ಕರ್ನಾಟಕದ ಆದಾಯ ತೆರಿಗೆ ಸಂಗ್ರಹ ಗಣನೀಯ ಏರಿಕೆ
ಬೆಂಗಳೂರು, ಮೇ 6: ವಿತ್ತ ಖಾತೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಈ ವರ್ಷದ (ಮಾರ್ಚ್ 2014) ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ ವಲಯ ಇದೇ ಮಾರ್ಚ್ ಅಂತ್ಯಕ್ಕೆ 59,000 ಕೋಟಿ ರೂ ಆದಾಯ ತೆರಿಗೆ ಸಂಗ್ರಹ ಮಾಡಿ ತಮಿಳುನಾಡನ್ನು 4ನೇ ಸ್ಥಾನಕ್ಕೆ ತಳ್ಳಿದೆ. ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಆಟೋ ಮೊಬೈಲ್ ಉತ್ಪಾದನೆ, ಜವಳಿ ವಲಯದಲ್ಲಿ ಕರ್ನಾಟಕ ತಮಿಳುನಾಡಿಗಿಂತ ಉತ್ತಮ ಸಾಧನೆ ಮಾಡಿರುವುದೇ ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿರುವುದಕ್ಕೆ ಮುಖ್ಯ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತೆರಿಗೆ ಸಂಗ್ರಹದಲ್ಲಿ ತಮಿಳುನಾಡನ್ನು ಹಿಂದಿಕ್ಕಿರುವ ಕರ್ನಾಟಕ 3ನೆ ಸ್ಥಾನಕ್ಕೆ ಏರಿದೆ. ಆದಾಯ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿದ ಮೊದಲ ಎರಡು ವಲಯಗಳಲ್ಲಿ ಮುಂಬೈ ಮತ್ತು ದೆಹಲಿ ವಲಯ ಅಗ್ರಸ್ಥಾನ ಪಡೆದುಕೊಂಡಿವೆ. ತಮಿಳುನಾಡು ಮತ್ತು ಪಾಂಡಿಚೇರಿ ವಲಯ ಒಟ್ಟಿಗೆ ಈ ವರ್ಷ ಕೇವಲ 42,500 ಕೋಟಿ ರೂ ಮಾತ್ರ ತೆರಿಗೆ ಸಂಗ್ರಹ ಮಾಡಿವೆ.
ಕಳೆದ ವರ್ಷಕ್ಕಿಂತ ಶೇ. 14ರಷ್ಟು ಅಧಿಕವಾಗಿದೆ. ಆದರೆ ಆಟೋ ಮೊಬೈಲ್ ಉತ್ಪಾದನೆ, ಜವಳಿ ವಲಯದಲ್ಲಿ ತಮಿಳುನಾಡು ಮತ್ತೆ ಉತ್ತಮ ಪ್ರಗತಿ ಕಾಯ್ದುಕೊಂಡು ಮುಂದಿನ ವರ್ಷದ ವೇಳೆಗೆ ಕರ್ನಾಟಕಕ್ಕಿಂತ ಮುಂದಾಗಲಿದೆ ಎಂದು ತಮಿಳುನಾಡು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಅದರಲ್ಲೂ ವಿಶೇಷವಾಗಿ ತಮಿಳುನಾಡು ವಲಯ ನಿಗದಿತ ಗುರಿಯಂತೆ 40,524 ಕೋಟಿ ರೂ. ಆದಾಯ ತೆರಿಗೆ ಸಂಗ್ರಹ ಮಾಡಬೇಕಾಗಿತ್ತು. ಆದರೆ, ಮಾರ್ಚ್ ಅಂತ್ಯಕ್ಕೆ ಕೊನೆಗೊಂಡಿರುವ ಅಂಕಿ-ಅಂಶಗಳ ಪ್ರಕಾರ, ತಮಿಳುನಾಡು ವಲಯ 37,271 ಕೋಟಿ ರೂ. ಮಾತ್ರ ಸಂಗ್ರಹ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications