ಮುಂದಿನ ಐದು ದಿನ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆ, ತೀವ್ರತೆ ಕಡಿಮೆ: ಹವಾಮಾನ ಇಲಾಖೆ
ಬೆಂಗಳೂರು, ಮೇ. 22: ಭಾನುವಾರದ ಭಾರೀ ಮಳೆಯ ನಂತರ, ಸೋಮವಾರ ಸಂಜೆಯಿಂದಲೇ ಬೆಂಗಳೂರು ನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಗಾಳಿ ಮತ್ತು ಆಲಿಕಲ್ಲು ಮಳೆ ಆರಂಭವಾಗಿದೆ. ಇದು ಇನ್ನು ಐದು ದಿನಗಳ ಕಾಲ ಮುಂದುವರೆಯುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ನಿರೀಕ್ಷೆಯಿದೆ, ಆದರೆ, ಈ ಅವಧಿಯಲ್ಲಿ ಅದರ ತೀವ್ರತೆಯಲ್ಲಿ ಕುಸಿತ ಕಾಣಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ ಸುತ್ತಮುತ್ತಲಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲೂ ಗುರುವಾರದವರೆಗೆ ಇದೇ ರೀತಿಯ ಹವಾಮಾನ ಕಂಡುಬರುವ ಸಾಧ್ಯತೆಯಿದೆ.

ಭಾನುವಾರ ಮಧ್ಯಾಹ್ನ 3 ರಿಂದ ಸಂಜೆ 6ರ ವರೆಗೆ ನಗರದಲ್ಲಿ ಸರಾಸರಿ 35 ಮಿ.ಮೀ ಮಳೆ ದಾಖಲಾಗಿದ್ದು, ಗುಟ್ಟಹಳ್ಳಿಯಲ್ಲಿ ಈ ಅವಧಿಯಲ್ಲಿ 66 ಮಿ.ಮೀ.ನಷ್ಟು ಭಾರಿ ಮಳೆಯಾಗಿದೆ. ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆ ದಾಖಲಾಗಿದ್ದು, ಕೊಟ್ಟಿಗೆಪಾಳ್ಯ (54 ಮಿಮೀ), ನಂದಿನಿ ಲೇಔಟ್ (48 ಮಿಮೀ), ಕೆಆರ್ ಪುರಂ (36.5 ಮಿಮೀ) ಮತ್ತು ವಿದ್ಯಾರಣ್ಯಪುರ (32.5 ಮಿಮೀ) ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.
ಹವಾಮಾನ ಇಲಾಖೆಯ ದೈನಂದಿನ ವರದಿಯ ಪ್ರಕಾರ, ಮೇ 21 (ಭಾನುವಾರ) ಬೆಳಗ್ಗೆ 8.30 ರಿಂದ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 34.4 ಮಿಮೀ, ಬೆಂಗಳೂರು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 32.2 ಮಿಮೀ ಮತ್ತು ಬೆಂಗಳೂರು ನಗರದಲ್ಲಿ 33.4 ಮಿಮೀ ಮಳೆ ದಾಖಲಾಗಿದೆ.

ಇನ್ನು, ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಐದು ದಿನಗಳು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ ಸಹ ಸೂಚಿಸುತ್ತದೆ. ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರದಿಯ ಪ್ರಕಾರ, ಈ ವರ್ಷ ಮಾರ್ಚ್ 1 ರಿಂದ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದೆ.
ಮಾರ್ಚ್ 1 ರಿಂದ ಮೇ 30 ರ ಅವಧಿಯಲ್ಲಿ ಸರಾಸರಿ 111 ಮಿಮೀಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಈಗಾಗಲೇ 142 ಮಿಮೀ ಮಳೆಯಾಗಿದೆ, ಇದು ವಾಡಿಕೆಗಿಂತ ಶೇಕಡಾ 28 ರಷ್ಟು ಹೆಚ್ಚಾಗಿದೆ. ದಕ್ಷಿಣ ಒಳನಾಡು ಕರ್ನಾಟಕ ಪ್ರದೇಶಕ್ಕೆ, ಈ ವರ್ಷ ಸರಾಸರಿ 107 ಮಿಮೀ ಮಳೆಯ ವಿರುದ್ಧ 129 ಮಿಮೀ ದಾಖಲಾಗಿದೆ, ಇದು ಶೇಕಡಾ 20 ರಷ್ಟು ಅಧಿಕವಾಗಿದೆ. ಈ ಅವಧಿಯಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳು ವಾಡಿಕೆಗಿಂತ ಹೆಚ್ಚಿನ ಮಳೆಯನ್ನು ಪಡೆದಿದ್ದರೆ, ಮಲೆನಾಡು ಪ್ರದೇಶ ಮತ್ತು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಇನ್ನು, ಸೋಮವಾರ ಸಂಜೆಯಿಂದ ನಗರದಲ್ಲಿ ಮಲೆ ಆರಂಭವಾಗಿದೆ. ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಕಾರ್ಪೊರೇಷನ್, ಗಿರಿನಗರ, ಶಾಂತಿನಗರ, ಕೋರಮಂಗಲ, ಜಯನಗರ, ಕತ್ರಿಗುಪ್ಪೆ, ಜೆಪಿ ನಗರ, ರಿಚ್ಮಂಡ್ ರಸ್ತೆ, ರಾಜಾಜಿ ನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ ಕ್ರಾಸ್ ಸೇರಿದಂತೆ ಹಲವು ಕಡೆಗಳಲ್ಲಿ ಧಾರಕಾರ ಮಳೆ ಸುರಿದಿದೆ.












Click it and Unblock the Notifications