Katha: ಈ ಜಿಲ್ಲೆಯಲ್ಲಿ "ಖಾತಾ- ನಕ್ಷೆ ಮಂಜೂರಾತಿ" ನಿರ್ಬಂಧ, ಯಾವುದಕ್ಕೆ ಅನ್ವಯ
ರಾಜ್ಯದ ಪ್ರಮುಖ ಜಿಲ್ಲೆಯೊಂದರಲ್ಲಿ ಖಾತಾ - ನಕ್ಷೆ ಮಂಜೂರಾತಿಗೆ ಪಾಲಿಕೆ ಆಯುಕ್ತರು ಖಾತಾ - ನಕ್ಷೆ ಮಂಜೂರಾತಿ ಮಾಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ. ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದ್ದು, ಈ ಕ್ರಮಕ್ಕೆ ಮುಂದಾಗಿದ್ದಾರೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಕೆಲವು ನಿರ್ದಿಷ್ಟ ಪ್ರದೇಶಕ್ಕೆ ಸಂಬಂಧಿಸಿ ಖಾತಾ - ನಕ್ಷೆ ಮಂಜೂರಾತಿ ಪ್ರಕ್ರಿಯೆಗೆ ನಿರ್ಬಂಧ ವಿಧಿಸಲಾಗಿದೆ. ಬಿಬಿಎಂಪಿಯ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ನಿರ್ದೇಶನ ನೀಡಿದ್ದಾರೆ. ಬೆಂಗಳೂರಿನ ಅಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಪರಿವರ್ತನೆ ಆಗದೆ ಇರುವಂತಹ ಪ್ರದೇಶದ ನಿವೇಶನಗಳಿಗೆ ಸಂಬಂಧಿಸಿದಂತೆ ಈಗಾಗಲೇ ಖಾತಾ ಮಾಡಿಕೊಡಲಾಗಿದೆ. ಆದರೆ, ಇವುಗಳಿಗೆ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ (ಅನುಮತಿ)ಯನ್ನು ನೀಡದಂತೆ ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗ ನಿರ್ದೇಶನ ನೀಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) 20 ಸಾವಿರ ಚದರ ಮೀ.ಗಿಂತಲೂ ಕಡಿಮೆ ವಿಸ್ತೀರ್ಣವಿರುವ ಪ್ರದೇಶಗಳಿಗೆ ನೇರವಾಗಿ ಖಾತಾ ನೀಡಿ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಈ ರೀತಿ ಮಂಜೂರಾತಿಗೆ ಅವಕಾಶ ನೀಡುವ ಮೊದಲು ಬೆಂಗಳೂರು ನಗರ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗಿರುವ ಜಾಗಕ್ಕೆ ಅಥವಾ ನಿರ್ದಿಷ್ಟ ಪ್ರದೇಶಕ್ಕೆ ಕೆಟಿಸಿಪಿ ಕಾಯ್ದೆಯಡಿ ಅನುಮೋದನೆ ಪಡೆದುಕೊಳ್ಳಬೇಕಾಗಿರುತ್ತದೆ. ಅನುಮತಿ ಪಡೆದುಕೊಳ್ಳದೆ ಮಂಜೂರಾತಿ ನೀಡಿದರೆ, ಅದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗಿದೆ.
ಅರ್ಕಾವತಿ ಬಡಾವಣೆಗೆ ಸಹ ಅನುಮತಿ ಇಲ್ಲ: ಇನ್ನು ಇದೇ ಸಂದರ್ಭದಲ್ಲಿ ಬಿಡಿಎನಿಂದ ಅಭಿವೃದ್ಧಿ ಮಾಡಲಾಗಿರುವ ಅರ್ಕಾವತಿ ವಸತಿ ಬಡಾವಣೆಯ ವ್ಯಾಪ್ತಿಯಲ್ಲಿ (ಪ್ರದೇಶದಲ್ಲಿ) ಅಧಿಸೂಚಿಸಲಾಗಿರುವ ಹಾಗೂ ನ್ಯಾಯಮೂರ್ತಿ ಕೇಶವನಾರಾಯಣ ಸಮಿತಿಯ ಪರಿಶೀಲನೆಗೆ ಒಳಪಟ್ಟಿರುವ ಜಮೀನುಗಳಿಗೂ ಬಿಬಿಎಂಪಿಯಿಂದ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು. ಇದಕ್ಕೆ ಸಂಬಂಧಿಸಿದಂತೆ ಅನುಮತಿ ನೀಡಬಾರದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಭೂ ಪರಿವರ್ತನೆಯಾದ ಜಮೀನುಗಳಿಗೆ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಯಿಂದ ವಿನ್ಯಾಸ ನಕ್ಷೆ ಮಂಜೂರಾಗದೆ ಇದ್ದರೆ, ಆ ನಿರ್ದಿಷ್ಟ ನಿವೇಶನಗಳಿಗೆ ಖಾತಾ ಹಾಗೂ ನಕ್ಷೆ ಮಂಜೂರಾಯಿ ನೀಡುವಂತಿಲ್ಲ. ವಿನ್ಯಾಸ ನಕ್ಷೆ ಅನುಮೋದನೆ ಪಡೆದುಕೊಂಡ ಮೇಲೇ ಖಾತಾ ಹಾಗೂ ನಕ್ಷೆ ಮಂಜೂರಾತಿ ನೀಡಬೇಕು ಎಂದು ಬಿಡಿಎ ಅಧಿಕಾರಿಗಳು ಬಿಬಿಎಂಪಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಭೂ ಪರಿವರ್ತನೆ ಮಾಡದೆ ಇರುವಂತಹ ಪ್ರದೇಶದ ನಿವೇಶನಗಳಿಗೆ ಸಂಬಂಧಿಸಿದಂತೆ ಖಾತಾ ಹಾಗೂ ನಕ್ಷೆ ಮಂಜೂರಾತಿಯನ್ನು ಬಿಬಿಎಂಪಿಯಿಂದ ನೀಡಬಾರು ಎಂದು ಹೇಳಲಾಗಿದೆ. ಅಲ್ಲದೇ ಈ ವಿಷಯಕ್ಕೆ ಒಳಪಟ್ಟಂತೆ ಬಿಬಿಎಂಪಿಯ ನಗರ ಯೋಜನಾ ವಿಭಾಗದ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ನಿವೇಶನಗಳಿಗೆ ಮಾತ್ರ ನಕ್ಷೆ ಮಂಜೂರಾತಿ ನೀಡಬಹುದು: ಇನ್ನು ಬಿಬಿಎಂಪಿಯು ಕೆಲವು ನಿರ್ದಿಷ್ಟ ನಿವೇಶನಗಳಿಗೆ ಮಾತ್ರ ನಕ್ಷೆ ಮಂಜೂರಾತಿ ನೀಡಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಹೇಳಿದ್ದಾರೆ. ಅವುಗಳಲ್ಲಿ ಪ್ರಮುಖ ನಿವೇಶನಗಳ ಮಾಹಿತಿ ಈ ರೀತಿ ಇದೆ. ಬಿಬಿಎಂಪಿಯಿಂದ ಈಗಾಗಲೇ ನಕ್ಷೆ ಮಂಜೂರಾತಿ ನೀಡಲಾಗಿರುವಂತಹ ನಿವೇಶನಗಳಿಗೆ ಪರಿಷ್ಕೃತ ನಕ್ಷೆ ಮಂಜೂರಾತಿ, ಹೆಚ್ಚುವರಿ ಕಟ್ಟಡ ನಿರ್ಮಾಣದ ನಿವೇಶನಗಳು,ಸಿಟಿಎಸ್ (cts) ಸಂಖ್ಯೆ ಹೊಂದಿರುವ ನಿವೇಶನ, ಎ- ಖಾತಾದ ಅಡಿಯಲ್ಲಿ ಬರುವ ನಿವೇಶನಗಳು, ಬಿಡಿಎ ಈಗಾಗಲೇ ಅಭಿವೃದ್ಧಿ ಮಾಡಿರುವಂತಹ ಬಡಾವಣೆಯ ನಿವೇಶನಗಳು, ರಾಜ್ಯ ಸರ್ಕಾರದ ಅಂಗ ಸಂಸ್ಥೆಯಿಂದ ಅಭಿವೃದ್ಧಿಪಡಿಸಿದ್ದು, ಹಂಚಿಕೆ ಮಾಡಲಾಗಿರುವ ನಿರ್ದಿಷ್ಟ ಪ್ರದೇಶ ನಿವೇಶನಗಳು ಮತ್ತು ಕೆಟಿಸಿಪಿ ಕಾಯ್ದೆಯಡಿ ಮಂಜೂರಾಗಿರುವಂತಹ ಏಕ ನಿವೇಶನಗಳಿಗೆ ಮಾತ್ರವೇ ಬಿಬಿಎಂಪಿಯಿಂದ ಇನ್ಮುಂದೆ ನಕ್ಷೆ ಮಂಜೂರಾತಿ ನೀಡಬೇಕು ಎಂದು ಹೇಳಲಾಗಿದೆ.
ಇದರಲ್ಲಿ ಮತ್ತೊಂದು ಮುಖ್ಯವಾದ ಅಂಶವೆಂದರೆ, ಒಂದೊಮ್ಮೆ ಈಗಾಗಲೇ ಅನುಮೋದನೆ ಪಡೆದ ನಿವೇಶನಗಳಾಗಿದ್ದರೆ, ಖಾತಾ ಆಗಿದ್ದರೂ, ನಕ್ಷೆ ಮಂಜೂರಾತಿಗೆ ಸಂಬಂಧಿಸಿದಂತೆ ಅನುಮೋದನೆ ಕೊಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications