ಬಿಜೆಪಿಯಿಂದ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಎನ್.ರವಿಕುಮಾರ್
ಬೆಂಗಳೂರು, ಆಗಸ್ಟ್ 23: ಬಿಜೆಪಿ ವತಿಯಿಂದ ಆಗಸ್ಟ್ 15ರ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಎಲ್ಲ ತಾಲ್ಲೂಕು, ಗ್ರಾಮ ಪಂಚಾಯಿತಿ, ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರ ಯೋಧರ, ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸುವ ಕಾರ್ಯವನ್ನು ದೇಶ ಮತ್ತು ಕರ್ನಾಟಕದಾದ್ಯಂತ ನಡೆಸಲಿದೆ ಎಂದು ಹೇಳಿದರು.

ಆ. 15ರಂದು ಬೆಳಿಗ್ಗೆ ಪಕ್ಷದ ರಾಜ್ಯದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರು ಧ್ವಜಾಹೋಹಣ ಮಾಡಲಿದ್ದಾರೆ. ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಲಿದ್ದಾರೆ. ಜಿಲ್ಲೆ, ತಾಲೂಕುಗಳಲ್ಲಿ ಶಾಸಕರು, ಸಂಸದರು, ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದರು.
ಆ.14ರ ರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಖುಷಿ, ಸಂತಸದ ಜೊತೆಗೇ ಅಷ್ಟೇ ಪ್ರಮಾಣದಲ್ಲಿ ದುಃಖ ಆಗಿತ್ತು. ಭಾರತ ವಿಭಜನೆ ಮೂಲಕ ದೇಶ ಎರಡು ತುಂಡಾದ ಆ ದಿನವನ್ನು, ಭಾರತ ವಿಭಜನೆಯ ದುರಂತ ಕಥೆಯನ್ನು ತಿಳಿಸುವ ಉದ್ದೇಶದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಭಜನೆಯ ದುರಂತ ಕಥೆ ಸಾರುವ ಪ್ರದರ್ಶನ ಆಯೋಜಿಸಲಾಗಿದೆ. ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಸಚಿವ ಆರ್.ಆಶೋಕ್ ಈ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಪಿ.ಸಿ.ಮೋಹನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕತ ಮಂಗಳೂರಿನ ಹಾಜಬ್ಬ ಅವರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
14ರ ಸಂಜೆ ಪಂಜಿನ ಮೌನ ಮೆರವಣಿಗೆ ನಡೆಸಲಾಗುವುದು. ವಿಭಜನೆಯ ಕಥೆ ಕೇಳುವ ವ್ಯವಸ್ಥೆ, ಭಾಷಣ ಏರ್ಪಡಿಸಲಾಗಿದೆ ಎಂದ ಅವರು, ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿದ್ದೇವೆ. ಭಾರತದ ಒಗ್ಗೂಡಿಸುವಿಕೆ, ಪ್ರಪಂಚದಲ್ಲಿ ಅಗ್ರ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು ಕರೆ ನೀಡಿದ್ದಾರೆ ಎಂದು ಹೇಳಿದರು.
ದೇಶಾದ್ಯಂತ 6 ಲಕ್ಷ ಪಂಚಾಯಿತಿಗಳಿಂದ ಮಣ್ಣು ಸಂಗ್ರಹಿಸಲಾಗುವುದು. ಕಿತ್ತೂರು, ಮೈಸೂರು, ಬೆಂಗಳೂರು ಸೇರಿ 7,500 ಐತಿಹಾಸಿಕ ಸ್ಥಳಗಳಿಂದ ಮಣ್ಣು ಸಂಗ್ರಹಿಸಲಾಗುತ್ತದೆ. ಅದನ್ನು ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ದೆಹಲಿ ಕರ್ತವ್ಯ ಪಥದ ವಾಟಿಕಾ ಪಾರ್ಕ್‍ನಲ್ಲಿ ಹಾಕಿ ಉದ್ಯಾನ ನಿರ್ಮಿಸಲಾಗುತ್ತದೆ. ಆ.30ರಂದು ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮ ನೆರವೇರಿಸಲಿದ್ದಾರೆ ಎಂದು ವಿವರಿಸಿದರು.
ಮನೆ ಮನೆಯಲ್ಲೂ ತ್ರಿವರ್ಣಧ್ವಜದ (ಹರ್ ಘರ್ ತಿರಂಗ) ಮೂಲಕ ದೇಶಭಕ್ತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ಬಿಜೆಪಿ ಯೋಜಿಸಿದೆ. ದೇಶ, ರಾಜ್ಯದಲ್ಲಿ ಲಕ್ಷಾಂತರ ಕಾರ್ಯಕರ್ತರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದರು.












Click it and Unblock the Notifications