಸಿಯೇಟ್ಸ್ ಅವರಿಂದ ಈ ಜಮೀನಿನ ಮೌಲ್ಯ ನಿಗದಿಪಡಿಸಲು ಸರ್ಕಾರ ಸೂಚಿಸಿತ್ತು. ಅದರಂತೆ ಚದರ ಅಡಿಗೆ 1,490 ರೂ.ನಂತೆ ಪ್ರತಿ ಎಕರೆಗೆ 6.49 ಕೋಟಿ ರೂ. ನಿಗದಿಪಡಿಸಲಾಯಿತು. ಬಳಿಕ ಸಬ್ಸಿಡಿ ದರದಲ್ಲಿ ಎಕರೆಗೆ 1.50 ಕೋಟಿ ರೂ.ಗಳಂತೆ ನಾಲ್ಕು ಎಕರೆಗೆ 6 ಕೋಟಿ ರೂ. ಪಡೆದು ಜಮೀನು ನೀಡಲಾಗಿದೆ.

ಈ ಭೂಮಿಗೆ ಪಡೆದ ಸುಂದರೇಶ್ ಬದಲು ಹೂಡಿಕೆದಾರರಾದ ರುಡೋಲ್ಫ್ ಮಸ್ಕರೇನ್ಹಸ್ ಎಂಬುವವರು ಸರ್ಕಾರಕ್ಕೆ ಹಣ ಪಾವತಿ ಮಾಡಿದ್ದಾರೆ. ಮಂಗಳೂರಿನ ಕಾಫಿ ಪ್ಲಾಂಟರ್, ಕೆಲವು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸಿಎಂ ಆಗಿದ್ದ ಶೆಟ್ಟರ್ ಅವರು ಜಮೀನು ಮಂಜೂರು ಮಾಡಿ ಅಕ್ರಮವೆಸಗಿದ್ದಾರೆ ಎಂದು ಪ್ರೊ.ನಾಗರಾಜ್ ದೂರಿದರು.

ಒಕ್ಕಲಿಗರ ಸಂಘದ ಭೂಮಿ : ಒಕ್ಕಲಿಗರ ಸಂಘದ ನಿರ್ದೇಶಕ ಎ. ಪ್ರಸಾದ್ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘ ಮತ್ತು ಗೋಲ್ಡನ್ ವ್ಯಾಲಿ ಎಜುಕೇಷನ್ ಟ್ರಸ್ಟ್‌ ಗೆ ಶ್ರೀಗಂಧದ ಕಾವಲ್‌ ನಲ್ಲಿರುವ 47.11 ಎಕರೆ ಜಮೀನನ್ನು ಕೆಂಗಲ್ ಹನುಮಂತಯ್ಯ ಅವರು 1967ರಲ್ಲಿ ಮಂಜೂರು ಮಾಡಿದ್ದರು. ಸಂಘ ಮತ್ತು ಟ್ರಸ್ಟ್‌ಗೆ ತಲಾ 10 ಎಕರೆ ಮಂಜೂರು ಮಾಡಲಾಗಿತ್ತು. ಅಲ್ಲದೆ, 10 ಎಕರೆ ಸಂಘಕ್ಕೆ ಮತ್ತು 15 ಎಕರೆಯನ್ನು ಟ್ರಸ್ಟ್‌ಗೆ 30 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು.

ಸಂಘಕ್ಕೆ ಗುತ್ತಿಗೆಗೆ ನೀಡಿದ್ದ 10 ಎಕರೆಯನ್ನು ಸದಾನಂದಗೌಡರು ಸಿಎಂ ಆಗಿದ್ದಾಗ ನವೀಕರಿಸಿದರು. ಆದರೆ, ಮಂಜೂರು ಮಾಡಿದ ಉದ್ದೇಶಕ್ಕೆ ಗೋಲ್ಡನ್ ವ್ಯಾಲಿ ಟ್ರಸ್ಟ್ ಬಳಸುತ್ತಿಲ್ಲವೆಂಬ ಕಾರಣಕ್ಕೆ 15 ಎಕರೆಯ ಗುತ್ತಿಗೆ ನವೀಕರಣಕ್ಕೆ ಸರ್ಕಾರ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್, ಕರ್ನಾಟಕ ಮೇಲ್ಮನವಿ ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶವಿದೆ. ಆದರೆ, ಶೆಟ್ಟರ್ ಈ 15 ಎಕರೆ ಪೈಕಿ 4 ಎಕರೆಯನ್ನು ಸುಂದರೇಶ್ ಅವರಿಗೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.

ಶೆಟ್ಟರ್ ಹೇಳುವುದೇನು : ಈ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್ ಈ ಪತ್ರಿಕಾಗೋಷ್ಠಿಯನ್ನು ಕಾಂಗ್ರೆಸ್ ಆಯೋಜಿಸಿತ್ತು. ಅರ್ಕಾವತಿ ಭೂ ವಿವಾದದ ಬಗ್ಗೆ ನಡೆಯುತ್ತಿರುವ ಹೋರಾಟದ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಇಂತಹ ಆರೋಪ ಮಾಡಿಸುತ್ತಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+