IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ
IPL Free Ticket Row: ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಶಾಸಕರಿಗೆ ತಲಾ ಐದು ಫ್ರೀ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡಿದ ಬೆನ್ನಲ್ಲೇ ಇದು ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋವನ್ನು ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರು ತೀವ್ರ ಟೀಕೆ ಮಾಡಿದ್ದಾರೆ.

ಈ ಚಿತ್ರ ಸಾವಿರಕ್ಕೂ ಹೆಚ್ಚು ಪದಗಳನ್ನು ಹೇಳುತ್ತದೆ ಎಂದು ಅವರು ವೆಂಕಟೇಶ್ ಪ್ರಸಾದ್ ಅವರು, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಫೋಟೋವನ್ನು ಹಂಚಿಕೊಂಡು ಹೇಳಿದ್ದಾರೆ. ಈ ಒಂದು ಚಿತ್ರ ಸಾವಿರ ಮಾತುಗಳನ್ನು ಹೇಳುತ್ತದೆ. ಇದು ನಮ್ಮ ರಾಜಕೀಯ ಸಂಸ್ಕೃತಿ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ತೋರಿಸುತ್ತದೆ. ಭಾರತಕ್ಕೆ ಹೆಮ್ಮೆ ತಂದ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಇಂದು ಒಬ್ಬ ಮುಖ್ಯಮಂತ್ರಿ ಮುಂದೆ ಕೈಮುಗಿದು ನಿಂತಿದ್ದಾರೆ ಏಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಭಾರತಕ್ಕೆ ಹೆಮ್ಮೆ ತಂದ ರಾಷ್ಟ್ರೀಯ ನಾಯಕ ವೆಂಕಟೇಶ್ ಪ್ರಸಾದ್, ಪಾಕಿಸ್ತಾನ ವಿರುದ್ಧದ ಅವರ ಅದ್ಭುತ ಆಟ ಇಂದಿಗೂ ನಮ್ಮ ನೆನಪಿನಲ್ಲಿ ಇದೆ, ಅಂಥವರು ಇಂದು ಒಬ್ಬ ಮುಖ್ಯಮಂತ್ರಿ ಮುಂದೆ ಕೈಮುಗಿದು ನಿಂತಿದ್ದಾರೆ. ಅವರು ತಪ್ಪು ಮಾಡಿಲ್ಲ. ತಮ್ಮ ಕೆಲಸವನ್ನು ಸರಿಯಾಗಿ ಮಾಡಿದದ್ದಕ್ಕೆ ಮಾತ್ರ ಈ ರೀತಿ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.
ರಾಜಕಾರಣಿಗಳ ಅಹಂಕಾರಕ್ಕೆ ಧಕ್ಕೆ ಆಗಬಹುದು ಎಂದು ಊಹಿಸದೇ ಇದ್ದದ್ದಕ್ಕೆ. ಉಚಿತ ಸೌಲಭ್ಯ, ವಿಶೇಷ ಸವಲತ್ತುಗಳಿಗೆ ತಲೆಬಾಗದೆ ಇದ್ದದ್ದಕ್ಕೆ. ಇದು ದುಃಖಕರ ಸಂಗತಿ. ದೇಶಕ್ಕೆ ಸೇವೆ ಮಾಡಿದವರು ತಲೆಬಾಗಬೇಕಾದರೆ, ಅಧಿಕಾರದಲ್ಲಿರುವವರು ಹೊಣೆಗಾರಿಕೆಗೆ ಬದಲು ವಿಶೇಷ ಹಕ್ಕು ಕೇಳುತ್ತಿದ್ದರೆ, ವ್ಯವಸ್ಥೆಯಲ್ಲಿ ಏನೋ ತಪ್ಪಾಗಿದೆ.ಇದು ಒಂದು ಘಟನೆ ಮಾತ್ರ ಅಲ್ಲ - ಇದು ದೊಡ್ಡ ಸಮಸ್ಯೆಯ ಲಕ್ಷಣ. ಅಧಿಕಾರವನ್ನು ಜವಾಬ್ದಾರಿಯಂತೆ ನೋಡದ ರಾಜಕೀಯ ಹೋಗಬೇಕು. ಅಹಂಕಾರಕ್ಕೆ ಮಣಿಯುವ ವ್ಯವಸ್ಥೆ ಬದಲಾಗಬೇಕು. ಹೊಸ ರಾಜಕೀಯ ಪೀಳಿಗೆ ಅಗತ್ಯವಾಗಿದೆ. ಅಲ್ಲದೆ ಈ ಪರಿಸ್ಥಿತಿಯಿಂದ ನಾವು ಕಳವಳಗೊಳ್ಳದಿದ್ದರೆ, ಇನ್ನೇನು ಕಳವಳಗೊಳಿಸಲು ಸಾಧ್ಯ. ಭಾರತ ಇನ್ನಷ್ಟು ಉತ್ತಮ ಸಮಾಜಕ್ಕೆ ಅರ್ಹವಾಗಿದೆ. ನಾನು ವೆಂಕಟೇಶ್ ಪ್ರಸಾದ್ ಅವರ ಜೊತೆ ಇದ್ದೇನೆ - ಲಕ್ಷಾಂತರ ಜನರೂ ಹಾಗೆಯೇ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications