Flower Show In Lalbagh: 7 ಲಕ್ಷ ಹೂಗಳಲ್ಲಿ ನಿರ್ಮಾಣವಾಗಲಿದೆ ವಿಧಾನಸೌಧ!
ಬೆಂಗಳೂರು, ಜುಲೈ 31: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಲಾಲ್‌ಬಾಗ್‌ನಲ್ಲಿ ವಿಧಾನಸೌಧ ನಿರ್ಮಾಣವಾಗಲಿದೆ!.
ಇದೇನಪ್ಪಾ ಲಾಲ್‌ಬಾಗ್‌ನಲ್ಲಿ ವಿಧಾನಸೌಧ ಯಾಕೆ ಅಂದ್ಕೊಬೇಡಿ, 7 ಲಕ್ಷ ಹೂವುಗಳನ್ನು ಬಳಸಿ ವಿಧಾನಸೌಧದ ಪ್ರತಿಕೃತಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಧಾನಸೌಧ ಮಾತ್ರವಲ್ಲದೆ ಶಿವಪುರ ಸತ್ಯಾಗ್ರಹ ಸೌಧದ ಪ್ರತಿಕೃತಿಯನ್ನು ಸಹ ನಿರ್ಮಿಸಲಾಗುತ್ತಿದ್ದು ಇದಕ್ಕೆ 3 ಲಕ್ಷ ಹೂವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಎರಡೂ ಪ್ರತಿಕೃತಿಗಳನ್ನು ನಿರ್ಮಿಸಲು 10 ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಬಳಸಲಾಗುತ್ತಿದೆ.

ತೋಟಗಾರಿಕಾ ಇಲಾಖೆಯು ತನ್ನ 214 ನೇ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಕಟ್ಟಿರುವ ನಾಡಿನ ಹೆಮ್ಮೆ, ಶಕ್ತಿ ಕೇಂದ್ರ ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹ ಪ್ರತಿಕೃತಿ ನಿರ್ಮಾಣಕ್ಕೆ 50 ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.
5.2 ಲಕ್ಷ ಗುಲಾಬಿ ಹೂವು ಬಳಕೆ
ಲಾಲ್‌ಬಾಗ್‌ನ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ ಮಾತನಾಡಿ, ಮಾಜಿ ಸಿಎಂ ಮತ್ತು ಅವರ ಕೊಡುಗೆಯ ಗೌರವಾರ್ಥವಾಗಿ ಗಾಜಿನ ಮನೆಯಲ್ಲಿ ವಿಧಾನಸೌಧದ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತಿದೆ. ವಿಧಾನಸೌಧದ ಪ್ರತಿಕೃತಿಯನ್ನು ತಯಾರಿಸಲು ಎರಡು ಲಕ್ಷ ಸೇವಂತಿಗೆ ಮತ್ತು 5.2 ಲಕ್ಷ ಗುಲಾಬಿ ಮತ್ತು ಶಿವಪುರ ಸತ್ಯಾಗ್ರಹ ಸೌಧ ಮಾಡಲು 3 ಲಕ್ಷ ಸೇವಂತಿಗೆ ಬಳಸಲಾಗುವುದು ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆಗಸ್ಟ್ 4 ರಿಂದ 12 ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದ್ದು, ಆರು ದಿನಗಳ ನಂತರ ವಿಧಾನಸೌಧದ ಪ್ರತಿಕೃತಿಗೆ ಬಳಸಿದ ಸುಮಾರು 3.6 ಲಕ್ಷ ಹೂವುಗಳನ್ನು ತಾಜಾ ಹೂವುಗಳಿಂದ ಬದಲಾಯಿಸಲಾಗುವುದು ಎಂದು ತಿಳಿಸಿದರು. ಅದೇ ರೀತಿ ಶಿವಪುರ ಸತ್ಯಾಗ್ರಹ ಸೌಧಕ್ಕೆ ಬಳಸಲಾಗಿದ್ದ 1.75 ಲಕ್ಷ ಸೇವಂತಿಗೆಯನ್ನು ಆಗಸ್ಟ್ 10 ರಂದು ತಾಜಾ ಹೂವುಗಳಿಂದ ಅಲಂಕರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೆಜಿಎಫ್ ಪ್ರತಿಕೃತಿ!
ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹ ಸೌಧ ಮಾತ್ರವಲ್ಲದೆ ಕೆಜಿಎಫ್‌ನಲ್ಲಿನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ನ ಚಿನ್ನದ ಬ್ಲಾಕ್‌ಗಳು, ಮರದ ಮತ್ತು ಕಬ್ಬಿಣದ ಎರಕಹೊಯ್ದ ಪ್ರತಿಕೃತಿಗಳನ್ನು ಕೂಡ ನಿರ್ಮಾಣ ಮಾಡಲಾಗುತ್ತದೆ. 1947 ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ನಂತ ಕೋಲಾರ ಗೋಲ್ಡ್ ಫೀಲ್ಡ್‌ಗೆ ಹನುಮಂತಯ್ಯ ಅವರು ಬದಲಾವಣೆ ತಂದಿದ್ದರ ನೆನಪಿಗಾಗಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ.
ಏತನ್ಮಧ್ಯೆ, ಪ್ರದರ್ಶನಕ್ಕಾಗಿ ಹೂವುಗಳು ಮತ್ತು ಸಸ್ಯಗಳನ್ನು ನೀಲಗಿರಿ, ಪುಣೆ, ತಿರುವನಂತಪುರಂ ಮತ್ತು ಕೇರಳದ ಇತರ ಭಾಗಗಳಿಂದ ತರಿಸಿಕೊಳ್ಳಲಾಗುತ್ತಿದೆ. ಪ್ರದರ್ಶನದ ಜವಾಬ್ದಾರಿಯನ್ನು 13 ಸಮಿತಿಗಳು ವಹಿಸಿಕೊಂಡಿವೆ. ಪೊಲೀಸರು, ಗೃಹರಕ್ಷಕ ದಳ ಹಾಗೂ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಲಾಲ್‌ಬಾಗ್‌ನ ಸುತ್ತಮುತ್ತಲು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. 12 ದಿನಗಳ ಪ್ರದರ್ಶನಕ್ಕೆ ಸರಕಾರ 2.5 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.












Click it and Unblock the Notifications