Production churn: ಬೆಂಗಳೂರಿನಲ್ಲಿ ಮೇ 30, 31ಕ್ಕೆ 'ಉತ್ಪಾದನಾ ಮಂಥನ್'
ಬೆಂಗಳೂರು, ಮೇ 05: ಕರ್ನಾಟಕವನ್ನು 'ಜಾಗತಿಕ ತಯಾರಿಕಾ ಕೇಂದ್ರ'ವನ್ನಾಗಿ ಅಭಿವೃದ್ಧಿಪಡಿಸಲು ಅದರ ಮುನ್ನೋಟ ಕುರಿತ ಈ ಎರಡು ದಿನಗಳ ಚಿಂತನ - ಮಂಥನ ಸಮಾವೇಶವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಆಯ್ದ ಪ್ರಮುಖ ತಯಾರಿಕಾ ವಲಯಗಳು ಮತ್ತು ನವೋದ್ಯಮಗಳ ಸಿಇಒ ಹಾಗೂ ಇತರ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದರು.
ರಾಜಧಾನಿ ಬೆಂಗಳೂರಿನಲ್ಲಿ ಈ ತಿಂಗಳ ಅಂತ್ಯದಲ್ಲಿ ( ಮೇ 30 ಹಾಗೂ 31ಕ್ಕೆ) ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ 'ಉತ್ಪಾದನಾ ಮಂಥನ್' ಕುರಿತ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಸೊಮವಾರ ಇಲ್ಲಿ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಅಭಿವೃದ್ಧಿ ಪಥದ ದಿಕ್ಸೂಚಿ
ಕರ್ನಾಟಕವನ್ನು 'ಜಾಗತಿಕ ತಯಾರಿಕಾ ಕೇಂದ್ರ'ವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಉದ್ಯಮ ದಿಗ್ಗಜರ ಜೊತೆಗಿನ ವಿಚಾರ ಮಂಥನಕ್ಕೆ ಸಮಾವೇಶವು ವೇದಿಕೆ ಒದಗಿಸಲಿದೆ. ರಾಜ್ಯದ ಹೂಡಿಕೆ ಆಕರ್ಷಣೆ ಹಾಗೂ ಆರು ಪ್ರಮುಖ ತಯಾರಿಕಾ ವಲಯಗಳಲ್ಲಿ ರಾಜ್ಯವು ಕ್ರಮಿಸಬೇಕಾದ ಅಭಿವೃದ್ಧಿ ಪಥದ ದಿಕ್ಸೂಚಿ ಆಗಿರಲಿದೆ ಎಂದು ಸಚಿವರು ಹೇಳಿದರು.
ವಾಹನ ತಯಾರಿಕೆ, ವೈಮಾಂತರಿಕ್ಷ ಹಾಗೂ ರಕ್ಷಣೆ, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್, ಭಾರಿ ಯಂತ್ರೋಪಕರಣ, ಜೈವಿಕ ತಂತ್ರಜ್ಞಾನ, ಕೃಷಿ ಹಾಗೂ ಆಹಾರ ಸಂಸ್ಕರಣೆ ಕ್ಷೇತ್ರಗಳಲ್ಲಿನ ರಾಜ್ಯದ ಸಾಧನೆಯನ್ನು ಇನ್ನಷ್ಟು ಹೊಸ ಎತ್ತರಕ್ಕೆ ಕೊಂಡೊಯ್ಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉದ್ಯಮ ದಿಗ್ಗಜರು ಈ ಸಮಾವೇಶದಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
6 ವಲಯಗಳಿಗೆ ಬಂಡವಾಳ ಹೂಡಿಕೆ
ರಾಜ್ಯದ ಬಂಡವಾಳ ಹೂಡಿಕೆಯ ಆಕರ್ಷಣೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ವಲಯವಾರು ನೀಲನಕ್ಷೆ ರೂಪಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಪ್ರಮುಖ 6 ತಯಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವುದು ಮತ್ತು ತಯಾರಿಕಾ ಚಟುವಟಿಕೆ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉದ್ಯಮ ದಿಗ್ಗಜರು ಸರ್ಕಾರಕ್ಕೆ ನೀಲನಕ್ಷೆ ಸಿದ್ಧಪಡಿಸಿ ಕೊಡಲಿದ್ದಾರೆ ಎಂಬುದನ್ನು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications