ಚಿನ್ನಸ್ವಾಮಿಯಲ್ಲಿ ಕೇವಲ ₹1,200 ಟಿಕೆಟ್ 19,000 ರೂಪಾಯಿಗೆ ಮಾರಾಟ, ಕ್ರೀಡಾಂಗಣದ ಕ್ಯಾಂಟೀನ್ ನೌಕರ ಅರೆಸ್ಟ್
IPL 2026 Ticket: ಬೆಂಗಳೂರಿನಲ್ಲಿ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆಯ ಸುದ್ದಿಯೊಂದಿದೆ. ಟಿಕೆಟ್‌ಗಳಿಗಾಗಿ ಪರದಾಡುವವರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡಿದ್ದ ಬೃಹತ್ ಬ್ಲಾಕ್ ಟಿಕೆಟ್ ದಂಧೆ ಪ್ರಕರಣವನ್ನು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಐಪಿಎಲ್ ಪಂದ್ಯಗಳ ಕ್ರೇಜ್ ಬಳಸಿಕೊಂಡು ಅಕ್ರಮವಾಗಿ ಹಣ ಗಳಿಸಲು ಹೊಂಚು ಹಾಕಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವಿಶೇಷ ಅಂದ್ರೆ, ಕ್ರೀಡಾಂಗಣದ ಒಳಗೆ ಕೆಲಸ ಮಾಡುತ್ತಿದ್ದ ನೌಕರನೇ ಈ ದಂಧೆಯ ಪ್ರಮುಖ ಕೊಂಡಿಯಾಗಿದ್ದ ಎಂಬುದು ಬಯಲಾಗಿದೆ.

ಶಾಕಿಂಗ್ ವಿಚಾರ ಬಹಿರಂಗ
ಚಿನ್ನಸ್ವಾಮಿ ಕ್ರೀಡಾಂಗಣದ ಒಳಗಿನ 'ಶ್ರೀ ಲಕ್ಷ್ಮಿ ಕ್ಯಾಂಟೀನ್'ನ ನೌಕರ ಪಿ.ಚಂದ್ರಶೇಖರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ಹಾಗೂ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ಪಂದ್ಯಗಳಿಗೆ ಸಂಬಂಧಿಸಿದ ಸುಮಾರು 181 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇವಲ ₹1,200 ರಷ್ಟಿರುವ ಟಿಕೆಟ್‌ಗಳನ್ನು ಇವರು ಬರೋಬ್ಬರಿ ₹15,000 ದಿಂದ ₹19,000 ವರೆಗೆ ಮಾರಾಟ ಮಾಡುತ್ತಿದ್ದರು. ಅಂದರೆ ಅಸಲಿ ಬೆಲೆಗಿಂತ ಸುಮಾರು 15 ಪಟ್ಟು ಹೆಚ್ಚಿನ ದರಕ್ಕೆ ಅಭಿಮಾನಿಗಳಿಗೆ ಟೋಪಿ ಹಾಕಲು ಸ್ಕೆಚ್ ಹಾಕಲಾಗಿತ್ತು ಎನ್ನುವ ಶಾಕಿಂಗ್ ವಿಚಾರ ತನಿಖೆ ವೇಳೆ ಬಯಲಾಗಿದೆ.
ಬ್ಲಾಕ್ ಟಿಕೆಟ್ ದಂಧೆ ಹಿಂದೆ ಹಲವರ ಕೈವಾಡದ ಶಂಕೆ
ಬಂಧಿತ ಚಂದ್ರಶೇಖರ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ನೀಡಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಎಂದು ಹೇಳಲಾದ ಗಣೇಶ್ ಹರಿಕೇಶ್ ಎಂಬುವವರು ತನಗೆ ಈ ಟಿಕೆಟ್‌ಗಳನ್ನು ನೀಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತೆ ಸೂಚಿಸಿದ್ದರು ಎಂದು ಆತ ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಈ ದಂಧೆಯ ಬೇರುಗಳು ಬಹಳ ಆಳವಾಗಿವೆ ಎಂಬುದು ಸಾಬೀತಾಗಿದೆ.
10 ಪ್ರಕರಣಗಳ ದಾಖಲು
ಕೇವಲ ವ್ಯಕ್ತಿಗಳಷ್ಟೇ ಅಲ್ಲದೆ, ಈ ಅಕ್ರಮ ಮಾರಾಟಕ್ಕೆ ಸಹಕರಿಸಿದ ಆರೋಪದ ಮೇಲೆ ಕೆಲವು ಖಾಸಗಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಐಪಿಎಲ್ ಟಿಕೆಟ್ ಬ್ಲಾಕ್ ಮಾರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನಲ್ಲಿ 10 ಪ್ರಕರಣಗಳು ದಾಖಲಾಗಿವೆ.
ಪೊಲೀಸರಿಂದ ಎಚ್ಚರಿಕೆ ಸೂಚನೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿಬಿ ಡಿಸಿಪಿ ಶ್ರೀಹರಿಬಾಬು ಅವರು, "ಅಕ್ರಮವಾಗಿ ಟಿಕೆಟ್ ಮಾರಾಟ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ಎಚ್ಚರಿಸಿದ್ದಾರೆ. ಅಲ್ಲದೆ, "ಅಭಿಮಾನಿಗಳು ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸಿ ಮೋಸ ಹೋಗಬೇಡಿ," ಎಂದು ಮನವಿ ಮಾಡಿದ್ದಾರೆ.












Click it and Unblock the Notifications