Hebbal Junction: ಹೊಸ 2ಕಿಲೋ ಮೀಟರ್ ಸುರಂಗ ರಸ್ತೆ ಯೋಜನೆ ಸಾಧ್ಯವೇ? ಡಿಸಿಎಂ ಪ್ಲಾನ್...
ಬೆಂಗಳೂರು, ಆಗಸ್ಟ್ 07: ರಾಜಧಾನಿ ಬೆಂಗಳೂರು ಸಂಚಾರ ದಟ್ಟಣೆಗೆ ಹೆಸರು ವಾಸಿಯಾಗಿದೆ. ಟ್ರಾಫಿಕ್ ಹೆಚ್ಚಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಹೆಬ್ಬಾಳ ಜಂಕ್ಷನ್ ಸಹ ಒಂದು. ಇದರ ನಿರ್ವಹಣೆ, ಅಭಿವೃದ್ಧಿ ಸೇರಿ ಅನೇಕ ಪ್ರಯೋಗ ಮಾಡಿದರೂ ಸಹಿತ ಈ ವೃತ್ತದಲ್ಲಿ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಈ ಮಧ್ಯೆ ಇಲ್ಲಿ ಎರಡು ಕಿಲೋ ಮೀಟರ್ ಉದ್ದದ ಹೊಸ ಸುರಂಗ ರಸ್ತೆ ಯೋಜನೆ ನಿರ್ಮಾಣ ಸಾಧ್ಯವೇ? ಎಂಬ ಪ್ರಶ್ನೆ ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಬೆನ್ನಲ್ಲೆ ಉದ್ಭವವಾಗಿದೆ.
ಹೆಚ್ಚಿನ ಸಂಚಾರ ದಟ್ಟಣೆ ಕಂಡು ಬರುವ ಹೆಬ್ಬಾಳ ಜಂಕ್ಷನ್‌ನಲ್ಲಿ ಹೊಸ ಸುರಂಗ ರಸ್ತೆ ನಿರ್ಮಿಸಲಾಗುವುದು. ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ಸಮಸ್ಯೆಗಳನ್ನು ಪರಿಹರಿಸಲು ಸುಮಾರು 2 ಕಿ.ಮೀ ಉದ್ದದ ಸುರಂಗ ರಸ್ತೆಯನ್ನು ನಿರ್ಮಾಣವನ್ನು ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಹೆಬ್ಬಾಳ ಜಂಕ್ಷನ್‌ನಿಂದ ಇಲ್ಲಿನ ಪಶುವೈದ್ಯಕೀಯ ಕಾಲೇಜಿನವರೆಗಿನ ಹೊಸ ಸುರಂಗ ರಸ್ತೆಯನ್ನು ಯೋಜನೆಗೆ ಪ್ಲಾನ್ ಮಾಡಲಾಗಿದೆ.

ಸದಾ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಕಂಡು ಬರುತ್ತದೆ. ಅದನ್ನು ಕಡಿಮೆ ಮಾಡಲು ಹಾಗೂ ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೇಖ್ರಿ ವೃತ್ತದ ನಡುವೆ ನೇರ ಹಾಗೂ ಸುಗಮ ಸಂಪರ್ಕವನ್ನು ಒದಗಿಸುವ ಗುರಿ ಇದೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಈ ಜಂಕ್ಷನ್ ವ್ಯಾಪ್ತಿಯಲ್ಲಿ ಹೊಸ ಸುರಂಗ ರಸ್ತೆ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸುರಂಗ ರಸ್ತೆ ಯೋಜನೆ ಪ್ಲಾನ್ ಹೀಗಿದೆ
ಈಗಾಗಲೇ ಉಪಮುಖ್ಯಮಂತ್ರಿ ತಿಳಿಸಿರುವಂತೆ ನಾಗವಾರ ಎಸ್ಟೀಮ್ ಮಾಲ್‌ನಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ಸುರಂಗ ರಸ್ತೆಸಹ ಪ್ರಸ್ತಾಪಿಸಿಸಲಾಗಿದೆ. ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (BSMILE) ನ ನಿರ್ದೇಶಕ (ತಾಂತ್ರಿಕ) ಬಿ.ಎಸ್. ಪ್ರಹ್ಲಾದ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ಖಾಲಿ ಜಾಗ ಇದ್ದು, ಅದನ್ನು ಉಪಯೋಗಿಸಕೊಂಡು ಸುರಂಗ ಜೋಡಣೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಇದರಿಂದ ಭೂಸ್ವಾಧೀನ ಕಿರಿಕಿರಿ ತಪ್ಪಲಿದೆ ಎಂದು ಯೊಜಿಸಲಾಗಿದೆ.
ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದ ಈ ಸುರಂಗ ರಸ್ತೆಗಳು ಬಹುನಿರೀಕ್ಷೆಯ ಹೆಬ್ಬಾಳ ಎಸ್ಟೀಮ್ ಮಾಲ್-ಸೆಂಟ್ರಲ್ ಸಿಲ್ಕ್ ಬೋರ್ಡ್ ಮಧ್ಯದ ಅವಳಿ-ಟ್ಯೂಬ್ ಸುರಂಗ ಕಾರಿಡಾರ್‌ಗಿಂತ ಭಿನ್ನವಾಗಿದೆ. ಒಂದಷ್ಟು ವಿರೋಧದ ನಡುವೆಯು ಈ ಬೃಹತ್ ಸುರಂಗ ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಉದ್ಯಾನ ನಗರದಲ್ಲಿ ದಟ್ಟಣೆ ತಗ್ಗಿಸಲು ಸರ್ಕಾರ 17,000 ಕೋಟಿ ರೂಪಾಯಿಗೂ ಹೆಚ್ಚಿನ ಹಣ ವ್ಯಯಿಸಲು ತಿರ್ಮಾನಿಸಿದೆ. ಈ ಜಾಗತಿಕ ಟೆಂಡರ್‌ನಲ್ಲಿ ಅದಾನಿ ಗ್ರೂಪ್, ಎಲ್ & ಟಿ ಕಂಪನಿ ಹಾಗೂ ಟಾಟಾ ಪ್ರಾಜೆಕ್ಟ್ಸ್ ಸೇರಿ ಅನೇಕ ಕಂಪನಿಗಳು ಪಾಲ್ಗೊಳ್ಳಲು ಆಸಕ್ತಿ ವಹಿಸಿವೆ.
ಈ ಮಧ್ಯೆ ಕೆ.ಆರ್.ಪುರಂನಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗೆ ಮತ್ತೊಂದು ಬೃಹತ್ ಸುರಂಗ ರಸ್ತೆ ಯೋಜನೆ ಪ್ರಸ್ತಾಪಿಸಿದೆ. ನಗರದಲ್ಲಿ ಹೀಗೆ ಬೃಹತ್ ಸುರಂಗ ರಸ್ತೆ ನಿರ್ಮಾಣ ಸರಿಯಲ್ಲ. ಅಂತರ್ಜಲಕ್ಕೆ, ನಗರದ ಅಡಿಪಾಯಕ್ಕೆ ಹೊಡೆತ ಬೀಳಲಿದೆ ಎಂದು ಕೆಲವು ತಜ್ಞರು ಎಚ್ಚರಿಸಿದ್ದಾರೆ. ವಿಪಕ್ಷ ನಾಯಕರು ವಿರೋಧಿಸಿದ್ದಾರೆ.












Click it and Unblock the Notifications