ಸೂತಕದ ಛಾಯೆಯೊಂದಿಗೆ ನಮ್ಮ ಮೆಟ್ರೋ ಸಂಭ್ರಮ
ಬೆಂಗಳೂರು, ಜೂನ್ 16: ಬೆಂಗಳೂರಿಗೆ ಮೆಟ್ರೋ ರೈಲು ಬಂದು ಹಲವು ವರ್ಷಗಳು ಕಳೆದರೂ ಮೆಟ್ರೋ ಮಾರ್ಗದಲ್ಲಿನ ಸಂಚಾರ ದಟ್ಟಣೆ ಮಾತ್ರ ಯಥಾಸ್ಥಿತಿಯಲ್ಲಿದೆ.
ಆದರೆ, ಕಚೇರಿಗೆ ಹೋಗುವ ಹಲವಾರು ಮಂದಿ ಕಾರು, ಬೈಕುಗಳನ್ನು ಬಿಟ್ಟು ಮೆಟ್ರೋ ಏರುತ್ತಿರುವುದು ಶುಭಸೂಚನೆ. ಈಗ ಜೂನ್ 18ರಿಂದ ನಮ್ಮ ಮೆಟ್ರೋ ಮೊದಲ ಹಂತ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಇಲ್ಲಿ ತನಕ ಮೆಟ್ರೋ ಕಾಮಗಾರಿ ಹಂತದಲ್ಲಿ ಸಂಭವಿಸಿದ ದುರಂತಗಳತ್ತ ಒಂದು ನೋಟ ಇಲ್ಲಿದೆ.
ಇದೆಲ್ಲದರ ನಡುವೆ ಮೆಟ್ರೋ ಎರಡನೇ ಹಂತ ಇನ್ನೂ ಕುಂಟುತ್ತಾ ಸಾಗಿದೆ. ನಮ್ಮ ಮೆಟ್ರೋಗೆ ಮೊದಲ ಹಂತ ಮುಕ್ತಾಯವಾದ ಸಂಭ್ರಮದ ನಡುವೆ ಎದ್ದಿರುವ ಕೆಲವು ಪ್ರಶ್ನೆಗಳು ಇಲ್ಲಿವೆ ಓದಿ..
ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತಕ್ಕೆ(ಹಳದಿ ಹಾಗೂ ಕೆಂಪು ಮಾರ್ಗ) ಕರ್ನಾಟಕ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸುಮಾರು 72 ಕಿ.ಮೀ ಉದ್ದದ ಈ ಯೋಜನೆ 2020ಕ್ಕೆ ಪೂರ್ಣಗೊಳ್ಳಲಿದ್ದು, 27,000 ಕೋಟಿ ರೂ. ವೆಚ್ಚ ತಗುಲುವುದೆಂದು ಅಂದಾಜಿಸಲಾಗಿದೆ.

ಸಂಚಾರ ದಟ್ಟಣೆಗೆ ಪರಿಹಾರ
ಪ್ರಯಾಣ ದರ ದುಬಾರಿ, ಮೆಟ್ರೋ ನಿಲ್ದಾಣದ ಆಸು ಪಾಸು ದೊರೆಯುವ ವಸ್ತುಗಳ ಬೆಲೆ ಹೆಚ್ಚು, ಮೆಟ್ರೋ ಕಾಮಗಾರಿ ದುರಂತಗಳು, ಮೆಟ್ರೋ ನಿಲ್ದಾಣಕ್ಕೆ ಹೆಸರು, ಪರಿಸರ ನಾಶ ಇತ್ಯಾದಿ ಸಮಸ್ಯೆಗಳ ನಡುವೆ ಈಗಲೂ ಮೆಟ್ರೊ ರೈಲು ಸೇವೆಯು ರಸ್ತೆ ಸಂಚಾರ ದಟ್ಟಣೆಗೆ ಪರಿಹಾರಾತ್ಮಕವಾಗಲಿದೆ ಎಂದು ಬಿಎಂಆರ್ ಸಿಎಲ್ ಹೇಳುತ್ತಿದೆ.

ಮೆಟ್ರೋ ದುರಂತಗಳು-1
* ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ನಮಕ್ಕಲ್ ಮೂಲದ ನಟ್ಕಲ್ ಎಂಬ 18 ವರ್ಷದ ಯುವಕ ವಿದ್ಯುತ್ ಶಾಕ್ ಗೆ ಬಲಿ.
* ನವರಂಗ್ ಸಿನಿಮಾ ಮಂದಿರ ಜಂಕ್ಷನ್ ಜೆಸಿಬಿ ಹರಿದು 55 ವರ್ಷದ ಮಹಿಳೆ ಬಲಿ. ಕಾಂಕ್ರೀಟ್ ಮಿಕ್ಸರ್ ಹರಿದು ಪಶ್ಚಿಮ ಬಂಗಾಳದ 19 ವರ್ಷ ವಯಸ್ಸಿನ ವಿಕಾಸ್ ಮಂಡಲ್ ಸಾವು.
* ಜೂ.28, 2013ರಂದು ನಮ್ಮ ಮೆಟ್ರೋ ಕಾಮಗಾರಿಯ ಎರಡು ಪ್ರತ್ಯೇಕ ಪ್ರಕರಣದಲ್ಲಿ, ಒಬ್ಬ ಕಾರ್ಮಿಕ ಮೃತಪಟ್ಟು ನಾಗರೀಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

ಪೀಣ್ಯ- ಯಶವಂತಪುರ ಮೆಟ್ರೋ
* ಶ್ರೀರಾಮಪುರ ಬಳಿ ಮೆಟ್ರೊ ನಿಲ್ದಾಣದಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕ ರೂಪೇಶ್ ಸಿಂಗ್ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ನಾಲ್ಕು ದಿನ ನೋವು ತಿಂದು ಸಾವನ್ನಪ್ಪಿದ್ದರು. * ಪೀಣ್ಯ- ಯಶವಂತಪುರ ಮೆಟ್ರೋ ಕಾಮಗಾರಿಗೆ ಒಳಪಡುವ ತುಮಕೂರು ರಸ್ತೆ ಜಾಲಹಳ್ಳಿ ಕ್ರಾಸ್ ಬಳಿ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕ್ರೇನ್ ಕುಸಿದು ಬಿದ್ದು ತಮಿಳುನಾಡಿನ ವಾಣಿಯಂಬಾಡಿ ಮೂಲದ ಗೋವಿಂದರಾಜು ಮೃತಪಟ್ಟಿದ್ದರು.

ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ
ಅಂಬೇಡ್ಕರ್ ವೀದಿಯಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗ ಕಾಮಗಾರಿಗೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ನೆಹರು ಹಾಗೂ ಸುಭಾಷ್ ಚಂದ್ರಬೋಸ್ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ. ಆದರೆ, ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ದಲಿತ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಕೂಡಾ ಸುಮ್ಮನಾಗಿತ್ತು.
* ನೂರಾರು ವರ್ಷಗಳಿಂದಲೂ ಇದ್ದ ಅಂಗಡಿಗಳು, ತಲೆತಲಾಂತರದಿಂದ ವಾಸವಿದ್ದ ವಸತಿ ಕಟ್ಟಡಗಳು, ಸದಾ ಹಸಿರಿನಿಂದ ನಳನಳಿಸುತ್ತಿದ್ದ ಗಿಡಮರಗಳು, ಅಲ್ಲಿ ವಾಸವಿದ್ದ ಪಕ್ಷಿ ಜೀವ ಜಂತುಗಳು ಮೆಟ್ರೊ ರೈಲಿಗೆ ಬಲಿಯಾಗಿದೆ. ಮನೆ ಕಳೆದುಕೊಂಡವರಿಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ.

ಸುರಕ್ಷತೆ ಯಾರು ಹೊಣೆ
ಬಿಎಂಆರ್ ಸಿಎಲ್ ಮೆಟ್ರೋ ಯೋಜನೆ ಕಾಮಗಾರಿ ಸುರಕ್ಷತೆ ಬಗ್ಗೆ ಮೊದಲಿನಿಂದಲೂ ಅಪಸ್ವರ ಕೇಳಿ ಬರುತ್ತಲೇ ಇದೆ. ಕಾರ್ಮಿಕರ ಸುರಕ್ಷತೆ ಬಗ್ಗೆ ಆರ್ ಟಿಐ ಕಾರ್ಯಕರ್ತ ಸ್ಯಾಮುಯಲ್ ಸತ್ಯಶೀಲನ್ ಎಂಬುವರ ತಂಡ ಸುಮಾರು 2 ವರ್ಷ ಅಧ್ಯಯನ ನಡೆಸಿ ವರದಿಯನ್ನು ತೆಗೆದುಕೊಂಡು ಕರ್ನಾಟಕ ಕಾರ್ಮಿಕ ಇಲಾಖೆಗೆ ಸಲ್ಲಿಸಿತ್ತು. ಆದರೆ, ಯಾವುದೇ ಕ್ರಮ ಜರುಗಿಲ್ಲ.
1970ರ ಗುತ್ತಿಗೆದಾರ ಕಾರ್ಮಿಕ ಕಾಯ್ದೆ, ಕಟ್ಟಡ ನಿರ್ಮಾಣ ಕಾರ್ಮಿಕರ ಕಾಯ್ದೆ 1996ರ ನಿಮಯಗಳನ್ನು ಬಿಎಂಆರ್ ಸಿಎಲ್ ಮೀರಿದೆ ಎಂದು ಸತ್ಯಶೀಲನ್ ಹೇಳಿದ್ದಾರೆ. ಕಾರ್ಮಿಕರ ಜೀವಕ್ಕೆ ಬೆಲೆ ನೀಡಿದೆ ಬಿಎಂಆರ್ ಸಿಎಲ್ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಕಾಮಗಾರಿ ವಿಳಂಬಕ್ಕೂ ಕಾರ್ಮಿಕರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಸತ್ಯಶೀಲನ್ ಹೇಳಿದ್ದಾರೆ.












Click it and Unblock the Notifications