ಕೆಂಪೇಗೌಡರ ಕಂಚಿನ ಪ್ರತಿಮೆ ಉದ್ಘಾಟನೆ: ಒಕ್ಕಲಿಗ ಸಂಘಟನೆಗಳ ಜತೆ ಸಚಿವರ ಸಭೆ
ಬೆಂಗಳೂರು: ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಚಿವರಾದ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮತ್ತು ಆರ್ ಅಶೋಕ ಅವರು ಒಕ್ಕಲಿಗ ಸಮುದಾಯದ ಸಂಘಸಂಸ್ಥೆಗಳ ಮುಖಂಡರ ಜತೆ ಸಭೆ ನಡೆಸಿದರು.
ಉದ್ದೇಶಿತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ಚಾರಿತ್ರಿಕ ರೀತಿಯಲ್ಲಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಧಾನಸೌಧದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಚಿವರು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಅಶ್ವತ್ಥ ನಾರಾಯಣ ಅವರು, 11ರ ಸಭೆಗೆ ಭಾರಿ ಪ್ರಮಾಣದ ಜನ ಆಗಮಿಸಲಿದ್ದಾರೆ. ನೀವು ಕೂಡ ಹೆಚ್ಚು ಜನರನ್ನು ಕರೆತರುವುದರ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಪ್ರಧಾನಿಗಳ ಕಾರ್ಯಕ್ರಮವಾದ್ದರಿಂದ ಬಿಗಿ ಭದ್ರತಾ ವ್ಯವಸ್ಥೆ ಇರಲಿದೆ. ಆದ್ದರಿಂದ ಸಾರ್ವಜನಿಕರು ಅಂದು 11 ಗಂಟೆಯ ಹೊತ್ತಿಗೆ ಸಮಾರಂಭದ ಸ್ಥಳವನ್ನು ತಲುಪಬೇಕು ಎಂದು ಅವರು ಮನವಿ ಮಾಡಿಕೊಂಡರು.
ಪ್ರತಿಮೆ ಉದ್ಘಾಟನೆಯ ಅಂಗವಾಗಿ ನಡೆಯುತ್ತಿರುವ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನದಲ್ಲಿ ಇರುವ ರಥಗಳು ನ.9ರಂದು ಬೆಂಗಳೂರಿಗೆ ಬರಲಿವೆ. ಈ ಮೃತ್ತಿಕೆಯನ್ನು ಕೆಂಪೇಗೌಡರ ಪ್ರತಿಮೆಯ ಗೋಪುರಗಳು ಮತ್ತು ಥೀಮ್ ಪಾರ್ಕಿನಲ್ಲಿ ಬಳಸಿ ಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ್ ದೀಪ್, ನಿರ್ದೇಶಕರಾದ ತಲಕಾಡು ಚಿಕ್ಕರಂಗೇಗೌಡ, ಗಂಗಹನುಮಯ್ಯ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.

ಹಂಪಿ, ಕೂಡಲಸಂಗಮ, ಕಿತ್ತೂರಿಗೆ ನಾಳೆ ಸಚಿವರ ತಂಡ:
ಉದ್ದೇಶಿತ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆಗೆ ಪೂರಕವಾಗಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನವು ಶುಕ್ರವಾರ ಹಂಪಿ, ಕೂಡಲಸಂಗಮ ಮತ್ತು ಕಿತ್ತೂರುಗಳಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ, ಸದಸ್ಯರಾಗಿರುವ ಕಂದಾಯ ಸಚಿವ ಆರ್ ಅಶೋಕ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 9.30ಕ್ಕೆ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ, 11.30ಕ್ಕೆ ಕೂಡಲಸಂಗಮದ ಸಂಗಮೇಶ್ವರ ದೇಗುಲದಲ್ಲಿ ಮತ್ತು ಮಧ್ಯಾಹ್ನ 1.30ಕ್ಕೆ ಕಿತ್ತೂರು ಅಭಿಯಾನ ನಡೆಯಲಿದೆ.












Click it and Unblock the Notifications