ಬೆಂಗಳೂರಿನಿಂದ ಈ ಭಾಗಕ್ಕೆ ರೈಲ್ವೆ ಸಂಪರ್ಕ ಹೆಚ್ಚಳ: ವಿ. ಸೋಮಣ್ಣ, ಕನ್ನಡಿಗರ ವಿರೋಧ
ಬೆಂಗಳೂರಿನಿಂದ ಭಾರತದ ಪೂರ್ವ ಭಾಗಕ್ಕೆ ರೈಲ್ವೆ ಸಂಪರ್ಕ ಹೆಚ್ಚಿಸಲಾಗಿದೆ. ಈ ವಿಚಾರವನ್ನು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಕನ್ನಡಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರೈಲು ಸಂಖ್ಯೆ ಹೆಚ್ಚಳವಾಗಿಲ್ಲ. ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನ ನಡುವೆ ರೈಲುಗಳ ಸಂಖ್ಯೆ ಹೆಚ್ಚಳ ಮಾಡಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಆದರೆ ಈ ರೀತಿ ಇರುವಾಗ ಬೆಂಗಳೂರಿನಿಂದ ಭಾರತದ ಪೂರ್ವ ಭಾಗಕ್ಕೆ ರೈಲುಗಳ ಸಂಖ್ಯೆ ಹೆಚ್ಚಳ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರಿನಿಂದ ಭಾರತದ ಪೂರ್ವ ಭಾಗಕ್ಕೆ ರೈಲ್ವೆ ಸಂಪರ್ಕ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಬೆಂಗಳೂರಿನಿಂದ ಭಾರತದ ಪೂರ್ವ ಭಾಗಕ್ಕೆ ರೈಲ್ವೆ ಸಂಪರ್ಕ ಹೆಚ್ಚಿಸಲಾಗಿದ್ದು, ಪಶ್ಚಿಮ ಬಂಗಾಳದ ಬಾಲೂರ್ ಘಾಟ್ ಮತ್ತು ರಾಧಿಕಾಪುರವನ್ನು ಸಂಪರ್ಕಿಸುವ ಎರಡು ಎಕ್ಸ್‌ಪ್ರೆಸ್ ರೈಲುಗಳ ಜೊತೆಗೆ ಬೆಂಗಳೂರಿನಿಂದ ಅಲಿಪುರ್ ದುವಾರ್‌ಗೆ ಒಂದು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಅನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ನೂತನ ರೈಲುಗಳ ವಿವರ
1. ಎಸ್ಎಂವಿಟಿ ಬೆಂಗಳೂರು - ರಾಧಿಕಾಪುರ್ ಎಕ್ಸ್‌ಪ್ರೆಸ್ ರೈಲು (ರೈ.ಸಂ 16223/16224): ಈ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಪ್ರತಿ ಗುರುವಾರ ಬೆಂಗಳೂರಿನಿಂದ ಹೊರಡಲಿದೆ.
2. ಎಸ್ಎಂವಿಟಿ ಬೆಂಗಳೂರು - ಬಾಲೂರ್ ಘಾಟ್ ಎಕ್ಸ್‌ಪ್ರೆಸ್ ರೈಲು (ರೈ.ಸಂ 16523/16524): ಈ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಪ್ರತಿ ಬುಧವಾರ ಬೆಂಗಳೂರಿನಿಂದ ಹೊರಡಲಿದೆ.
3. ಎಸ್ಎಂವಿಟಿ ಬೆಂಗಳೂರು - ಅಲಿಪುರ್ ದುವಾರ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು (ರೈ.ಸಂ 16597/16598) : ಈ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಪ್ರತಿ ಶನಿವಾರ ಬೆಂಗಳೂರಿನಿಂದ ಹೊರಡಲಿದೆ.
ಈ ರಾಜ್ಯಗಳಲ್ಲಿ ಪ್ರಯಾಣಿಕರಿಗೆ ಅನುಕೂಲ
ಇನ್ನು ಬೆಂಗಳೂರಿನಿಂದ ಭಾರತದ ಪೂರ್ವ ಭಾಗಕ್ಕೆ ರೈಲ್ವೆ ಸಂಪರ್ಕ ಹೆಚ್ಚಳ ಮಾಡಿರುವುದರಿಂದ ಈ ರೈಲುಗಳು ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲಿವೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಕನ್ನಡಿಗರು ಹೇಳಿದ್ದೇನು ?
ಕುಶ್ರಿಕ ಎವಿ ಎನ್ನುವವರು, ಕರ್ನಾಟಕದ ಒಳಗಡೆ ಸಂಚರಿಸುವ ರೈಲುಗಳನ್ನು ಕೊಡಿ ಎಂದು ಕೇಳಿದರೆ ವಲಸಿಗರ ಉದ್ಧಾರಕ್ಕೆ ದಿನಕ್ಕೊಂದು ರೈಲು ಕೊಡ್ತಾ ಇದ್ದೀರಾ. ಈ ಸಾಧನೆ ಮಾಡೋಕೆ ನೀವು ಕರ್ನಾಟಕದಿಂದ ಸಂಸದ ಮಂತ್ರಿ ಆಗಬೇಕಿತ್ತಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಮಾಧವ ವಿ ಬಿ ಎನ್ನುವವರು, ನಾವು ಕರ್ನಾಟಕದ ಊರುಗಳಿಗೆ ಬೆಂಗಳೂರಿನಿಂದ ಹೊಸ ರೈಲು ಕೊಡಿ ಅಂದರೆ, ಬಂಗಾಳ, ಅಸ್ಸಾಮಿಗೆ ಕೊಟ್ಟಿದೀರಲ್ಲ. ಬೀದರ್, ಕಲಬುರಗಿ, ಕುಷ್ಟಗಿ ಜನಗಳಿಗೆ ಅನುಕೂಲ ಆಗೋದು, ಸುಮಾರು ನಾಲ್ಕು ವರ್ಷಗಳಿಂದ ಕೇಳುತ್ತಿದೇವೆ. ಆದರೆ ರೈಲ್ವೆ ಬೋರ್ಡ್ ಇನ್ನು ಅನುಮತಿ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications