ಬೆಂಗಳೂರಲ್ಲಿ ಕಳೆದ 10 ದಿನಗಳಲ್ಲಿ 543 ಮಕ್ಕಳಿಗೆ ಕೊರೊನಾ ಸೋಂಕು
ಬೆಂಗಳೂರು, ಆಗಸ್ಟ್ 13: ಬೆಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಬರೋಬ್ಬರಿ 543 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವ ಮಾಹಿತಿ ಲಭ್ಯವಾಗಿದೆ.
ಲಾಕ್‌ಡೌನ್ ಸಡಿಲಿಕೆ ಆದ ಬಳಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ತಲುಪಿದೆ.ಆದರೆ, ಮಕ್ಕಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರವೇ ಕಳೆದ 11 ದಿನಗಳಲ್ಲಿ 543 ಮಕ್ಕಳು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ.
ನಗರದಲ್ಲಿ 0-18 ವಯಸ್ಸಿನ 543 ಮಕ್ಕಳಲ್ಲಿ ಆಗಸ್ಟ್ 1 ರಿಂದ 11 ರ ನಡುವೆ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಜುಲೈ ತಿಂಗಳಿನಲ್ಲಿ 510 ಮಕ್ಕಳಲ್ಲಿ ಸೋಂಕು ಪತ್ತೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಈ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ ಎಂಬ ಸೂಚನೆಯನ್ನು ಇದು ನೀಡುತ್ತಿದೆ.

ಬಿಬಿಎಂಪಿ ಮಾಹಿತಿ ನೀಡಿರುವ ಪ್ರಕಾರ ಆಗಸ್ಟ್ 1 ಮತ್ತು 11 ರ ನಡುವೆ, 0-9 ವರ್ಷ ವಯಸ್ಸಿನ 210 ಮಕ್ಕಳು ಮತ್ತು 10-18 ವರ್ಷ ವಯಸ್ಸಿನ 333 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದ್ದು, 270 ಬಾಲಕಿಯರು ಮತ್ತು 273 ಬಾಲಕರು ಸೇರಿ ಒಟ್ಟು 543 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.
ಪಾಸಿಟಿವಿಟಿ ಪ್ರಕರಣಗಳು ಶೇ.15 ದಾಟದೆ ಶೇ.12-14 ದೊಳಗೇ ಇದೆ. ಮಕ್ಕಳ ಕೋವಿಡ್ -19 ಪ್ರಕರಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಕಳೆದ ಜುಲೈ ತಿಂಗಳಿನಿಂದಲೂ ಪಾಟಿವಿಟಿ ದರದಲ್ಲಿ ಯಾವುದೇ ರೀತಿಯ ಬದಲಾವಣೆಗಳೂ ಕಂಡು ಬಂದಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಒಂದು ದಿನದಲ್ಲಿ 321 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1231795ಕ್ಕೆ ಏರಿಕೆಯಾಗಿದೆ. 5 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15928ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಜಿಲ್ಲೆಯಲ್ಲಿ 8193 ಸಕ್ರಿಯ ಪ್ರಕರಣಗಳಿವೆ.
ಈ ನಡುವೆ ಆಗಸ್ಟ್ 23 ರಿಂದ ಭೌತಿಕ ತರಗತಿಗಳ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಮಕ್ಕಳಿಗೆ ಇನ್ನೂ ಲಸಿಕೆ ನೀಡದ ಕಾರಣ ಪೋಷಕರು ಆತಂಕಕ್ಕೊಳಗಾಗಿದ್ದಾರೆ.
ನಗರದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಆದರೆ, ಪಾಟಿಸಿಟಿವಿಟಿ ದರ ಏರಿಕೆಯಾಗುತ್ತಿಲ್ಲ. ಒಂದು ಮಗುವಿಗೆ ಸೋಂಕು ದೃಢಪಟ್ಟಿದೆ ಎಂದರೆ, ಇಡೀ ಕುಟುಂಬಕ್ಕೂ ಸೋಂಕು ತಗಲುವ ಸಾಧ್ಯತೆಗಳಿವೆ ಎಂದು ಬಿಬಿಎಪಿ ವಿಶೇಷ ಆಯುಕ್ತ ರಂದೀಪ್ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಒಂದು ದಿನದಲ್ಲಿ 1857 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1950 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 30 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36911 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಗುರುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2924732ಕ್ಕೆ ಏರಿಕೆಯಾಗಿದೆ. ಒಟ್ಟು 2865067 ಸೋಂಕಿತರು ಗುಣಮುಖರಾಗಿದ್ದು. 22728 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.ಭಾರತದಲ್ಲಿ ಕೊರೊನಾ ಏರಿಳಿಕೆ ಎಂದಿನಂತೆ ಮುಂದುವರೆದಿದ್ದು, ದೇಶದಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 40,120 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 585 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.
ಶುಕ್ರವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,21,17,826ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,30,254ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,85,227ಕ್ಕೆ ತಲುಪಿದೆ.












Click it and Unblock the Notifications