ಬೆಂಗಳೂರು ಪ್ರವಾಹಕ್ಕೆ ಕಾರಣವಾದ ಐಟಿಬಿಟಿ ಕಂಪನಿ ವಿರುದ್ಧ 'ಅಭಿಯಾನ' ಮಾಡಿ: ಎನ್‌ಆರ್ ರಮೇಶ್
ಬೆಂಗಳೂರು ಸೆಪ್ಟಂಬರ್ 15: ಬೆಂಗಳೂರಿನ ಮಹದೇವಪುರ, ವೈಟ್‌ಫಿಲ್ಡ್, ಬೊಮ್ಮನಹಳ್ಳಿ ಭಾಗದಲ್ಲಿ ಮಳೆಯಿಂದಾಗಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದಕ್ಕೆ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿದಂತೆ ಐಟಿ ಬಿಟಿ ಕಂಪನಿಗಳು, ಎಕೋಸ್ಪೇಸ್ ಟೆಕ್‌ಪಾರ್ಕ್‌ಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದೆ ಪ್ರಮುಖ ಕಾರಣ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಹೇಳಿದ್ದಾರೆ.
ಬೆಂಗಳೂರಿಗೆ ಎದುರಾಗಿದ್ದ ಪ್ರವಾಹ ಸಂಕಷ್ಟ, ಅದಕ್ಕೆ ಕಾರಣವಾದ ಐಟಿ ಕಂಪನಿಗಳ ರಾಜಕಾಲುವೆ ಒತ್ತುವರಿ, ಬೆಂಗಳೂರು ಸೇವ್ ಅಭಿಯಾನ ಆರಂಭಿಸಿ ಬಿಜೆಪಿ ಆಡಳಿತ ವಿರುದ್ಧ ಟ್ವೀಟ್ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಎನ್.ಆರ್.ರಮೇಶ್ ತಿರುಗೇಟು ನೀಡಿದ್ದಾರೆ. ಐಟಿ ಕಂಪನಿಗಳು ನಿರ್ಮಾಣವಾದದ್ದು ಹೇಗೆ, ಅವುಗಳಿಂದಾದ ಭೂ ಒತ್ತುವರಿ ಬಗ್ಗೆ ಅಂಕಿ ಅಂಶ ನೀಡಿದ್ದಾರೆ. ಯಾರಿಂದ ರಾಜಧಾನಿಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂಬುದರ ಬಗ್ಗೆ ಬಹಿರಂಗವಾಗಿ ಚರ್ಚಿಸಲು ನಾನು ಸಿದ್ಧ ಎಂದಿದ್ದಾರೆ.
ನಾಡಪ್ರಭು ಕೆಂಪೇಗೌಡರು ವೈಜ್ಞಾನಿಕವಾಗಿ ಸಮುದ್ರಮಟ್ಟದಿಂದ ಎತ್ತರದ ಪ್ರದೇಶದಲ್ಲಿ, ಸುವ್ಯವಸ್ಥಿತವಾಗಿ ಬೆಂಗಳೂರನ್ನು ಕಟ್ಟಿದ್ದಾರೆ. ಇದರ ಸುರಕ್ಷಿತೆ ಕಂಡೇ ಬೆಂಗಳೂರಿಗೆ ಐಟಿ ಕಂಪನಿಗಳು ಆಗಮಿಸಿವೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 3,758 ಐಟಿ ಕಂಪನಿಗಳು 92 ಬಿಟಿ ಕಂಪನಿ ಮತ್ತು 79 ಟೆಕ್ ಪಾರ್ಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳ ನಿರ್ಮಾಣಕ್ಕೆಂದು 1999 ರಿಂದ 2005ರ ಸಂದರ್ಭದಲ್ಲಿ ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ನೀಡಿದೆ. ಆ ಭೂಮಿ ಒಟ್ಟು ಮೌಲ್ಯ ಸುಮಾರು 2.5ಲಕ್ಷ ಕೋಟಿ ಎನ್ನಲಾಗಿದೆ.
ಅಂದು ಸರ್ಕಾರ ಐಟಿ ಬಿಟಿ ಎಲ್ಲ ಕಂಪನಿಗಳಿಗೆ ಓಎಫ್ ಡಕ್ಟ್ ಹಾಕಿಕೊಳ್ಳಲು ರಸ್ತೆ ಶುಲ್ಕವಿಲ್ಲದೇ ಉಚಿತವಾಗಿ 4,500 ಕಿ.ಮೀ. ರಸ್ತೆ ಅಗೆಯಲು ಅನುಮತಿ ನೀಡಿತ್ತು. ನಂತರ ಸರ್ಕಾರ ತನ್ನ ಬೊಕ್ಕಸದಿಂದ 3,000 ಕೋಟಿ ರೂ.ವೆಚ್ಚದಲ್ಲಿ ಅಗೆದ ರಸ್ತೆಗಳನ್ನು ಪುನಶ್ಚೇತನಗೊಳಿಸಿತ್ತು.

ಅವ್ಯವಸ್ಥೆಗೆ ಬಿಜೆಪಿ, ಪಾಲಿಕೆ ದೂರುವುದು ಸರಿಯಲ್ಲ
ಇಷ್ಟೆಲ್ಲ ಅನುಕೂಲ ಮಾಡಿಕೊಟ್ಟಿದ್ದ ಕಾಂಗ್ರೆಸ್‌ಗೆ ತಾವು ಪ್ರತಿನಿಧಿಸುವ ಐಟಿಬಿಟಿ ಕಂಪನಿಗಳು, ಟೆಕ್‌ಪಾರ್ಕ್‌ಗಳಿಂದಲೇ ಬೆಂಗಳೂರು ಮಳೆ ಪ್ರವಾಹಕ್ಕೆ ಕಾರಣ ಎಂದು ಗೊತ್ತಿದೆ. ಆದರೂ ಅದೆಲ್ಲವನ್ನು ಮರೆಮಾಚಿ ಬಿಜೆಪಿಯನ್ನು ದೂರುವುದು ಎಷ್ಟು ಸರಿ ಎಂದು ಎನ್.ಆರ್.ರಮೇಶ್ ಪ್ರಶ್ನಿಸಿದ್ದಾರೆ. ಅಲ್ಲದೇ ವೈಜ್ಞಾನಿಕವಾಗಿ ನಿರ್ಮಾಣವಾದ ಬೆಂಗಳೂರಿಗೆ ಮೋಹನ್ ದಾಸ್ ಪೈ ಅವರು ಕಪ್ಪು ಚುಕ್ಕೆ ತರಲು ಹೊರಟಿದ್ದಾರೆ. ಹೀಗಾಗಿಯೇ ಅವರಿಗೆ ದಾಖಲೆ, ಅಂಕಿ ಅಂಶಗಳ ಮೂಲಕ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಎಲೆಕ್ಟ್ರಾನಿಕ್ಸ್ ಇಟಿ, ಐಟಿಪಿಎಲ್, ಹೊರ ವರ್ತುಲ ರಸ್ತೆ ಪ್ರದೇಶಗಳ ವ್ಯಾಪ್ತಿಯಲ್ಲಿ ರಾಜಕಾಲುವೆ, ಕೆರೆಗಳನ್ನು ಒತ್ತುವರಿ ಮಾಡಿಕೊಂಡೇ ಐಟಿ, ಟೆಕ್‌ಪಾರ್ಕ್, ಐಟಿ ಕಂಪನಿ ನಿರ್ಮಿಸಲಾಗಿದೆ. 90 ಲಕ್ಷಕ್ಕೂ ಹೆಚ್ಚು ಚದರ ಮೀಟರ್ ವ್ಯಾಪ್ತಿ ಒಳಗೊಂಡ ಒಟ್ಟು 79 ಟೆಕ್ ಪಾರ್ಕ್‌ಗಳಿಂದ ಸುಮಾರು ಆರು ಲಕ್ಷ ಚದರ ಅಡಿ ರಾಜಕಾಲುವೆ ಪ್ರದೇಶ ಒತ್ತುವರಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ನಗರದಲ್ಲಿನ ಪ್ರವಾಹಕ್ಕೆ ಐಟಿ ಕಂಪನಿಗಳು ಒತ್ತುವರಿ ಕಾರಣ
ಐಟಿಪಿಎಲ್ ಸೇರಿದಂತೆ ಮಹದೇವಪುರ ವ್ಯಾಪ್ತಿಯಲ್ಲಿನ ಮಳೆ ಹಾನಿ, ಪ್ರವಾಹದ ಸಮಸ್ಯೆಗೆ ಐಟಿಬಿಟಿ ಕಂಪನಿಗಳ ರಾಜಕಾಲುವೆ ಒತ್ತುವರಿ ಇಲ್ಲವೇ ರಾಜಕಾಲುವೆ ಅಗಲ ಕಡಿಮೆ ಗೊಳಿಸಿರುವುದೇ ಪ್ರಮುಖ ಕಾರಣವಾಗಿದೆ. ಅಲ್ಲಿನ ಗಿಡ್ಡನ ಕೆರೆ ಮತ್ತು ಕುಂದಲಹಳ್ಳಿ ಕೆರೆಯ ಒತ್ತುವರಿ ಮಾಡಲಾಗಿದೆ. ಆ ಎರಡು ಕೆರೆಗಳ ಮಧ್ಯ ಸಂಪರ್ಕ ಕಲ್ಪಿಸುವ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಲ್ಲ ಕಂಪನಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿವೆ ಎಂದರು.

ಸರ್ಕಾರಕ್ಕೆ ಬ್ಲಾಕ್‌ಮೇಲ್ ಮಾಡುವುದನ್ನು ಬಿಡಬೇಕು
ಈ ಭಾಗದಲ್ಲಿ ರಾಜಕಾಲುವೆ 40 ಅಡಿ ಅಗಲವಿರುವ ಬೃಹತ್ ನೀರುಗಾಲುವೆಗಳನ್ನು 12 ರಿಂದ 15 ಅಡಿಗೆ ಇಳಿಕೆ ಮಾಡಲಾಗಿದೆ. ಅಂದರೆ ಸುಮಾರು 40 ಅಡಿ ಜಾಗದಲ್ಲಿ ಹರಿದುಕೊಂಡು ಬರುವ ಮಳೆ ನೀರು ಕೇವಲ 12 ರಿಂದ 15 ಅಡಿಯಲ್ಲಿ ಬರಲು ಸಾಧ್ಯವಾಗದೇ ಪ್ರವಾಹ ಉಂಟಾಗುತ್ತಿದೆ. ಈ ಪ್ರದೇಶಗಳಲ್ಲಿ ಶೇ.50ರಷ್ಟು ಪ್ರವಾಹ ಪರಿಸ್ಥಿತಿಗೆ ಇಲ್ಲಿನ ಐಟಿ ಬಿಟಿ ಕಂಪನಿಗಳೇ ಕಾರಣವಾಗಿವೆ. ಇದನ್ನು ಮನಗಂಡು ಸರ್ಕಾರಕ್ಕೆ ಬೆಂಗಳೂರಿನ ಐಟಿ ಕಂಪನಿಗಳು ತೆಲಂಗಾಣಕ್ಕೆ ಹೋಗುತ್ತವೆ ಎಂದು ಬ್ಲಾಕ್‌ಮೇಲ್ ಮಾಡುವುದನ್ನು ಮೋಹದ್ ದಾಸ್ ಪೈ ಅವರು ಬಿಡಬೇಕು ಎಂದು ಗುಡುಗಿದರು.

ಬಹಿರಂಗಗೊಂಡ ಪ್ರವಾಹ ಸತ್ಯ ತಿಳಿದುಕೊಳ್ಳಿ
ಐಟಿ ಕಂಪನಿಗಳು ತೆಲಂಗಾಣಕ್ಕೆ ಹೋಗುತ್ತವೆ ಎಂದಿದ್ದಾರೆ. 2020ರಲ್ಲಿ ತೆಲಂಗಾಣದಲ್ಲಿ 90ಮಿ.ಮೀ. ಮಳೆಗೆ ಹೈದರಾಬಾದ್ ನಲ್ಲಿ 5,200ಕೋಟಿ ರು ಆಸ್ತಿ ಪಾಸ್ತಿ ನಷ್ಟವಾಗಿದ್ದು ಎಲ್ಲರಿಗೂ ಗೊತ್ತಿದೆ. ಅದೇ ಬೆಂಗಳೂರಿನಲ್ಲಿ ಐದು ದಶಕದಲ್ಲೇ ಅತ್ಯಧಿಕ 889ಮಿ.ಮೀ. ಭಾರಿ ಮಳೆ ಆಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅದಕ್ಕೆ ನಿಮ್ಮ ಐಟಿ ಬಿಟಿ ಕಂಪನಿಗಳು, ಟೆಕ್‌ಪಾರ್ಕ್‌ಗಳು ಕಾರಣ ಎಂಬ ಸತ್ಯ ಬಹಿರಂಗಗೊಳಿಸಿದ್ದೇನೆ. ಆಕ್ಷೇಪಣೆ ಇದ್ದಲ್ಲಿ ಬಹಿರಂಗ ಚರ್ಚೆಗೆ ಬರಬಹುದು. ಆದರೆ ಜಾಗತಿಕ ಮಟ್ಟದಲ್ಲಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿಗೆ ಕೆಟ್ಟ ಹೆಸರು ತರಬೇಡಿ. ಬೇಕಿದ್ದರೆ ನಕ್ಸಲ ಪೀಡಿತ ಪ್ರದೇಶಗಳಿಗೆ ಬೆಂಗಳೂರು ಬಿಟ್ಟು ಹೋಗಬಹುದು ಎಂದು ತಿಳಿಸಿದರು.

ಐಟಿ ಕಂಪನಿಗಳಿಗೆ ತೆರಿಗೆ ವಂಚನೆ
ಒಂದು ಬೆಂಗಳೂರಿನಲ್ಲಿ ಐಟಿ ಕಂಪನಿಗಳಿಗೆ ನೀಡಿರುವ ಸೌಲಭ್ಯ ಬಗ್ಗೆ ನೆನಪಿಸಿಕೊಳ್ಳಲಿ. ಪ್ರತಿ ವರ್ಷ ನೂರಾರು ಕೊಟಿ ಆಸ್ತಿ ತೆರಿಗೆಯನ್ನು ಪಾಲಿಕೆಗೆ ತಪ್ಪು ಲೆಕ್ಕ ತೋರಿಸಿ ಐಟಿ ಕಂಪನಿಗಳು ವಂಚಿಸುತ್ತವೆ. ಇಲ್ಲಿನ ಐಟಿ ಬಿಟಿ ಕಂಪನಿಗಳು ಮತ್ತು ಟೆಕ್‌ಪಾರ್ಕ್‌ಗಳು ಸೇರಿ ಎಲ್ಲವು ವಾರ್ಷಿಕವಾಗಿ 2.5ಲಕ್ಷ ಕೋಟಿಗೂ ಹೆಚ್ಚು ಆದಾಯ ತೋರಿಸುತ್ತಾರೆ. ಅದನ್ನು ವೆಬ್‌ಸೈಟ್‌ಗಳಲ್ಲಿ ಹಾಕಲಾಗಿದೆ.
ಆದರೆ ಆ ಆದಾಯದಲ್ಲಿ ನೀವು ಸಿಎಸ್‌ಆರ್ ಅಡಿ 2.500 ಕೋಟಿ ಹಣ ಸಾರ್ವಜನಿಕ ಕಾಮಗಾರಿಗಳಿಗೆ ಬಳಸಬೇಕು. ಅದನ್ನು ಬಿಟ್ಟು ಕೇವಲ 5ರಿಂದ 10 ಕೋಟಿ ಬಳಸಿ, ಸಾವಿರಾರು ಕೋಟಿ ಬಳಸದೇ ಬೆಂಗಳೂರು ಜನರಿಗ ವಂಚನೆ ಮಾಡುತ್ತಿದ್ದೀರಿ. ಇದೆಲ್ಲವನ್ನು ಮೋಹನ್ ದಾಸ್ ಪೈ ಅವರು ಅರಿತುಕೊಳ್ಳಬೇಕು. ಅವರು ಆರಂಭಿಸಿರುವ 'ಸೇವ್ ಬೆಂಗಳೂರು ಅಭಿಯಾನ' ವನ್ನು ಐಟಿ ಕಂಪನಿಗಳ ವಿರುದ್ಧ ಆರಂಭಿಸಬೇಕೆ ಹೊರತು ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಆಡಳಿತದ ವಿರುದ್ಧವಲ್ಲ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications